ಹುಬ್ಬಳ್ಳಿಯಲ್ಲಿ ಯುವಜನೋತ್ಸವ – ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದ ಕಾಂಗ್ರೆಸ್

ಹುಬ್ಬಳ್ಳಿಯಲ್ಲಿ ಯುವಜನೋತ್ಸವ – ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸುತ್ತಿದೆ ಎಂದ ಕಾಂಗ್ರೆಸ್

ಹುಬ್ಭಳ್ಳಿಯಲ್ಲಿ ನಡೆಯಲಿರುವ ಯುವಜನೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರ ಹೆಸರನ್ನು ಕೈ ಬಿಡಲಾಗಿತ್ತು.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, “ಹುಬ್ಬಳ್ಳಿಯಲ್ಲೇ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿದೆ. ಅವರದ್ದೇ ಕ್ಷೇತ್ರದಲ್ಲಿ ಅವರನ್ನೇ ಕಡೆಗಣಿಸುತ್ತಿರುವುದು ಇದು ಎರಡನೇ ಬಾರಿ. ಬಿಎಸ್ ವೈ ವಿರುದ್ಧ ಕಟೀಲ್ + ಸಂತೋಷ್ ಜೋಡಿಯಾದರೆ, ಶೆಟ್ಟರ್ ವಿರುದ್ಧ ಬೊಮ್ಮಾಯಿ + ಜೋಶಿ ಜೋಡಿಯಾಗಿದ್ದಾರೆ!” ಎಂದು ರಾಜ್ಯ ಕಾಂಗ್ರೆಸ್ ಕುಹಕವಾಡಿದೆ.

ಇದನ್ನೂ ಓದಿ: ದೆಹಲಿ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ – ಆಕ್ರೋಶದ ಬೆನ್ನಲೇ ಸಿಕ್ತು ಅನುಮತಿ

ಈ ವೇಳೆ ಪ್ರಧಾನಿ ನರೇಂದ್ರ ಮೋದಿಯನ್ನು ಕಾಳೆಲೆದ ಕಾಂಗ್ರೆಸ್, “ಯುವಕರಿಗೆ ಪಕೋಡಾ ಮಾರುವ ಸಲಹೆ ನೀಡಿದ ನರೇಂದ್ರ ಮೋದಿ ಅವರೇ, ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸುಗಳ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ?” ಎಂದು ಪ್ರಶ್ನಿಸಿದೆ.

“ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ ಬಿಜೆಪಿ ಸರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ. ಯುವಜನರ ಉದ್ಯೋಗ ಮಾರಾಟ, ಶಿಷ್ಯವೇತನ ನೀಡದೆ, ಯುವಜನರ ಶಿಕ್ಷಣಕ್ಕೆ ದ್ರೋಹ ಬಗೆಯುತ್ತಿದೆ. KPSC, KEA, KSP ಅಭ್ಯರ್ಥಿಗಳಿಗೆ ವಂಚನೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ” ಎಂದು ಆಕ್ರೋಶ ಹೊರಹಾಕಿದೆ.

suddiyaana