ಏರ್ಸ್ಟೈಕ್, 50ಕ್ಕೂ ಹೆಚ್ಚು ಬಲಿ! ಹರಿದ ಹೌತಿ ಬಂಡುಕೋರರ ನೆತ್ತರು
ಯೆಮೆನ್ನಲ್ಲಿ ಅಮೆರಿಕ ಆಪರೇಷನ್

ಏರ್ಸ್ಟೈಕ್, 50ಕ್ಕೂ ಹೆಚ್ಚು ಬಲಿ! ಹರಿದ ಹೌತಿ ಬಂಡುಕೋರರ ನೆತ್ತರುಯೆಮೆನ್ನಲ್ಲಿ ಅಮೆರಿಕ ಆಪರೇಷನ್

ಟ್ರಂಪ್ ಸರ್ಕಾರ ಹೌತಿ ಬಂಡುಕೋರರ ಹುಟ್ಟಡಗಿಸೋ ಪಣತೊಟ್ಟಿದೆ.  ಹೌತಿ ಬಂಡುಕೋರರಿಗೆ ಇರಾನ್‌ನ ಬೆಂಬಲ ಇದೆ ಅನ್ನೋದು ಅಮೆರಿಕದ ಆರೋಪ. ಯೆಮೆನ್‌ನಲ್ಲಿ ವ್ಯಾಪಿಸಿಕೊಂಡಿರುವ ಹೌತಿಗಳ ಪ್ರದೇಶಗಳಲ್ಲಿ ಅಮೆರಿಕದ ಭದ್ರತಾ ಪಡೆಗಳು ದೊಡ್ಡ ಆಪರೇಷನ್ ನಡೆಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶದ ಮೇಲೆ ಯೆಮೆನ್‌ನ ರಾಜಧಾನಿ ಸನಾದ ಮೇಲೆ ಅಮೆರಿಕ ಏರ್‌ಸ್ಟೈಕ್‌ ಮಾಡಿದೆ. ಈ ದಾಳಿಯಲ್ಲಿ ಜನಸಾಮಾನ್ಯ, ಮಕ್ಕಳು ಸೇರಿದಂತೆ ಕನಿಷ್ಠ 50ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿರೋದಾಗಿ ವರದಿಯಾಗಿದೆ.

ಕೆಂಪು ಸಮುದ್ರದ ಭಾಗದಲ್ಲಿ ಭಯೋತ್ಪಾದನಾ ಕಾರ್ಯಾಚರಣೆಗಳನ್ನು ನಡೆಸುತ್ತಿರುವ ಹೌತಿ ಉಗ್ರರ ಸಂಘಟನೆಯನ್ನು ತಡೆಯೋಕೆ ವಿಧ್ವಂಸಕ ಶಕ್ತಿಯನ್ನು ಬಳಸುವ ಎಚ್ಚರಿಕೆಯನ್ನ ಟ್ರಂಪ್ ಕೊಟ್ಟಿದ್ರು.  ಟ್ರಂಪ್‌ ಅಧ್ಯಕ್ಷರಾದ ಮೇಲೆ ಹೌತಿಗಳ ವಿರುದ್ಧ ನಡೆದಿರುವ ಅಮೆರಿಕದ ಮಿಲಿಟರಿಯ ಮೊದಲ ಕಾರ್ಯಾಚರಣೆ ಇದಾಗಿದೆ. ಗಾಜಾ ಸಂಘರ್ಷದ ಹಿನ್ನೆಯೆಯಲ್ಲಿ ಇಸ್ರೇಲ್‌ ಮೇಲೆ ಹಾಗೂ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸಿ ಭೀತಿ ಸೃಷ್ಟಿಸಿದ್ದರು.

ಮಾರ್ಚ್‌ 13ರಂದು ಇರಾಕ್‌ನ ಗುಪ್ತಚರ ಇಲಾಖೆ ಹಾಗೂ ಅಮೆರಿಕ ಸೇನೆಯ ಜಂಟಿ ಆಪರೇಷನ್‌ನಲ್ಲಿ ಐಸಿಸ್‌ನ ಜಾಗತಿಕ ಆಪರೇಷನ್‌ನ ಮುಖ್ಯಸ್ಥ ಅಬು ಖದೀಜಾನನ್ನು ಹೊಡೆದುರುಳಿಸಲಾಗಿತ್ತು. ಅದಾದ ಎರಡೇ ದಿನಗಳಲ್ಲಿ ಹೌತಿಯಲ್ಲಿ ಅಮೆರಿಕದ ಪಡೆಗಳು ಮಿಷನ್‌ ಯಶಸ್ವಿಗೊಳಿಸಿವೆ. ಅಮೆರಿಕ ಸೇನೆ ಆಪರೇಷನ್‌ನ ವೈಮಾನಿಕ ದೃಶ್ಯಗಳನ್ನು ಯುಎಸ್‌ ಸೆಂಟ್ರಲ್‌ ಕಮಾಂಡ್‌ ಹಂಚಿಕೊಂಡಿದೆ. ನಿಗದಿತ ಟಾರ್ಗೆಟ್ ಅನ್ನು ಉಡಾಯಿಸೋಕೆ ಯುದ್ಧ ನೌಕೆಯಿಂದ ಹಾರಿ ಹೋಗಿರುವ ಯುದ್ಧ ವಿಮಾನಗಳು ಹಾಗೂ ಬಾಂಬ್‌ಗಳನ್ನು ಹೊತ್ತ ವಿಮಾನಗಳು, ನೌಕೆಯಿಂದ ಲಾಂಚ್ ಆದ ಮಿಸೈಲ್‌ಗಳು ಟಾರ್ಗೆಟ್‌ ಮೇಲೆ ಅಪ್ಪಳಿಸಿದೆ.

