ಪ್ರಿಯಕರನ ಮೇಲೆ ಸಿಟ್ಟಿದೆಯೇ? – ಜಿರಳೆಗೆ ಆತನ ಹೆಸರಿಟ್ಟು ಕೋಪ ತೀರಿಸಿಕೊಳ್ಳಿ!

ಪ್ರಿಯಕರನ ಮೇಲೆ ಸಿಟ್ಟಿದೆಯೇ? – ಜಿರಳೆಗೆ ಆತನ ಹೆಸರಿಟ್ಟು ಕೋಪ ತೀರಿಸಿಕೊಳ್ಳಿ!

ನಮ್ಮ ಜೀವನದಲ್ಲಿ ಕಿರಿ ಕಿರಿಗಳು ಆಗೋದು ಸಾಮಾನ್ಯ. ಆಫೀಸಿನಲ್ಲಿ ಬಾಸ್, ಉಳಿದ ಟೈಮಲ್ಲಿ ಸ್ನೇಹಿತರು ಹೀಗೆ ಒಬ್ಬರಲ್ಲೊಬ್ಬರು ಏನಾದರೊಂದು ಕಿರಿ ಕಿರಿ ಮಾಡುತ್ತಾರೆ. ಇನ್ನೂ ಪ್ರೇಮಿಗಳ ಬಗ್ಗೆ ಕೇಳಬೇಕೆ? ಅವರ ಮಧ್ಯೆಯೂ ಏನಾದರೊಂದು ಮನಸ್ತಾಪ ಇದ್ದೇ ಇರುತ್ತೆ. ಇನ್ನೂ ಕೆಲವರಂತೂ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಮಾಡಿಕೊಂಡು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಆದ ಮೇಲೆ ಇನ್ನು ಅವರ ಮೇಲೆ ಯಾಕೆ ಕನಿಕರ ಅಂತ ಅವರನ್ನು  ದ್ವೇಷಿಸಲು ಶುರುಮಾಡುತ್ತಾರೆ. ಅಂತವರ ಮೇಲೆ ಎಷ್ಟು ಸಿಟ್ಟಿದ್ರೂ ತೀರಿಸಿಕೊಳ್ಳೋಕೆ ಸಾಧ್ಯವಾಗೋದಿಲ್ಲ. ಅದಕ್ಕಾಗಿಯೇ ಕೆನಡಾದ ಮೃಗಾಲಯವೊಂದು ಯಾರ ಮೇಲಾದರೂ ಸಿಟ್ಟು  ಇದ್ರೆ ಅದನ್ನು ತೀರಿಸಿಕೊಳ್ಳಲು ಬಂಪರ್ ಆಫರ್ ನೀಡಿದೆ.

ಇದನ್ನೂ ಓದಿ: ಕಾರಲ್ಲಿ ಹೋದರೆ ಮದುವೆಗೆ ಲೇಟು – ಮೆಟ್ರೋ ಹತ್ತಿದ ಮದುಮಗಳು!

ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ ಬರುತ್ತಿದೆ. ಇದರ ಸಲುವಾಗಿ  ಕೆನಡಾದ ಟೊರೊಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯು ‘ಎ-ರೋಚ್’ ಎಂಬ ಅಭಿಯಾನವನ್ನು ಪ್ರಾರಂಭಿಸಿದೆ. ನಿಮ್ಮ ಬಾಸ್, ಮಾಜಿ ಪ್ರಿಯಕರ, ಪ್ರೇಯಸಿ, ಸ್ನೇಹಿತರು, ಸಂಬಂಧಿಕರ ಮೇಲೆ ನೀವು ಅಸಮಾಧಾನಗೊಂಡಿದ್ದರೆ, ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಸಿಟ್ಟನ್ನು ತೋರಿಸಿಕೊಳ್ಳಬಹುದಂತೆ. ಅದೂ ಜಿರಳೆಗಳ  ಮೂಲಕ!

ನಿಮ್ಮನ್ನು ದ್ವೇಷ ಮಾಡುವ ಅಥವಾ, ನೀವು ದ್ವೇಷ ಮಾಡುತ್ತಿರುವವರ ಹೆಸರನ್ನು ಜಿರಳೆಗೆ ಇಟ್ಟು ಕೋಪವನ್ನು ತೀರಿಸಿಕೊಳ್ಳಬಹುದು ಎಂದು ಟೊರೆಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆ ಹೇಳಿದೆ. ಈ ಅಭಿಯಾನದಲ್ಲಿ ಭಾಗವಹಿಸಬೇಕೆಂದರೆ ನೀವು 1,507 ರೂ ಪಾವತಿಸಬೇಕಂತೆ.

