ಯತ್ನಾಳ್ ಹೊಸ ಪಕ್ಷ ಕಟ್ತಾರಾ? ಹೊಸ ಪಕ್ಷ ಕಟ್ಟಿ ಗೆದ್ದವರೆಷ್ಟು?
ಜನಕ್ಕೆ ವ್ಯಕ್ತಿಗಿಂತ ಪಕ್ಷನೇ ಮುಖ್ಯನಾ?

ಯತ್ನಾಳ್ ಹೊಸ ಪಕ್ಷ ಕಟ್ತಾರಾ?   ಹೊಸ ಪಕ್ಷ ಕಟ್ಟಿ ಗೆದ್ದವರೆಷ್ಟು?ಜನಕ್ಕೆ ವ್ಯಕ್ತಿಗಿಂತ ಪಕ್ಷನೇ ಮುಖ್ಯನಾ?

ನೇರಾವಾಗಿ ಸ್ವಪಕ್ಷದವರ ವಿರುದ್ಧ ಅದರಲ್ಲೂ ಬಿಎಸ್ ಯೂಡಿಯರಪ್ಪ ಮತ್ತು ಅವರ ಮಗನ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್‌ರನ್ನ ಬಿಜೆಪಿ ಪಕ್ಷದಿಂದ ಹೊರ ಹಾಕಿದೆ. ಹಿರಿಯ ನಾಯಕ, ಪಕ್ಷಕ್ಕಾಗಿ ದುಡಿದ ರಾಜಕರಾಣಿ, ಹಿಂದುತ್ವವಾದಿ ಆಗಿರೋ ಯತ್ನಾಳ್ ಮುಂದಿನ ನಡೆ ಏನು ಅನ್ನೋದೆ ಯಕ್ಷ ಪ್ರಶ್ನೆಯಾಗಿದೆ. ಈಗಾಗಲೇ ಯತ್ನಾಳ್ ಹೊಸ ಪಕ್ಷ ಕಟ್ಟುವ ಸುಳಿವನ್ನ ನೀಡಿದ್ದಾರೆ. ತಮ್ಮ ಹೊಸ ಪಕ್ಷ ಸ್ಥಾಪನೆ ಕುರಿತಂತೆ ಮಾತನಾಡಿದ ಯತ್ನಾಳ್, ಪಕ್ಷಕ್ಕೆ ಜಾತಿ ಬಣ್ಣ ಮೀರಿದ ಗುರುತು ನೀಡಲು ಯತ್ನಿಸಲಾಗುವುದು, ನಾವು ಕಿತ್ತೂರು ರಾಣಿ ಚನ್ನಮ್ಮ ಅಥವಾ ರಾಯಣ್ಣ ಬ್ರಿಗೇಡ್‌ಗೆ ಸೀಮಿತವಾಗದೆ  ಹಿಂದೂ ಸಮುದಾಯಕ್ಕಾಗಿ ಕೆಲಸ ಮಾಡುತ್ತೇವೆ. ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಮಹರ್ಷಿ ವಾಲ್ಮೀಕಿ ಮತ್ತು ಬಿ ಆರ್ ಅಂಬೇಡ್ಕರ್ ಅವರನ್ನು ನಂಬುವವರೆಲ್ಲರನ್ನು ನಾವು ಕರೆದುಕೊಂಡು ಹೋಗುತ್ತೇವೆ. ವಿಜಯದಶಮಿಯವರೆಗೂ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ನಂತರ ಮುಂದಿನ ರಾಜಕೀಯ ನಡೆ ನಿರ್ಧರಿಸಲಿದ್ದೇವೆ ಎಂದು ಯತ್ನಾಳ್ ಹೇಳಿದ್ದಾರೆ. ಈ ಮಾತು ಕೇಳಿದ ಮೇಲೆ ಅನ್ಸತ್ತಾ ಇರೋದ್ ಏನಪ್ಪ ಅಂದ್ರೆ ಯತ್ನಾಳ್ ಹೊಸ ಪಕ್ಷ ಸಕ್ಸಸ್ ಆಗುತ್ತಾ ನಮ್ಮ ರಾಜ್ಯದಲ್ಲಿ ಅನ್ನೋದು.. ಯಾಕಂದ್ರೆ ಘಟಾನುಘಟಿ ನಾಯಕರೇ ಹೊಸ ಪಕ್ಷ ಕಟ್ಟಿ ಏನ್ ಆಯ್ತು ಅನ್ನೋದು ಗೊತ್ತಿರೋ ವಿಷ್ಯ..

