ಯತ್ನಾಳ್ ವಿರುದ್ಧ ಸಿಡಿದೆದ್ದ BSY ಬಣ – ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಸವಾಲ್  
ಅಧಿಕಾರಕ್ಕಾಗಿ ಸೈಕಲ್ ತುಳಿದ್ರಾ ಬಿಎಸ್‌ವೈ?

ಯತ್ನಾಳ್ ವಿರುದ್ಧ ಸಿಡಿದೆದ್ದ BSY ಬಣ – ಧರ್ಮಸ್ಥಳದಲ್ಲಿ ಆಣೆ ಪ್ರಮಾಣದ ಸವಾಲ್  ಅಧಿಕಾರಕ್ಕಾಗಿ ಸೈಕಲ್ ತುಳಿದ್ರಾ ಬಿಎಸ್‌ವೈ?

ರಾಜ್ಯದ ಕಮಲದ ದಳಗಳು ಚೆಲ್ಲಾಪಿಲ್ಲಿಯಾಗಿವೆ. ಬಿಜೆಪಿಯಲ್ಲಿ ಬಣ ರಾಜಕೀಯ ಆರಂಭವಾಗಿ ಸಾಕಷ್ಟು ದಿನಗಳು ಕಳೆದಿವೆ. ಎರಡು ಬಣಗಳನ್ನು ಕರೆದು ಬುದ್ದಿ ಹೇಳುವ ಅಥವಾ ಎಚ್ಚರಿಕೆ ನೀಡುವ ಕೆಲಸ ಬಿಜೆಪಿ ಹೈಕಮಾಂಡ್ ಇಲ್ಲಿ ತನಕ ಮಾಡಿರಲ್ಲಿ.. ಮಹಾರಾಷ್ಟ್ರದ ಸರ್ಕಾರ ರಚನೆಯ  ಮಂಡೆ ಬಿಸಿಯಲ್ಲಿರುವ ಬಿಜೆಪಿ ವರಿಷ್ಠರು ಕರ್ನಾಟಕದ ಬಣ ರಾಜಕೀಯ ಬಗ್ಗೆ ತಲೆಕೆಡಿಸಿಕೊಂಡಿಲ್ಲ.. ಇದು ಯತ್ನಾಳ್ ಟೀಂ ಮತ್ತು ವಿಜಯೇಂದ್ರ ಟೀಂ ನಡುವಿನ ಗುದ್ದಾಟ ಹೆಚ್ಚಾಗಲು ಕಾರಣವಾಗಿದೆ. ಇಷ್ಟು ದಿನ ಯತ್ನಾಳ್ ಬಣ ಬಿಎಸ್‌ವೈ ಬಣದ ಮೇಲೆ ವಾಗ್ದಾಳಿ ನಡೆಸುತ್ತಿದ್ದರು.. ಈಗ ನೇರವಾಗಿ ಬಿಎಸ್‌ವೈ ಬಣ ಯತ್ನಾಳ್ ವಿರುದ್ಧ ಮಾತಿನ ಅಸ್ತ್ರ ಬಿಡುತ್ತಿದ್ದಾರೆ. ಈ ನಡುವೆ ಯತ್ನಾಳ್‌ಗೆ ಹೈಕಮಾಂಡ್‌ ಬುಲಾವ್ ನೀಡಿದೆ. ಹಾಗಿದ್ರೆ ಕಮಲ ಪಾಳಯದಲ್ಲಿ ಏನೆಲಲಾ ಬೆಳವಣಿಗೆ ಆಗುತ್ತಿದೆ ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: IPL ಹರಾಜಿನಲ್ಲೂ CSK ಫಿಕ್ಸಿಂಗ್ – ಮೋಸದಿಂದ 5 ಸಲ ಟ್ರೋಫಿ ಗೆದ್ರಾ?

ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ದ ತಿರುಗಿ ಬೀಳಲಾರಂಭಿಸಿ ವರ್ಷಗಳ ಮೇಲಾದವು. ಮೊದಲು, ಅವರೊಬ್ಬರೇ ಇದ್ದವರು, ಈಗ ಅವರ ಪಾಳಯಕ್ಕೆ ಇನ್ನಷ್ಟು ಅತೃಪ್ತರು ಬಂದು ಸೇರಿದ್ದಾರೆ. ಒಂದಷ್ಟು ದಿನ ಸುಮ್ಮನಿದ್ದ ಯತ್ನಾಳ್ ಈಗ ಸಟೆದು ನಿಂತಿದ್ದಾರೆ. ಅವರಿಗೆ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ ಮುಂತಾದ ನಾಯಕರೂ ಬೆಂಬಲ ಸೂಚಿಸಿರುವುದರಿಂದ, ಭಿನ್ನಮತೀಯರ ಶಕ್ತಿ ಇನ್ನಷ್ಟು ಪ್ರಭಲಗೊಳ್ಳುತ್ತಿದೆ. ಹಾಗಂತ ಬಿಎಸ್‌ವೈ ಬಣವೇನು ಕಮ್ಮಿ ಇಲ್ಲ, ಯತ್ನಾಳ್ ಬಣದ ವಿರುದ್ಧ ಸಮರ ಸಾರಿದ್ದಾರೆ..  ಯಡಿಯೂರಪ್ಪನವರ ಆಪ್ತರು ಕಟ್ಟಾ ಸುಬ್ರಮಣ್ಯ ನಾಯ್ಡು ಅವರ ನಿವಾಸದಲ್ಲಿ ಸಭೆ ಸೇರಿ, ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡಲು ನಿರ್ಧರಿಸಿದ್ದಾರೆ. ಜೊತೆಗೆ, ದೆಹಲಿಗೆ ತೆರಳಿ, ಯತ್ನಾಳ್ ಮತ್ತು ಟೀಮ್ ವಿರುದ್ದ ದೂರು ನೀಡಲೂ ನಿರ್ಧರಿಸಿದ್ದಾರೆ. ಯತ್ನಾಳ್ ಮತ್ತ ವಿಜಯೇಂದ್ರಗೆ ಅವರ ವಕ್ಫ್ ಪ್ರವಾಸಕ್ಕೆ ಜನ ಬೆಂಬಲ ವ್ಯಕ್ತವಾಗುತ್ತಿದೆಯೋ ಇಲ್ಲವೋ ಗೊತ್ತಿಲ್ಲ,  ಬಿಜೆಪಿಯಲ್ಲಿರುವ ಭಿನ್ನಮತ, ಬಣ ರಾಜಕೀಯ ಮಾತ್ರ ಈ ಮೂಲಕ ದಿನನಿತ್ಯ ಸದ್ದು ಮಾಡುತ್ತಿದೆ. ಇದ್ರಿಂದ ಬಿಜೆಪಿ ಸ್ಥಳೀಯ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಇರುವ ಗೊಂದಲದಿಂದ ಕಾಂಗ್ರೆಸ್ ಪಕ್ಷಕ್ಕೆ ಪ್ಲಸ್ ಆಗುತ್ತಿದೆ. ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಬೇಕಾದವರು, ತಮ್ಮ  ಪಕ್ಷದಲ್ಲಿರುವ ಒಡಕನ್ನ ಹೊರ ಹಾಕುತ್ತಿದ್ದಾರೆ.

ಯತ್ನಾಳ್ ವಿರುದ್ಧ ಬೆಣ್ಣೆನಗರಿಯಲ್ಲಿ ನಿಷ್ಠರ ಸಮರ

ಒಂದೆಡೆ ವಕ್ಪ್ ಆಸ್ತಿ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ನಡೆಸುತ್ತಿದ್ದರೆ, ಮತ್ತೊಂದೆಡೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣದ ನಿಷ್ಠರು ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸಲು ಮುಂದಾಗಿದ್ದಾರೆ.  ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ಬಿ.ಸಿ.ಪಾಟೀಲ್ ಸೇರಿದಂತೆ ಬಿಎಸ್‌ವೈ ಆಪ್ತ ಬಳಗ ದಾವಣಗೆರೆಯಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಸಲು ತೀರ್ಮಾನಿಸಿದ್ದಾರೆ. ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲವನ್ನು ನಿವಾರಿಸಿ ಹೊಸ ಹುರುಪು ತುಂಬಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ. ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವರಾದ ಕುಮಾರ್​ ಬಂಗಾರಪ್ಪ, ಶಾಸಕ ರಮೇಶ್ ಜಾರಕಿಹೊಳಿ ಮತ್ತಿತರರು ಪಕ್ಷದ ಅಧ್ಯಕ್ಷರ ಅನುಮತಿ ಪಡೆಯದೆ ಚಿಹ್ನೆಯನ್ನು ಬಳಸದೆ ಜನಜಾಗೃತಿ ಅಭಿಯಾನಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ತಕ್ಷಣವೇ ವರಿಷ್ಠರು ಮಧ್ಯಪ್ರವೇಶಿಸಿ ಅಭಿಯಾನ ನಡೆಸದಂತೆ ಸ್ಪಷ್ಟ ಸೂಚನೆ ನೀಡಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ. ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಸ್ವಾಮಿ ”ಕೆಲವರು ಪಕ್ಷಕ್ಕಿಂತ ನಾನೇ ದೊಡ್ಡವರೆಂದು ಬಿಂಬಿಸಿಕೊಂಡು ನಾಲ್ಕಾರು ಜನರ ಮೂಲಕ ಅಭಿಯಾನ ನಡೆಸುತ್ತಿದ್ದಾರೆ. ಇದು ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಹೆಚ್ಚಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಸದಾನಂದ ಗೌಡ ಮೇಲೆ ರೆಬಲ್ ಆದ ಯತ್ನಾಳ್