ಸುಮಾರು ಹತ್ತು ವರ್ಷಗಳಿಂದ ಹೌತಿ ಬಂಡುಕೋರರು ಯೆಮೆನ್‌ನ ಬಹುತೇಕ ಪ್ರದೇಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇರಾನ್‌ಗೆ ಸಂಪೂರ್ಣ ಬೆಂಬಲ ಕೊಡುವ ಈ ಹೌತಿ ಬಂಡುಕೋರರಿಗೆ ಇರಾನ್‌ನಿಂದಲೂ ಅಷ್ಟೇ ಸಹಕಾರ ಸಿಗುತ್ತಿದೆ. ಆ ಸಹಕಾರವನ್ನು ತಕ್ಷಣವೇ ಇರಾನ್ ನಿಲ್ಲಿಸಬೇಕು ಅನ್ನೋದು ಟ್ರಂಪ್‌ ಇಟ್ಟಿರುವ ಡಿಮ್ಯಾಂಡ್‌. ಯಾಕಂದ್ರೆ, ಇರಾನ್‌ ಅನ್ನು ಪ್ರೀತಿಸುವ ಹೌತಿಗಳು ಇಸ್ರೇಲ್‌ ಮತ್ತು ಅಮೆರಿಕದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಸಮುದ್ರ ಭಾಗದಿಂದ ಪ್ಲ್ಯಾನ್‌ ಮಾಡಿ ದಾಳಿಗಳನ್ನು ನಡೆಸುತ್ತಿದ್ದಾರೆ.

ಸಮುದ್ರದಲ್ಲಿ ಸರಕುಗಳಿಗೆ ಕನ್ನ

ಇಸ್ರೇಲ್‌ ಮತ್ತು ಹಮಾಸ್‌ ನಡುವೆ ಕದನ ವಿರಾಮ ಆಗೋದಕ್ಕೂ ಮುಂಚೆ ಗಾಜಾದಲ್ಲಿ ಸಂಘರ್ಷ ನಡೆಯುತ್ತಿದ್ದಾಗ ಹೌತಿಗಳು ಡ್ರೋನ್‌ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸಿದ್ದರು. ಪ್ಯಾಲೆಸ್ತೀನಿಯರಿಗೆ ಬೆಂಬಲ ಸೂಚಿಸಿದ್ದ ಇವರು ಯೆಮೆನ್‌ ಸಮೀಪದಲ್ಲಿನ ಕೆಂಪು ಸಮುದ್ರದಲ್ಲಿ ಹಾಗೂ ಗಲ್ಫ್‌ ಆಫ್‌ ಅಡೆನ್‌ನಲ್ಲಿ ಹಡಗುಗಳ ಮೇಲೆ ಅಟ್ಯಾಕ್‌ ಮಾಡಿ ತೊಂದರೆ ಕೊಟ್ಟಿದ್ದರು. ಇದೇ ಸಮುದ್ರ ಮಾರ್ಗಗಳಲ್ಲಿ ಹಲವು ರಾಷ್ಟ್ರಗಳಿಗೆ ಸರಕು ಸಾಗಣೆಯು ನಡೆಯೋದ್ರಿಂದ ಬಹಳಷ್ಟು ಕಂಪನಿಗಳಿಗೆ ನಷ್ಟ ಎದುರಾಗಿತ್ತು. ಆಫ್ರಿಕಾದ ದಕ್ಷಿಣ ಭಾಗಕ್ಕೆ ಇದೇ ಮಾರ್ಗದಲ್ಲಿ ಸರಕು ಸಾಗಣೆ ನಡೆಯುತ್ತಿದ್ದು, ಜಗತ್ತಿನ ಶೇಕಡ 12ರಷ್ಟು ಸಮುದ್ರ ಮಾರ್ಗದ ಸಾಗಣೆಗೆ ಇದೇ ಮಾರ್ಗದಲ್ಲಿ ಆಗುತ್ತಿದೆ. ಇಲ್ಲಿ ಹೌತಿಗಳ ಪ್ರಾಬಲ್ಯ ಹೆಚ್ಚಿದರೆ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋದನ್ನು ತಿಳಿದು ಅಮೆರಿಕ ಬಂಡುಕೋರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿದೆ.

