ಹಳದಿ ಮಾರ್ಗ ಆರಂಭದ ಬೆನ್ನಲ್ಲೇ ನಮ್ಮ ಮೆಟ್ರೋ ದಾಖಲೆ – 1 ಮಿಲಿಯನ್ ದಾಟಿದ ಪ್ರಯಾಣಿಕರ ಸಂಖ್ಯೆ!

ಹಳದಿ ಮಾರ್ಗ ಆರಂಭದ ಬೆನ್ನಲ್ಲೇ ನಮ್ಮ ಮೆಟ್ರೋ ದಾಖಲೆ – 1 ಮಿಲಿಯನ್ ದಾಟಿದ ಪ್ರಯಾಣಿಕರ ಸಂಖ್ಯೆ!

ಸಿಲಿಕಾನ್‌ ಸಿಟಿ ಬೆಂಗಳೂರು ಸಂಚಾರದ ಜೀವನಾಡಿ ನಮ್ಮ ಮೆಟ್ರೋ ಮತ್ತಷ್ಟು ವಿಸ್ತರಣೆ ಆಗ್ತಿದೆ. ಹಳದಿ ಮಾರ್ಗ ಸಂಚಾರಕ್ಕೆ ಪ್ರಧಾನಿ ಮೋದಿ ಭಾನುವಾರ ಹಸಿರು ನಿಶಾನೆ ತೋರಿದ್ದಾರೆ. ಇದೀಗ ಹಳದಿ ಮೆಟ್ರೋ ರೈಲಿಗೆ ಚಾಲನೆ ಸಿಗ್ತಿದ್ದಂತೆ, ಪ್ರತಿದಿನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದೀಗ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ 1 ಮಿಲಿಯನ್‌ ದಾಟಿದೆ.

ಇದನ್ನೂ ಓದಿ: ಶಬರಿಮಲೆ ಯಾತ್ರೆಗೆ ಶ್ರೀಲಂಕಾ ಸರ್ಕಾರದಿಂದಲೂ ಮಾನ್ಯತೆ!

ನಮ್ಮ ಮೆಟ್ರೋದಲ್ಲಿ ಲಕ್ಷಾಂತರ ಮಂದಿ ನಿತ್ಯ ಪ್ರಯಾಣಿಸುತ್ತಿದ್ದಾರೆ. ಭಾನುವಾರವಷ್ಟೇ ಹಳದಿ ಲೈನ್ ಮೆಟ್ರೋ  ಉದ್ಘಾಟನೆಗೊಂಡಿದೆ. ಇದೀಗ ನಮ್ಮ ಮೆಟ್ರೋ ರೈಲಿನ ಪ್ರತಿ ದಿನದ ಪ್ರಯಾಣಿಕರ ಸಂಖ್ಯೆ 10 ಲಕ್ಷ ದಾಟಿದೆ. ನಮ್ಮ ಮೆಟ್ರೋದ ಹಸಿರು, ನೇರಳೆ ಹಾಗೂ ಹಳದಿ ಮಾರ್ಗಗಳ ರೈಲುಗಳಲ್ಲಿ ಒಟ್ಟಾಗಿ ಸೋಮವಾರ 10,48,031 ಮಂದಿ ಪ್ರಯಾಣಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಾಹಿತಿ ನೀಡಿದೆ. ಇದರೊಂದಿಗೆ, ಹಳದಿ ಲೈನ್ ಮೆಟ್ರೋ ವಾಣಿಜ್ಯ ಕಾರ್ಯಾಚರಣೆ ಆರಂಭಿಸಿದ ಒಂದೇ ದಿನದಲ್ಲಿ ನಮ್ಮ ಮೆಟ್ರೋದಲ್ಲಿ ದಾಖಲೆ ಸಂಖ್ಯೆಯ ಮಂದಿ ಪ್ರಯಾಣಿಸಿದಂತಾಗಿದೆ.

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಸೋಮವಾರ ಒಟ್ಟು 4,51,816 ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇನ್ನು ಹಸಿರು ಮಾರ್ಗದಲ್ಲಿ 2,91,677 ಮಂದಿ ಪ್ರಯಾಣಿಸಿದ್ದಾರೆ. ಇನ್ನು ಹೊಸದಾಗಿ ಪ್ರಾರಂಭಿಸಲಾದ ಹಳದಿ ಮಾರ್ಗ ದಲ್ಲಿ ಮೊದಲ ದಿನದ ವಾಣಿಜ್ಯ ಸೇವೆಯಲ್ಲಿ 52,215 ಪ್ರಯಾಣಿಕರು ಸಂಚರಿಸಿದ್ದಾರೆ. ಹೆಚ್ಚುವರಿಯಾಗಿ, 2,52,323 ಪ್ರಯಾಣಿಕರು ಇಂಟರ್ಚೇಂಜ್ ನಿಲ್ದಾಣಗಳನ್ನು ಬಳಸಿ ಪ್ರಯಾಣಿಸಿದ್ದಾರೆ.

ಸೋಮವಾರ ಮೆಟ್ರೋದಲ್ಲಿ ಜನಸಂದಣಿ ಹೆಚ್ಚಳಕ್ಕೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ವಿಳಂಬವಾಗಿದ್ದ ಹಳದಿ ಮಾರ್ಗದ ಉದ್ಘಾಟನೆಯೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. 7,160 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಟ್ರೋ ಯೋಜನೆಯ 2 ನೇ ಹಂತದ ಭಾಗವಾಗಿರುವ 19.15 ಕಿಲೋಮೀಟರ್ ಹಳದಿ ಲೈನ್ ಕಾರಿಡಾರ್ ಅನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಈ ಮಾರ್ಗವು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುತ್ತದೆ, ಇದರಲ್ಲಿ 16 ನಿಲ್ದಾಣಗಳು ಇದ್ದು, ಈ ಲೈನ್ ಪ್ರಮುಖ ವಾಣಿಜ್ಯ ಮತ್ತು ಐಟಿ ವಲಯಗಳ ಮೂಲಕ ಹಾದುಹೋಗುತ್ತದೆ.

ಹಳದಿ ಮಾರ್ಗದರಿಂದ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಒಟ್ಟಾರೆ ಮೆಟ್ರೋ ಜಾಲವು ಈಗ 96 ಕಿ.ಮೀ. ವ್ಯಾಪ್ತಿಯನ್ನು ಹೊಂದಿದ್ದು, ಮೆಟ್ರೋ ಪ್ರಯಾಣಿಕರ ಸಂಖ್ಯೆ ಶೀಘ್ರದಲ್ಲೇ ದಿನಕ್ಕೆ 12.5 ಲಕ್ಷ ಪ್ರಯಾಣಿಕರನ್ನು ತಲುಪಲಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ ಎಂದು ವರದಿ ತಿಳಿಸಿದೆ.

Shwetha M