‘ತೆನೆ’ ಇಳಿಸುವುದು ನಿಶ್ಚಿತ, ‘ಕೈ’ ಹಿಡಿಯುವುದು ಖಚಿತ – ವೈಎಸ್‌ವಿ ದತ್ತ ಸ್ಪಷ್ಟನೆ

‘ತೆನೆ’ ಇಳಿಸುವುದು ನಿಶ್ಚಿತ, ‘ಕೈ’ ಹಿಡಿಯುವುದು ಖಚಿತ – ವೈಎಸ್‌ವಿ ದತ್ತ ಸ್ಪಷ್ಟನೆ

ಬೆಂಗಳೂರು : ಜೆಡಿಎಸ್‌ನ ಹಿರಿಯ ನಾಯಕ ವೈಎಸ್‌ವಿ ದತ್ತ ಕಾಂಗ್ರೆಸ್ ಪಕ್ಷ ಸೇರುವುದು ಬಹುತೇಕ ಪಕ್ಕಾ ಆಗಿದೆ. ಗುರುವಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಲಿರುವ ವೈಎಸ್‌ವಿ ದತ್ತ ಕಾಂಗ್ರೆಸ್‌ಗೆ ಸೇರುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಆದರೆ ಈ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರ ಬಳಿ ಇನ್ನೂ ಮಾತಾಡಿಲ್ಲ ಎಂದು ಸ್ವತಃ ವೈಎಸ್‌ವಿ ದತ್ತ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ :  ‘ಹೆಸರಿಗೆ ಖರ್ಗೆ ಅಧ್ಯಕ್ಷ – ನಿರ್ಧಾರಕ್ಕೆ ಗಾಂಧಿ ಕುಟುಂಬ’, ಕಾಂಗ್ರೆಸ್ ವಿರುದ್ಧ ಟ್ವೀಟ್‌ ಮೂಲಕ ಬಿಜೆಪಿ ಟೀಕೆ

ನನಗೆ 20 ವರ್ಷ ಆದಾಗಿಂದ ನಾನು ದೇವೇಗೌಡರ ಜೊತೆ ಇದ್ದೇನೆ. ನಮ್ಮಿಬ್ಬರ ಮಧ್ಯೆ ತಂದೆ ಮಗನ ಸಂಬಂಧ ಇದೆ. ನಾನು ದೇವೇಗೌಡರು ಇರುವವರೆಗೂ ಅವರ ಜೊತೆ ಇರುತ್ತೇನೆ ಎಂದು ಹೇಳಿದ್ದೆ‌. ಆದ್ರೆ ಕ್ಷೇತ್ರದ ಕಾರ್ಯಕರ್ತರಿಂದ ಕಾಂಗ್ರೆಸ್ ಸೇರ್ಪಡೆಯಾಗುವ ಒತ್ತಾಯ ಬಂದಿದೆ ಎಂದು ಜೆಡಿಎಸ್‌ ತೊರೆಯುವ ನಿರ್ಧಾರದ ಬಗ್ಗೆ ವೈಎಸ್‌ವಿ ದತ್ತ ಸಮಜಾಯಿಷಿ ನೀಡಿದ್ದಾರೆ.

‘ತಂದೆ ಸಮಾನರಾದ ದೇವೇಗೌಡರಿಗೆ ಪಕ್ಷ ತೊರೆಯುವ ವಿಚಾರ ಹೇಳಲಾಗದೆ ಒದ್ದಾಡುತ್ತಿದ್ದೇನೆ.  ನನ್ನನ್ನು ಎಂಎಲ್‌ಸಿ ಮಾಡಿದ್ದು ದೇವೇಗೌಡರು ಮತ್ತು ಕುಮಾರಸ್ವಾಮಿ. ಅವರ ಋಣ ನನ್ನ ಮೇಲಿದೆ. ಅದಕ್ಕಾಗಿ ನಾನು ತಳಮಟ್ಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ್ದೇನೆ. ಜೆಡಿಎಸ್ ನಿಂದ ಶಾಸಕ ಆಗುವವರೆಗೂ ಪಕ್ಷ ಕಟ್ಟಿದ್ದೇನೆ. ನಮ್ಮ ಕ್ಷೇತ್ರದಲ್ಲಿ ಕೋಮುವಾದಿಗಳ ಜೊತೆ ಸೆಣಸಬೇಕು ಅಂದ್ರೆ ಕಾಂಗ್ರೆಸ್ ಸೇರಬೇಕು ಎಂಬುದು ನಮ್ಮ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರ ಒತ್ತಾಯವಾಗಿದೆ’ ಎಂದು ಪಕ್ಷ ತ್ಯಜಿಸುವ ನಿರ್ಧಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ, ‘ 2023ರ ವಿಧಾನಸಭಾ ಚುನಾವಣೆ ನನ್ನ ಸಾರ್ವಜನಿಕ ಜೀವನದಲ್ಲಿ ನಾನು ಎದುರಿಸುವ ಕೊನೆಯ ಚುನಾವಣೆ. ನನ್ನನ್ನು ನಂಬಿ ಬಂದವರು ಅತಂತ್ರ ಆಗಬಾರದು ಎಂದು ಅವರಿಗೆ ನೆಲೆಕೊಡಿಸಲು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ. ಕಡೂರಿನ ರಾಜಕೀಯ ಬೇರೆ ಕ್ಷೇತ್ರಗಳಿಗಿಂತ ಭಿನ್ನವಾಗಿದ್ದು,  ದೇವೇಗೌಡರಿಗೆ  ಇವೆಲ್ಲವೂ ಗೊತ್ತಿದೆ. ಇದರಿಂದಾಗಿ ದೇವೇಗೌಡರು ನನ್ನನ್ನು ಕ್ಷಮಿಸುತ್ತಾರೆ. ನಾನು ಯಾವ ಷರತ್ತು ಹಾಕದೇ ಜೆಡಿಎಸ್‌ನಿಂದ ಹೊರಬರುತ್ತಿದ್ದೇನೆ’ ಎಂದು ವೈಎಸ್‌ವಿ ದತ್ತ ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಖಚಿತಪಡಿಸಿದ್ದಾರೆ.

suddiyaana