ಕರ್ನಾಟಕದಲ್ಲಿ  ವ್ಯಕ್ತಿಗಿಂತ ಪಕ್ಷನೇ ಮುಖ್ಯ

ನಿಜ.. ನಮ್ಮ ಕರ್ನಾಟಕದಲ್ಲಿ ಪಕ್ಷ ನೋಡಿನೇ ವೋಟ್ ಹಾಕೋರು  ಹೆಚ್ಚು.. ಅದು ಕಾಂಗ್ರೆಸ್ ಆಗಿರಲಿ.. ಬಿಜೆಪಿ ಆಗಿರಲಿ ಅಥವಾ ಜೆಡಿಎಸ್‌ ಆಗಿರಲಿ..  ವ್ಯಕ್ತಿಗಿಂತ ಪಕ್ಷವೇ ಮುಖ್ಯ ಎನ್ನುವುದಕ್ಕೆ ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಉದಾಹರಣೆ.. ರಾಜ್ಯದಲ್ಲಿ, ಮೂಲ ಪಕ್ಷದಿಂದ ಹಿಡಿದು, ಹೊಸ ಪಕ್ಷ ಕಟ್ಟಿ ಮರೆದವರ ಕಥೆ ಏನಾಯಿತು? ಸಾರೇಕೊಪ್ಪ ಬಂಗಾರಪ್ಪನವರಿಂದ ಹಿಡಿದು, ಜನಾರ್ದನ ರೆಡ್ಡಿಯವರೆಗೆ ಎಲ್ಲರೂ ಹೊಸ ಪಕ್ಷವನ್ನು ಕಟ್ಟಿ, ಸೋತು ಸುಣ್ಣವಾಗಿ, ಮೂಲ ಪಕ್ಷಕ್ಕೇ ವಾಪಾಸ್ ಆದ್ರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಾರ್ಟಿ ಸೇರಿ, ಧಾರವಾಡ ಸೆಂಟ್ರಲ್ ನಿಂದ ಸ್ಪರ್ಧಿಸಿದ್ದ ಜಗದೀಶ್ ಶೆಟ್ಟರ್, ಬಿಜೆಪಿ ಅಭ್ಯರ್ಥಿ ವಿರುದ್ದ ಸೋತ್ರು.. ಆಮೇಲ್ ಏನಾಯ್ತು,  ಮತ್ತೆ ಪಾರ್ಟಿಗೆ ವಾಪಸ್ ಆದರು.