 ಯಾರು ಈ ಹೌತಿ ಬಂಡುಕೋರರು?

ಗಾಜಾದಲ್ಲಿ ಕದನ ವಿರಾಮ ಏರ್ಪಡುತ್ತಿದ್ದಂತೆ ಸೈಲೆಂಟ್‌ ಆಗಿದ್ದ ಹೌತಿ ಬಂಡುಕೋರರು, ಪ್ಯಾಲಿಸ್ತೀನಿಯರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಇಸ್ರೇಲ್‌ ಅವಕಾಶ ಕೊಡಲಿಲ್ಲಾಂದ್ರೆ, ಮತ್ತೆ ದಾಳಿ ನಡೆಸೋದಾಗಿ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಅಮೆರಿಕ ಕಾರ್ಯಾಚರಣೆ ನಡೆಸಿದೆ. ಆದ್ರೆ, ಅಮೆರಿಕ ಇಲ್ಲಿ ಇಸ್ರೇಲ್‌ ವಿಚಾರವನ್ನು ತಂದಿಲ್ಲ. ಸರಕು ಸಾಗಣೆ ಹಡುಗಗಳ ಮೇಲೆ ದಾಳಿ ನಡೆಸ್ತಿರೋದನ್ನು ನಿಲ್ಲಿಸುವಂತೆ ಟ್ರಂಪ್‌ ಪೋಸ್ಟ್‌ ಮಾಡಿದ್ದಾರೆ. ”ನಿಮ್ಮ ಸಮಯ ಮುಗಿದಿದೆ. ನಿಮ್ಮ ಎಲ್ಲ ದಾಳಿಗಳು ನಿಲ್ಲಬೇಕು, ಇಲ್ಲವಾದ್ರೆ ನಿಮಗೆ ನರಕದ ದರ್ಶನವಾಗುತ್ತೆ” ಅಂತ ಟ್ರಂಪ್ ವಾರ್ನಿಂಗ್‌ ಕೊಟ್ಟಿದ್ದಾರೆ. 2023ರಿಂದ ಹೌತಿಗಳು ಅಮೆರಿಕದ ಯುದ್ಧ ನೌಕೆಗಳ ಮೇಲೆ 174 ಬಾರಿ ಹಾಗೂ ಸರಕು ಸಾಗಣೆ ಹಡಗುಗಳ ಮೇಲೆ 145 ದಾಳಿ ನಡೆಸಿರೋದಾಗಿ ವರದಿಯಾಗಿದೆ. 1990ರಲ್ಲಿ ಹೌತಿ ಬಂಡುಕೋರರು ಹುಟ್ಟಿಕೊಂಡರು . ಹೌತಿಗೆ ಹಣಕಾಸು ಮತ್ತು ಮಿಲಿಟರಿ ಸಹಕಾರ ಸಿಗ್ತಿರೋದು ಇರಾನ್‌ನಿಂದ. ಇರಾನ್‌ ಮಿಲಿಟರಿಗೆ ಹೌತಿಗಳು ಪ್ರಾಕ್ಸಿಗಳ ರೀತಿ ಕಾರ್ಯಾಚರಣೆ ನಡೆಸುತ್ತಾರೆ. ಇರಾನ್‌ ಪರವಾಗಿ ಹೌತಿಗಳು ಆಪರೇಷನ್‌ ನಡೆಸುತ್ತಾರೆ. ಸೌದಿ ಅರೇಬಿಯಾ, ಯುಎಇಗೂ ಕಾಟ ಕೊಡುತ್ತಿರುವ ಹೌತಿಗಳನ್ನು ಮಟ್ಟಹಾಕೋಕೆ ಅಮೆರಿಕಕ್ಕೆ ಹಲವು ರಾಷ್ಟ್ರಗಳಿಂದ ಸಪೋರ್ಟ್‌ ಸಿಗ್ತಾಯಿದೆ. ಈಗ ಅಮೆರಿಕ ಕೊಟ್ಟಿರೋ ಏಟಿಗೆ ಹೌತಿ ಭಯೋತ್ಪಾದಕರು ಸ್ವಲ್ಪ ದಿನ ಸೈಲೆಂಟ್ ಆಗಿದ್ದು ಮತ್ತೆ ತಮ್ಮ ನರಿ ಬುದ್ಧಿ ತೋರಿಸಬಹದು.. ಹೀಗಾಗಿ  ಅಮೆರಿಕ ಕೂಡ ಅದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿದೆ.

 

Kishor KV