ವಕ್ಫ್ ವಿರುದ್ದ ಪ್ರತ್ಯೇಕವಾಗಿ ಹೋರಾಡುತ್ತಿರುವ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ವಿರುದ್ಧ ಸದಾನಂದ ಗೌಡ್ರು ಕಿಡಿಕಾರಿದ್ರು.  ಯತ್ನಾಳ್ ಟೀಂ  ವಿರುದ್ಧ ಖಾರವಾಗಿ ಮಾತನಾಡಿದ್ರು. ಇದಕ್ಕೆ ರಿಪ್ಲೈ ಕೊಟ್ಟ ಯತ್ನಾಳ್ ಅವರು, ಬಾಯಿ ಮುಚ್ಕೊಂಡ ಇರದಿದ್ರೆ ನಿಮ್ಮ ಬಂಡವಾಳ ಬಯಲು ಮಾಡ್ತೀನಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಅವರ ದೀಪ ಈಗಾಗಲೆ ಆರಿ ಹೋಗಿದೆ. ನಾನು ಯಾರು ಜೊತೆನೂ ಎಡ್ಜಸ್ಟಮೆಂಟ್ ಮಾಡಿಕೊಂಡಿಲ್ಲ. ನಿನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ.. ಇದು ಹೊಸ ವಚನ ಇದೆ. ಇದು ಬಸವ ವಚನ.. ಎಂದು ಸದಾನಂದಗೌಡರ ಬಗ್ಗೆ ವಚನ ಹೇಳಿ ಯತ್ನಾಳ್ ವ್ಯಂಗ್ಯವಾಡಿದರು..

ಸದಾನಂದಗೌಡ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ

ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡ್ತೇನೆ. ಈ ಹಿಂದೆ ಇದೆ ಸದಾನಂದಗೌಡರು ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದಾರೆ, ಇಲ್ಲ ಎನ್ನೋದಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ.. ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡ್ತೀನಿ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ನಾನು ವಕ್ಫ ವಿರುದ್ಧ ಮಾತನಾಡಿದ್ದೇನೆ ಸದಾನಂದಗೌಡ ಯಾಕೆ ಗಾಭರಿಯಾಗಬೇಕು? ಸದಾನಂದಗೌಡರೇ ಗಾಭರಿಯಾಗಬೇಡಿ, ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ ಸದಾನಂದಗೌಡರ ದೀಪ ಆರುತ್ತಿದೆ ಎಂದ ಯತ್ನಾಳ್ ಟಾಂಗ್ ಕೊಟ್ಟಿದ್ದಾರೆ.