 ಠೇವಣಿಯನ್ನೇ ಕಳೆದುಕೊಂಡ ಈಶ್ವರಪ್ಪ

ಹಾವೇರಿಯಲ್ಲಿ ಮಗನಿಗೆ ಟಿಕೆಟ್ ಸಿಕ್ಕಿಲ್ಲ ಅಂತ ಶಿವಮೊಗ್ಗದಲ್ಲಿ ಬಂಡಾಯವಾಗಿ ಈಶ್ವರಪ್ಪ ಸ್ಪರ್ಧಿಸಿದ್ದರು. ಶಿವಮೊಗ್ಗದ ಪ್ರಭಾವೀ ನಾಯಕರಾಗಿದ್ದ ಈಶ್ವರಪ್ಪನವರ ಸ್ಪರ್ಧೆ ಬಿಜೆಪಿಯ ಮತಬ್ಯಾಂಕ್ ಇಬ್ಬಾಗವಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಆಗಿದ್ದೇನೆ? ಮತವಿಭಜನೆ ದೂರದ ಮಾತು, ಈಶ್ವರಪ್ಪನವರು ಠೇವಣಿಯನ್ನೇ ಕಳೆದುಕೊಂಡರು. ಇಲ್ಲಿ ಈಶ್ವರಪ್ಪ ಸೋತರು, ಬಿ.ವೈ.ರಾಘವೇಂದ್ರ ಗೆದ್ದರು ಎನ್ನುವುದಕ್ಕಿಂತ ಹೆಚ್ಚಾಗಿ, ಮತದಾರ ನೋಡುವುದು ಪಕ್ಷವನ್ನೇ ಹೊರತು ವ್ಯಕ್ತಿಯನ್ನಲ್ಲಾ ಎಂದು ಸಾಬೀತಾಗಿ ಹೋಯಿತು.

ಎರಡು ಬಾರಿ ಪಕ್ಷ ಕಟ್ಟಿದ ಬಂಗಾರಪ್ಪ

ಕಾಂಗ್ರೆಸ್ ವಿರುದ್ದ ತಿರುಗಿಬಿದ್ದ ಮಾಜಿ ಸಿಎಂ ಬಂಗಾರಪ್ಪ, ಎರಡು ಬಾರಿ ಪಕ್ಷವನ್ನು ಕಟ್ಟಿದರು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಂತರ ಕರ್ನಾಟಕ ಕಾಂಗ್ರೆಸ್ ಪಾರ್ಟಿಯನ್ನು ಹುಟ್ಟು ಹಾಕಿದರು. 1996ರಲ್ಲಿ ಇದೇ ಪಾರ್ಟಿಯಿಂದ ಲೋಕಸಭಾ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ಇದಾದ ನಂತರ, ಅಲ್ಲಿಂದ ಸಮಾಜವಾದಿ ಪಾರ್ಟಿಗೆ ಸೇರಿ ಗೆಲುವನ್ನು ಸಾಧಿಸಿದರು. ಇದಾದ ನಂತರ ಮತ್ತೆ ಕಾಂಗ್ರೆಸ್ ಸೇರಿ, ಬಿಜೆಪಿ ವಿರುದ್ದ ಸೋತ್ರು. 1996ರಲ್ಲಿ ಕಾಂಗ್ರೆಸ್ಸಿಗೆ ಮರಳಿದ್ರು. ಮತ್ತೆ ಕರ್ನಾಟಕ ವಿಕಾಸ ಪಾರ್ಟಿಯನ್ನು ಕಟ್ಟಿದರು. 1998ರ ಚುನಾವಣೆಯಲ್ಲಿ ಸೋತ ನಂತರ, ಮತ್ತೆ ಕಾಂಗ್ರೆಸ್ ಸೇರ್ಪಡೆಗೊಂಡರು.

ಯಡಿಯೂರಪ್ಪ ಕೈಯಲ್ಲೂ ಹೊಸ ಪಕ್ಷ ಉಳಿಸಿಕೊಳ್ಳಲು ಆಗಲಿಲ್ಲ

ಬಿಜೆಪಿಯನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಲು ಪ್ರಮುಖ ಕಾರಣರಾದ, ಬಿ.ಎಸ್.ಯಡಿಯೂರಪ್ಪ ಪಕ್ಷದ ಹೈಕಮಾಂಡ್ ಮತ್ತು ರಾಜ್ಯದ ಕೆಲವು ನಾಯಕರ ವಿರುದ್ದ ಸೆಟೆದು ಬಿಜೆಪಿ ಬಿಟ್ಟು  ಕೆಜೆಪಿ ಕಟ್ಟಿದರು. ತಮ್ಮ ಪಕ್ಷಕ್ಕೆ ಕೇವಲ ಆರು ಸ್ಥಾನ ಮಾತ್ರ ಬಂದರೂ, ಬಿಜೆಪಿಯನ್ನು ಅಧಿಕಾರಕ್ಕೇರದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದಾದ ನಂತರದ ಬೆಳವಣಿಗೆಯಲ್ಲಿ ಕೆಜೆಪಿಯನ್ನು ಬಿಜೆಪಿ ಜೊತೆ ವಿಲೀನಗೊಳಿಸಿದ್ದರು. ಆದ್ರೆ ಈ ಹೊಸ ಪಕ್ಷದಿಂದ ಲಾಭ ಆಗಿದ್ದು ಮಾತ್ರ ಕಾಂಗ್ರೆಸ್‌ಗೆ.. ಯಾಕಂದ್ರೆ ಬಹುಮತ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯಿತು.

