ಈಶ್ವರಪ್ಪ ಬೆನ್ನಿಗೆ ನಿಂತ ಯತ್ನಾಳ್.. – ಬಿಎಸ್‌ವೈ ಫ್ಯಾಮಿಲಿಗೆ ಬಿಗ್ ಶಾಕ್

ಈಶ್ವರಪ್ಪ ಬೆನ್ನಿಗೆ ನಿಂತ ಯತ್ನಾಳ್.. – ಬಿಎಸ್‌ವೈ ಫ್ಯಾಮಿಲಿಗೆ ಬಿಗ್ ಶಾಕ್

ಪುತ್ರ ಕಾಂತೇಶ್​ಗೆ ಹಾವೇರಿ ಟಿಕೆಟ್ ಮಿಸ್ ಆಗಿದ್ದಕ್ಕೆ ಬಿ.ಎಸ್ ಯಡಿಯೂರಪ್ಪ ಮತ್ತು ಪುತ್ರರೇ ಕಾರಣ ಎಂದು ಸಿಟ್ಟಾಗಿರೋ ಕೆ.ಎಸ್ ಈಶ್ವರಪ್ಪ ಶಿವಮೊಗ್ಗದಿಂದ ಬಂಡಾಯವಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ಈಗಾಗ್ಲೇ ಭರ್ಜರಿ ಪ್ರಚಾರವನ್ನೂ ನಡೆಸುತ್ತಿದ್ದಾರೆ. ಆದ್ರೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಹೆಸರು ಮತ್ತು ಫೋಟೋಗಳನ್ನ ಬಳಸಿಕೊಂಡಿರೋದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಹಾಗೇ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಇದ್ರಿಂದ ತೀವ್ರ ಸಿಟ್ಟಾಗಿರೋ ಈಶ್ವರಪ್ಪ ಬಿಎಸ್​ವೈ ಫ್ಯಾಮಿಲಿ ವಿರುದ್ಧ ಮತ್ತೆ ಕೆಂಡಾಮಂಡಲರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಬಳಸಬೇಡ ಎಂದು ಹೇಳಲು ಇವರು ಯಾರು ಎಂದು ಪ್ರಶ್ನಿಸಿರುವ ಈಶ್ವರಪ್ಪ ಮತ್ತೊಂದು ಸವಾಲು ಹಾಕಿದ್ದಾರೆ.

ಈಶ್ವರಪ್ಪಗೆ ಯತ್ನಾಳ್ ಸಪೋರ್ಟ್

ಚುನಾವಣೆಯಲ್ಲಿ ನನಗೆ ಮೋದಿ ಫೋಟೋ ಬಳಸಬೇಡಿ ಅಂತಿದ್ದಾರೆ. ಅವರು ಮೋದಿ ಫೋಟೋ ಬಿಟ್ಟು ಚುನಾವಣೆ ನಡೆಸಲಿ. ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ಫೋಟೋಗಳನ್ನ ಇಟ್ಟುಕೊಂಡು ಚುನಾವಣೆ ನಡೆಸಲಿ ನೋಡೋಣ. ನನಗೆ ನರೇಂದ್ರ ಮೋದಿ ಫೋಟೋ ಹಾಕಬೇಡಿ ಅನ್ನಲು ಅವರು ಯಾರು?. ಕೋರ್ಟ್, ಚುನಾವಣಾ ಆಯೋಗ ಏನು ತೀರ್ಮಾನ ಕೊಡುತ್ತದೋ ನೋಡೋಣ ಎಂದು ಹೇಳಿದ್ದಾರೆ. ಈವರೆಗೂ ನನ್ನನ್ನು ಪಕ್ಷದಿಂದ ಉಚ್ಛಾಟಿಸಿಲ್ಲ. ನಾನು ಚುನಾವಣೆಗೆ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿದ್ದೇನೆ. ಆದರೂ ಇದುವರೆಗೆ ನನ್ನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ನನ್ನನ್ನು ಉಚ್ಛಾಟನೆ ಮಾಡದಿರಲು ಏನು ಕಾರಣ ಗೊತ್ತಿಲ್ಲ. ನಾನು ಉಚ್ಛಾಟನೆ ಮಾಡಲಿ ಅಂತಾ ಕಾಯ್ತಿದ್ದೇನೆ ಎಂದಿದ್ದಾರೆ. ಇದೀಗ ಈಶ್ವರಪ್ಪ ನಡೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಸಪೋರ್ಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹೆಸರನ್ನ ಬಳಕೆ ಮಾಡಿಕೊಳ್ಳೋದ್ರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಅಷ್ಟಕ್ಕೂ ಇಲ್ಲಿ ಪ್ರಧಾನಿ ಫೋಟೋ ಬಳಸಿಕೊಳ್ಳೋ ವಿಚಾರದಲ್ಲಿ ಈಶ್ವರಪ್ಪ ಜಾಣ್ಮೆಯ ಹೆಜ್ಜೆ ಇಟ್ಟಿದ್ದಾರೆ.    ಮೋದಿ ಭಾವಚಿತ್ರ ಬಳಸಿಕೊಳ್ಳಲು ಮುನ್ನೆಚ್ಚರಿಕಾ ಕ್ರಮವಾಗಿ ಈಶ್ವರಪ್ಪ ಅವರು ನ್ಯಾಯಾಲಯದಲ್ಲಿ ಕೆವಿಯಟ್ ಸಲ್ಲಿಸಿದ್ದಾರೆ. ಭಾರತದ ಪ್ರಧಾನಿಯ ಭಾವಚಿತ್ರವನ್ನು ಉಪಯೋಗಿಸುತ್ತಿದ್ದು, ಸಂವಿಧಾನದಲ್ಲಿ ಎಲ್ಲಾ ಭಾರತೀಯರು ಪ್ರಧಾನಿಯ ಭಾವಚಿತ್ರವನ್ನು ಬಳಸಿಕೊಳ್ಳಲು ಅವಕಾಶವಿದೆ. ಈಶ್ವರಪ್ಪ ಅವರು, ಸಲ್ಲಿಸಿರುವ ಕೆವಿಯಟ್ ಅವಧಿ ಮೂರು ತಿಂಗಳಾಗಿರುತ್ತದೆ. ಅಷ್ಟರಲ್ಲಿ ಚುನಾವಣೆ ಮುಗಿದಿರುತ್ತದೆ. ಯಾರು ಕೂಡ ಇದರ ವಿರುದ್ಧ ತಡೆ ತರಲು ಬರುವುದಿಲ್ಲ ಎನ್ನುವುದು ಅವರ ಯೋಚನೆ. ಇದರಿಂದ ಮೋದಿ ಭಾವಚಿತ್ರ ಬಳಸಿಕೊಳ್ಳಲು ಈಶ್ವರಪ್ಪನವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ಇದೆಲ್ಲದ್ರ ನಡುವೆ ಈಶ್ವರಪ್ಪ ಶುಕ್ರವಾರ ಅದ್ಧೂರಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇನ್ನು ಮೋದಿ ಫೋಟೋ ಬಳಸದೆ ಪ್ರಚಾರ ಮಾಡಲಿ ಮತ್ತು ಧಮ್ಮಿದ್ದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತನ್ನನ್ನು ಪಕ್ಷದಿಂದ ಉಚ್ಚಾಟಿಸಲಿ ಎಂದಿರುವ ಕೆಎಸ್ ಈಶ್ವರಪ್ಪ ಸವಾಲಿಗೆ ಬಿ.ವೈ ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಅವರ ಮಾತುಗಳಿಂದ ಗಾಬರಿಯಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಂದೆಡೆ ಈಶ್ವರಪ್ಪ ಬಂಡಾಯ ಸ್ಪರ್ಧೆಯಿಂದ ಶಿವಮೊಗ್ಗ ಕ್ಷೇತ್ರ ಹೈವೋಲ್ಟೇಜ್ ಕಣವಾಗಿ ಮಾರ್ಪಟ್ಟಿದೆ.

