ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುವಾಗ ಕದ್ದು ನೋಡಿದ! – ಹಲ್ಲೆ ನಡೆಸಿ ಯುವಕನ ಕೊಂದೇ ಬಿಟ್ರಾ ಗ್ರಾಮಸ್ಥರು?

ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುತ್ತಿರುವುದನ್ನು ಕದ್ದು ಮುಚ್ಚಿ ನೋಡುತ್ತಿದ್ದ ಯುವಕ ಗ್ರಾಮಸ್ಥರ ಕೈ ಸಿಕ್ಕಿಬಿದ್ದಿದ್ದಾನೆ. ಈ ಬೆನ್ನಲ್ಲೇ ಗ್ರಾಮಸ್ಥರು ಆತನಿಗೆ ಹಲ್ಲೆ ನಡೆಸಿದ್ದು, ಆತ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನೂ ಓದಿ: ಬ್ರೇಕ್‌ಫಾಸ್ಟ್ ಮೀಟಿಂಗ್ ಆಯ್ತು.. ಈಗ ಡಿನ್ನರ್ ಮೀಟಿಂಗ್! – ಮಾರ್ಚ್ 16 ರಂದು ಸಚಿವರಿಗೆ ಔತಣಕೂಟ ಆಯೋಜಿಸಿದ ಸಿಎಂ!
ಈ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ವೇಳೆ ನಡೆದಿದೆ. ಮೃತ ಯುವಕನನ್ನು ಸಾವಳಗಿ ಗ್ರಾಮದ ಸುದೀಪ್ ಪಾಂಗೆ (19) ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಮಾರ್ಚ್ 11ರ ರಾತ್ರಿ ಸಾವಳಗಿ ಗ್ರಾಮ ಪಂಚಾಯಿತಿ ಕಟ್ಟಡದ ಆವರಣದಲ್ಲಿ ಇರುವ ಸಾವಳಗಿ ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಸುದೀಪ್ ಪಾಂಗೆ ಶಾಲೆಯ ಮೇಲ್ಛಾವಣಿ ಮೇಲೆ ಕುಳಿತುಕೊಂಡು ಕೆಳಗಿದ್ದ ಕಾರ್ಯಕ್ರಮದತ್ತ ಕಲ್ಲು ಎಸೆದಿದ್ದಾನೆ ಎನ್ನಲಾಗ್ತಿದೆ. ಇದಿಷ್ಟೇ ಅಲ್ಲದೆ, ವಿದ್ಯಾರ್ಥಿನಿಯರು ಉಡುಪು ಬದಲಾಯಿಸುತ್ತಿದ್ದ ಸ್ಥಳದತ್ತ ಇಣುಕಿ ನೋಡಿದ್ದಾನೆ ಎಂಬ ಆರೋಪವೂ ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಕೆಲ ಯುವಕರು ಸುದೀಪ್ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಯಿಂದ ಗಾಯಗೊಂಡ ಸುದೀಪ್ ಪಾಂಗೆಯನ್ನು ತಕ್ಷಣ ಜಮಖಂಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ರಾಜು ಮಾಳಿ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳಿ ಎಂಬ ಮೂವರು ಯುವಕರು ಸುದೀಪ್‌ಗೆ ಥಳಿಸಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ನಡೆಸಿದವರ ವಿರುದ್ದ ಕ್ರಮಕೈಗೊಳ್ಳಲು ಮೃತರ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಅಲ್ಲದೇ, ಮೃತನ ಸಹೋದರ ನೀಡಿದ ದೂರಿನ ಆಧಾರದ ಮೇಲೆ, ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ರಾಜು ಮಾಳಿ, ವಿಜಯ್ ಸಾವಳಗಿ ಮತ್ತು ಮಲ್ಲಿಕಾರ್ಜುನ ಮಾಳಿ ವಿರುದ್ಧ ಸಾವಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೋಡಿರಿ

