ಅತ್ತ ‘ತೆನೆ’ ಇಳಿಸಿದ್ದಾಯ್ತು.. ಇತ್ತ ‘ಕೈ’ ಹಿಡಿದಾಯ್ತು..ಆದರೂ ಟಿಕೆಟ್ ಮಿಸ್ – ವೈಎಸ್‌ವಿ ದತ್ತ ಅತಂತ್ರ, ಅಭಿಮಾನಿಗಳಿಗೆ ಭಾವುಕ ಪತ್ರ

ಅತ್ತ ‘ತೆನೆ’ ಇಳಿಸಿದ್ದಾಯ್ತು.. ಇತ್ತ ‘ಕೈ’ ಹಿಡಿದಾಯ್ತು..ಆದರೂ ಟಿಕೆಟ್ ಮಿಸ್ – ವೈಎಸ್‌ವಿ ದತ್ತ ಅತಂತ್ರ, ಅಭಿಮಾನಿಗಳಿಗೆ ಭಾವುಕ ಪತ್ರ

ಅತ್ತ ತೆನೆಯ ಭಾರ ಕೆಳಗಿಳಿಸಿ, ಇತ್ತ ಕೈ ಹಿಡಿದ ವೈಎಸ್‌ವಿ ದತ್ತಾ ಈಗ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಹಿರಿಯ ರಾಜಕಾರಣಿ ವೈಎಸ್‌ವಿ ದತ್ತಾ ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಇತ್ತೀಚೆಗಷ್ಟೇ ಜೆಡಿಎಸ್‌ನಿಂದ ಜಂಪ್ ಆಗಿ ಕೈ ಪಕ್ಷಕ್ಕೆ ಜೈ ಅಂದಿದ್ದರು. ಆದರೆ, ದತ್ತಾ ಅವರಿಗೆ ಕಡೂರು ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ ಮಿಸ್‌ ಆಗಿದೆ. ಹೀಗಾಗಿ ದತ್ತಾ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ. ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿರುವ ದತ್ತಾ, ಅದಕ್ಕೂ ಮೊದಲು ಅಭಿಮಾನಿಗಳಿಗಾಗಿ ಭಾವುಕ ಪತ್ರ ಬರೆದಿದ್ದಾರೆ.

ಇದನ್ನೂ ಓದಿ:  ಒಂದೇ ತಿಂಗಳ ಅವಧಿಯಲ್ಲಿ ಅಗಲಿದ ತಂದೆ ತಾಯಿ – ಕೈ ಅಭ್ಯರ್ಥಿ ದರ್ಶನ್ ಧ್ರುವನಾರಾಯಣಗೆ ಬೆಂಬಲ ಘೋಷಿಸಿದ ಜೆಡಿಎಸ್

ಕಡೂರಿನಲ್ಲಿ ಭಾನುವಾರ ಬೆಳಗ್ಗೆ 11 ಗಂಟೆಗೆ ಅಭಿಮಾನಿಗಳ ಸಭೆ ಕರೆದಿದ್ದು, ಮುಂದಿನ ನಿರ್ಧಾರ ಪ್ರಕಟಿಸುವ ನಿರೀಕ್ಷೆ ಇದೆ. ಅಭಿಮಾನಿಗಳ ಅಭಿಪ್ರಾಯದಂತೆ ಅವರು ತಮ್ಮ ಮುಂದಿನ ರಾಜಕೀಯ ಹೆಜ್ಜೆಯನ್ನು ಇಡುವ ಸಾಧ್ಯತೆ ದಟ್ಟವಾಗಿದೆ. ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ದತ್ತಾ ಅವರು ತಮ್ಮ ಅಭಿಮಾನಿಗಳಿಗೆ ಭಾವುಕ ಪತ್ರವನ್ನು ಬರೆದಿದ್ದಾರೆ. ‘ನೀವು ನನಗೆ ಪ್ರೀತಿಯನ್ನು‌ ಧಾರೆ ಎರೆದಿದ್ದೀರಿ. ಹಣವಿಲ್ಲದ, ಜಾತಿ ಇಲ್ಲದ ನನ್ನನ್ನು ದತ್ತಣ್ಣ, ನಮ್ಮ ದತ್ತಣ್ಣ ಎಂದು ಅಭಿಮಾನದಿಂದ ತಬ್ಬಿಕೊಂಡು ಬೆಳೆದಿದ್ದೀರಿ. ಈಗ ಬಂದಿರುವ ವಿಶೇಷ ರಾಜಕೀಯ ಪರಿಸ್ಥಿತಿಯಲ್ಲಿ ನಿಮ್ಮ ಜೊತೆಗೆ ನಾನಿರಬೇಕು ಹಾಗೂ ನನ್ನ ಜೊತೆಗೆ ನೀವಿರಬೇಕು ಎಂಬುದು ಅನಿವಾರ್ಯವಾಗಿದೆ’ ಎಂದು ಭಾವುಕರಾಗಿ ಪತ್ರ ಬರೆದಿದ್ದಾರೆ.

ಈ ಮಧ್ಯೆ ದತ್ತಾ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವ ಬಗ್ಗೆ ಮಾಜಿ ಸಿಎಂ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್‌.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಮಾತನಾಡಿದ ಅವರು, ನಮ್ಮ ಹಳೇ ಲೀಡರ್ ನನ್ನ ಬಗ್ಗೆ ಬಹಳ ಚಾರ್ಜ್ ಮಾಡಿದ್ದಾರೆ, ಈಗ ಅದು ಬೇಡ. ವೈಎಸ್​ವಿ ದತ್ತಾ ಜೆಡಿಎಸ್​​ ಪಕ್ಷಕ್ಕೆ ದೋಖಾ ಮಾಡಿ ಹೋಗಿದ್ದಾರೆ. ನಮ್ಮದು ಸಣ್ಣ ಪಕ್ಷ. ಅವರು ಇಂಟರ್‌ನ್ಯಾಷನಲ್ ಪಕ್ಷಕ್ಕೆ ಸೇರಲು ಹೋದವರು. ನಮ್ಮ ಪಕ್ಷದಲ್ಲಿ ಅವರಿಗೇನು ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಪಕ್ಷದ ವರಿಷ್ಠ ಹೆಚ್​​.ಡಿ.ದೇವೇಗೌಡರು ಸ್ವಂತ ಮಗನಿಗಿಂತ ಹೆಚ್ಚಾಗಿ ನೋಡಿಕೊಂಡರು. ವೈಎಸ್​ವಿ ದತ್ತಾರನ್ನು ಎಂಎಲ್​ಸಿ ಮಾಡದಿದ್ದರೆ ಕಡೂರು ಜನ ಗುರುತಿಸುತ್ತಿದ್ದರೇ? ಯಾರು ಇಲ್ಲದಾಗ ಪಕ್ಷದ ಗೌರವ ಉಳಿಸಲು ಧನಂಜಯ್ ಬಂದಿದ್ದಾರೆ ಎಂದರು. ಅಲ್ಲದೆ, ವಿಧಾನಸೌಧದಲ್ಲಿ 2ನೇ ಸೀಟಲ್ಲಿ ನನ್ನ ಪಕ್ಕ ಕೂರುತ್ತಿದ್ದರು. ನಾನು ಮಾಡಿದ ಅನ್ಯಾಯವಾದರೂ ಏನು? ಎಂದಿದ್ದಾರೆ.

suddiyaana