ರಕ್ತದ ಪತ್ರ, ಸಿಡಿದೆದ್ದ ಕಮಲ ಕಾರ್ಯಕರ್ತರು

ಈ ನಡುವೆ ಬಿಜೆಪಿ ಕಾರ್ಯಕರ್ತರು ಇದೀಗ ಯತ್ನಾಳ್‌ ವಿರುದ್ಧ ಸಿಡಿದೆದ್ದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿ ಕಾರ್ಯಕರ್ತರು ರಕ್ತದಿಂದ ಸಹಿ ಮಾಡಿ ಪತ್ರವನ್ನೂ ನೀಡಿದ್ದಾರೆ.  ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ನೇತೃತ್ವದಲ್ಲಿ ಈ ಮನವಿ ಸಲ್ಲಿಸಿದ್ದು, ಮಂಡ್ಯದಲ್ಲಿ ಅಂಚೆ ಕಚೇರಿ ಬಳಿ ಪೋಸ್ಟ್ ಮಾಡಿದ್ದಾರೆ. ಇನ್ನು ಈ ಪತ್ರದಲ್ಲಿ, ಯತ್ನಾಳ್ ಅವರ ವಕ್ಪ್ ವಿರುದ್ಧ ಹೋರಾಟ ಸ್ವಾಗತ. ಆದರೆ ರಾಜ್ಯ ನಾಯಕರ ಬಗ್ಗೆ ಮಾತನಾಡುವ ರೀತಿ ಸರಿಯಲ್ಲ. ತಕ್ಷಣವೇ ಯತ್ನಾಳ್ ಮಾತಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ನೀವೇ ಜವಾಬ್ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.

ಯತ್ನಾಳ್‌ಗೆ ದೆಹಲಿಯಿಂದ ಬುಲಾವ್

ದೆಹಲಿ ಹೈಕಮಾಂಡ್‌ನಿಂದ ಯತ್ನಾಳ್‌ಗೆ ಕರೆ ಬಂದಿದೆ. ವರಿಷ್ಠರ ಜೊತೆಗೆ ಮಾತನಾಡಿರೋ ಯತ್ನಾಳ್ ಅವರು ನಾನು ಒಬ್ಬನೇ ಬರೋದಿಲ್ಲ. ನನ್ನ ಟೀಂ ಸಹಿತವಾಗಿಯೇ ಬರುವೆ ಎಂದು ಉತ್ತರಿಸಿದ್ದಾರಂತೆ. ಈ ಬಗ್ಗೆ  ಮಾತನಾಡಿದ ಯತ್ನಾಳ್‌, ” ನನಗೆ ನಿನ್ನೆ ದೆಹಲಿಯಿಂದ ಕಾಲ್ ಬಂದಿತ್ತು. ತಕ್ಷಣ ಹೊರಟು ಬಂದುಬಿಡಿ ಎಂದ ಕರೆ ಮಾಡಿದ್ದರು. ನಾನು ಬರುವುದಿಲ್ಲ ಎಂದು ಹೇಳಿದೆ. ನಮ್ಮದು ಟೀಂ ಇದೆ. ನಾನು ಒಬ್ಬನೇ ಬರಲು ಸಾದ್ಯ ಇಲ್ಲ. ಭ್ರಷ್ಟಾಚಾರ ವಿರುದ್ಧ ವಕ್ಫ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಎಲ್ಲರನ್ನೂ ದೆಹಲಿಗೆ ಕರೆಯಿರಿ ಆಗ ಬಂದು ಕರ್ನಾಟಕದಲ್ಲಿ ಏನು ನಡೆದಿದೆ ಎಂದು ಹೇಳುತ್ತೇವೆ. ಒಬ್ಬರನ್ನು ಕರೆದು ಸಮಾಧಾನ ಮಾಡಲು ಆಗುವುದಿಲ್ಲ. ನಾನು ಯಾವೂದಕ್ಕೂ ಹೆದರುವುದಿಲ್ಲ. ಕ್ಷಮಾಪಣೆ ಕೇಳುವುದಿಲ್ಲ. ನಾನು ಒಂದು ಶಬ್ಧನೂ ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದೇನೆ ಎಂದರು.

ಇಷ್ಟು ದಿನ ಬಿಜೆಪಿ ಮನೆಯೊಳಗೆ ನಡೆಯುತ್ತಿದ್ದ ಜಗಳ ಈಗ ಬೀದಿಗೆ ಬಂದಿದೆ. ಯತ್ನಾಳ್ ಮತ್ತು ವಿಜಯೇಂದ್ರ ಟೀಂ ನಡುವೆ ನೇರಾನೇರಾ ಗುದ್ದಾಟ ನಡೆಯುತ್ತಿದ್ದು, ಇದಕ್ಕೆ ಹೈಕಮಾಂಡ್ ಹೇಗೆ  ಬ್ರೇಕ್ ಹಾಕುತ್ತೆ ಕಾದು ನೋಡಬೇಕಿದೆ.

Shwetha M