ಹಿಮಾಚಲ ಪ್ರದೇಶದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಮಳೆಯ ಆರ್ಭಟ – ರಸ್ತೆ ನಿರ್ಮಾಣ ನಿಯಮದಲ್ಲಿ ಬದಲಾವಣೆ ಮಾಡಿದ ಸರ್ಕಾರ
ಹಿಮಾಚಲ ಪ್ರದೇಶದಲ್ಲಿ ಮೇಘಸ್ಟೋಟ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕಳೆದ ಒಂದು ವಾರದಲ್ಲಿ ಬರೋಬ್ಬರಿ 74 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಈ ವರ್ಷ ಸಂಭವಿಸಿದ ಪ್ರವಾಹದಲ್ಲಿ 250ಕ್ಕೂ ಮಂದಿ ಸಾವನ್ನಪ್ಪಿದ್ದ ನಂತರ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ರಸ್ತೆ ನಿರ್ಮಾಣದಲ್ಲಿ ನಿಯಮಗಳನ್ನು ಬದಲಾಯಿಸಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಗುಡ್ಡಕುಸಿತ, ಪ್ರವಾಹದಿಂದಾಗಿ ಜನರ ಬದುಕು ಮೂರಾಬಟ್ಟೆಯಾಗಿದೆ. ಸಾಕಷ್ಟು ಹಾನಿ ಸಂಭವಿಸಿದೆ. ಇದೀಗ ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸುಖು ಅವರು ರಸ್ತೆ ನಿರ್ಮಾಣದಲ್ಲಿ ನಿಯಮಗಳನ್ನು ಬದಲಿಸಿದ್ದಾರೆ. ರಾಜ್ಯದ ಎಲ್ಲಾ ರಸ್ತೆಗಳಿಗೆ ಸರಿಯಾದ ಒಳಚರಂಡಿ ಮತ್ತು ಅಡ್ಡ ಚರಂಡಿ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಿರಂತರ ಮಳೆಗೆ ತತ್ತರಿಸಿದ ಹಿಮಾಚಲ ಪ್ರದೇಶ – ಆರ್ಥಿಕ ನೆರವು ಘೋಷಿಸಿದ ಛತ್ತೀಸ್‌ಗಢ ಸಿಎಂ
ಇದನ್ನು ಪರಿಶೀಲಿಸಲು ಶೀಘ್ರದಲ್ಲಿಯೇ ಉನ್ನತ ಮಟ್ಟದ ಸಮಿತಿ ಮತ್ತು ಮೇಲ್ವಿಚಾರಣಾ ತಂಡಗಳನ್ನು ರಚಿಸಲಾಗುವುದು. ಸರಿಯಾದ ಚರಂಡಿ ಮತ್ತು ಅಡ್ಡ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆಗಳಲ್ಲಿ ನೀರು ಹರಿದು ಬಿರುಕು ಕಾಣಿಸಿಕೊಂಡು ಅಪಾರ ಹಾನಿ ಉಂಟಾಗಿದೆ ಎಂದ ಅವರು, ಇನ್ನು ಮುಂದೆ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಹೊಸ ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕುಲು ಜಿಲ್ಲೆಯ ನದಿ ತೀರದಲ್ಲಿ ಮಣ್ಣಿನ ಸವೆತ ಮತ್ತು ಭೂಕುಸಿತವನ್ನು ತಡೆಗೆ ವೈಜ್ಞಾನಿಕ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ದೀರ್ಘಾವಧಿಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಹಿಮಾಚಲ ಪ್ರದೇಶದಲ್ಲಿ ಮಳೆಯ ಆರ್ಭಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಸಾಕಷ್ಟು ಕಡೆ ಭೂಕುಸಿತವಾಗಿದ್ದು, ಹಲವು ಮನೆಗಳು ಕುಸಿತಗೊಂಡಿವೆ. ಆಗಸ್ಟ್ 21 ಹಾಗೂ 22 ರಂದು ಹಿಮಾಚಲ ಪ್ರದೇಶದ 10 ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 48 ಗಂಟೆಗಳಲ್ಲಿ ಹಗುರದಿಂದ ಮಧ್ಯಮ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಆಗಸ್ಟ್ 21 ರಿಂದ ರಾಜ್ಯದ ಹಲವು ಭಾಗಗಳಲ್ಲಿ ಆಗಸ್ಟ್ 24 ರವರೆಗೆ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.