ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು – 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಗಿಲ್ ಪಡೆ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು – 58 ವರ್ಷಗಳ ಇತಿಹಾಸ ಅಳಿಸಿ ಹಾಕಿದ ಗಿಲ್ ಪಡೆ

ಶುಭ್ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ 336 ರನ್‌ಗಳ ರೋಚಕ ಗೆಲುವು  ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ 58 ವರ್ಷಗಳ ಎಡ್ಜ್‌ ಬಾಸ್ಟನ್‌ ಇತಿಹಾಸದಲ್ಲಿ ಮೊದಲ ಗೆಲುವು ಸಾಧಿಸಿದೆ.

1967 ರಲ್ಲಿ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಟೀಂ ಇಂಡಿಯಾ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತ್ತು. ಆದರೆ ಅಂದಿನಿಂದ 2025 ರವರೆಗೆ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಈ ಮೈದಾನದಲ್ಲಿ ಈ ಹಿಂದೆ ಆಡಿದ್ದ 8 ಪಂದ್ಯಗಳಲ್ಲಿ 7 ರಲ್ಲಿ ಟೀಂ ಇಂಡಿಯಾ ಸೋತಿದ್ದರೆ, 1986 ರಲ್ಲಿ ನಡೆದಿದ್ದ ಒಂದು ಟೆಸ್ಟ್ ಪಂದ್ಯ ಡ್ರಾ ಆಗಿತ್ತು. ಸ್ಟಾರ್ ಆಟಗಾರರು, ಲೆಜೆಂಡರಿ ಆಟಗಾರರು ಮತ್ತು ಬಲಿಷ್ಠ ನಾಯಕರ ಹೊರತಾಗಿಯೂ, ಟೀಂ ಇಂಡಿಯಾಗೆ ಎಡ್ಜ್‌ಬಾಸ್ಟನ್ ಅಂಗಳದಲ್ಲಿ ಗೆಲ್ಲೋಕೆ ಆಗಿರಲಿಲ್ಲ.  ಆದ್ರೆ ಹೊಸ ನಾಯಕ ಶುಭ್‌ಮನ್ ಗಿಲ್ ಮತ್ತು ಸ್ಟಾರ್ ಆಟಗಾರರಿಲ್ಲದೆ ಈ ಪಂದ್ಯಕ್ಕಿಳಿದಿದ್ದ ಟೀಂ ಇಂಡಿಯಾ ಅಂತಿಮವಾಗಿ ಈ ಸಾಧನೆ ಮಾಡಿದೆ.

ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 336 ರನ್‌ಗಳಿಂದ ಸೋಲಿಸುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 587 ರನ್ ಗಳಿಸಿದರೆ, ಇಂಗ್ಲೆಂಡ್ ತಂಡವನ್ನು 407 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 180 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಿತು. ಆ ಬಳಿಕ ಶುಭ್​ಮನ್ ಗಿಲ್ ಅವರ ಶತಕದ ಸಹಾಯದಿಂದ ಎರಡನೇ ಇನ್ನಿಂಗ್ಸ್​ನಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 427 ರನ್‌ಗಳಿಸಿ ಎರಡನೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ 608 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ ಐದನೇ ದಿನದಾಟದ ಎರಡನೇ ಸೆಷನ್​ನಲ್ಲಿ 271 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತದ ಮುಂದೆ ಸೋತಿದೆ.

Kishor KV