ಟೊರೊಂಟೊ ಮೃಗಾಲಯ ವನ್ಯಜೀವಿ ಸಂರಕ್ಷಣಾ ಕೇಂದ್ರ ತನ್ನ ಟ್ವಿಟರ್ ಖಾತೆಯಲ್ಲಿ ಈ ಅಭಿಯಾನವನ್ನು ಘೋಷಿಸಿದೆ.  ‘ರೋಸಸ್ ಆರ್ ರೆಡ್, ವೈಲೆಟ್ಸ್ ಆರ್ ಬ್ಲೂ’ ನಿಮ್ಮ ಜೀವನದಲ್ಲಿ ನಿಮ್ಮನ್ನು ಯಾರಾದರೂ ಕಾಡುತ್ತಿದ್ದಾರೆಯೇ? ಈ ಪ್ರೇಮಿಗಳ ದಿನದಂದು ಅಂತಹವರ ಸಲುವಾಗಿ ಜಿರಳೆಗೆ ಅವರ ಹೆಸರನ್ನು ಇಡುವ ಮೂಲಕ ಅವರಿಗೆ ಶಾಕ್ ನೀಡಿ ಅಂತ ಹೇಳಿದೆ.

ಈ ಅಭಿಯಾನದಲ್ಲಿ ಭಾಗವಹಿಸಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ‘ಡೆಡಿಕೇಟ್ ಯುವರ್ ಡೊನೇಷನ್’ಎಂಬುದನ್ನು ಆಯ್ಕೆ ಮಾಡಿ ಅದರಲ್ಲಿ ‘ಇನ್ ಹಾನರ್ ಆಫ್’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ನೀವು ಯಾರ ಹೆಸರು ಬರೆಯಬೇಕೆಂದಿದೆಯೋ ಅವರ ಹೆಸರನ್ನು ಖಾಲಿ ಜಾಗದಲ್ಲಿ ಭರ್ತಿ ಮಾಡಬೇಕು. ಪೋಸ್ಟ್ ಮಾಡಿ ನಂತರ ಅವರು ಜಿರಳೆಯ ಹೆಸರಿನ ಡಿಜಿಟಲ್ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.

ಟೊರೊಂಟೊ ಮೃಗಾಲಯವು ಜಿರಳೆಗಳಿಗೆ ಹೆಸರಿಡಲು ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ದ್ವೇಷದ ಮಾತುಗಳು ಅಥವಾ ಅಶ್ಲೀಲವಾಗಿ ವರ್ತಿಸಬಾರದು. ಹೆಸರಿಸುವ ಅವಕಾಶಗಳು ನಿಮ್ಮ ಮಾಜಿ ಪ್ರಿಯತಮೆ, ಪ್ರಿಯಕರರಿಗೆ ಮಾತ್ರ ಸೀಮಿತವಾಗಿಲ್ಲ. ನಿಮ್ಮ ಬಾಸ್, ಮಾಜಿ ಸ್ನೇಹಿತರು, ಸಂಬಂಧಿಗಳು ಅಥವಾ ನಿಮ್ಮನ್ನು ದ್ವೇಷ ಮಾಡುವ ಯಾರಿಗಾದರೂ ನೀವು ಜಿರಳೆಯ ಹೆಸರಿಸಬಹುದು ಎಂದು ಟೊರೆಂಟೊ ಮೃಗಾಲಯದ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಅಧಿಕಾರಿ ಕೆಲ್ಸಿ ಗೊಡೆಲ್ ತಿಳಿಸಿದ್ದಾರೆ.

ಈ ಅಭಿಯಾನಕ್ಕೆ ಜನರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅದನ್ನು ವಿನೋದಮಯವಾಗಿದೆ ಎಂದು ಹೇಳಿದರೆ, ಇನ್ನೂ ಕೆಲವರು ಈ ಅಭಿಯಾನದ ವಿರುದ್ದ ಕಿಡಿಕಾರಿದ್ದಾರೆ.

suddiyaana