ತ್ರಿಕೋನ ಸ್ಪರ್ಧೆ

ಮಲೆನಾಡಿನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಜಿಲ್ಲೆಯ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳ ಮಕ್ಕಳು ಕಣಕ್ಕಿಳಿಯುವುದರ ಜೊತೆಗೆ ಬಿಜೆಪಿ ಬಂಡಾಯ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಸ್ಪರ್ಧಿಸುವುದು ನಿಶ್ಚಿತವಾದರೆ ಈ ಬಾರಿ ಜಿಲ್ಲೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಈಶ್ವರಪ್ಪ ಕಣದಲ್ಲಿ ಉಳಿದರೆ ಕ್ಷೇತ್ರದಲ್ಲಿ ಸ್ಪರ್ಧೆ ರೋಚಕತೆ ಪಡೆಯುವ ಸಾಧ್ಯತೆಯಿದೆ. ಬಿ ವೈ ರಾಘವೇಂದ್ರ ಅವರು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಹಿರಿಯ ಸಹೋದರ. ಗೀತಾ ಅವರು ಮಾಜಿ ಸಿಎಂ ದಿವಂಗತ ಎಸ್ ಬಂಗಾರಪ್ಪ ಅವರ ಪುತ್ರಿ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಹೋದರಿ. ಸ್ಯಾಂಡಲ್‌ವುಡ್ ಸೂಪರ್‌ಸ್ಟಾರ್ ಶಿವರಾಜ್‌ಕುಮಾರ್ ಅವರ ಪತ್ನಿಯೂ ಹೌದು. ಇನ್ನು ಈಶ್ವರಪ್ಪಗೂ ಹಿಂದುತ್ವದ ಬಲ ಇರೋದ್ರಿಂದ ತ್ರಿಕೋನ ಸ್ಪರ್ಧೆ ನಡೆಯಲಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರವು ಶಿವಮೊಗ್ಗ ಜಿಲ್ಲೆಯಲ್ಲಿ ಏಳು ಮತ್ತು ಉಡುಪಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನ ಹೊಂದಿದೆ. ಒಟ್ಟಾರೆ ಮಾಜಿ ಸಿಎಂಗಳ ಮಕ್ಕಳ ಕದನ ಒಂದ್ಕಡೆಯಾದ್ರೆ ಈಶ್ವರಪ್ಪರ ರೆಬೆಲ್ ಎಂಟ್ರಿ ಜಿಲ್ಲೆಯ ರಾಜಕೀಯ ದಿಕ್ಕನ್ನೇ ಬದಲಿಸಿದೆ.

Shwetha M