ಅಷ್ಟೇ ಯಾಕೆ ಈಗಿನ ಸಿಎಂ ಸಿದ್ದರಾಮಯ್ಯ ಕೂಡ  ಜೆಡಿಎಸ್ ಬಿಟ್ಟು  ಅಖಿಲ ಭಾರತ ಪ್ರಗತಿಪರ ಜನತಾದಳ   ಎನ್ನುವ ಹೊಸ ಪಕ್ಷವನ್ನು ಹುಟ್ಟುಹಾಕಿದ್ದರು. ಆದರೆ, ಯಾವುದೇ ಚುನಾವಣೆಯನ್ನು ಎದುರಿಸದೇ, ಪಕ್ಷವನ್ನು ವಿಸರ್ಜಿಸಿ, ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

 ಹೊಸ ಪಕ್ಷ ಕಟ್ಟಿ ಮತ್ತೆ ಬಿಜೆಪಿ ಸೇರಿದ ರೆಡ್ಡಿ

ಬಳ್ಳಾರಿ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಜನಾರ್ದನ ರೆಡ್ಡಿ ಕೂಡಾ ಬಿಜೆಪಿಯನ್ನು ಹಲವು ಭಿನ್ನಾಭಿಪ್ರಾಯದ ಹಿನ್ನಲೆಯಲ್ಲಿ ತೊರೆದು, ಹೊಸ ಪಕ್ಷವನ್ನು ಕೆಆರ್ ಪಿಪಿ  2023ರಲ್ಲಿ ಹುಟ್ಟು ಹಾಕಿದರು. ರೆಡ್ಡಿ ಚುನಾವಣೆಯನ್ನು ಗೆದ್ದಿದ್ದರು ಮತ್ತು ಬಳ್ಳಾರಿಯಲ್ಲಿ ಬಿಜೆಪಿ ಗೆಲುವಿಗೆ ಅಡ್ಡಗಾಲು ಹಾಕಿದ್ರು. ಇದಾದ ನಂತರ, ದೆಹಲಿ ಮಟ್ಟದಲ್ಲಿ ಮಾತುಕತೆಯ ನಂತರ ಬಿಜೆಪಿಗೆ ಸೇರ್ಪಡೆಗೊಂಡರು. ಬಿ.ಶ್ರೀರಾಮುಲು ಕೂಡಾ ಹೊಸ ಪಕ್ಷವನ್ನು ಕಟ್ಟಿದ್ದರು. ಬಿಎಸ್ಆರ್   ಪಕ್ಷವನ್ನು ಸ್ಥಾಪಿಸಿ, ಕೆಲವೊಂದು ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತವನ್ನು ಕೊಟ್ಟಿದ್ದರು. ಪಾರ್ಟಿಯಿಂದ ನಾಲ್ವರು ಗೆಲುವು ಸಾಧಿಸಿದ್ದರು. ನಂತರ ಪಕ್ಷವನ್ನು ಮುನ್ನಡೆಸಲಾಗದೇ, ಪಾರ್ಟಿಯನ್ನು ಬಿಜೆಪಿಗೆ ಸೇರ್ಪಡೆಗೊಳಿಸಿದ್ದರು.

ನೋಡಿ ಇವರೆಲ್ಲಾ ಕೂಡ ಯತ್ನಾಳ್‌ಗಿಂತ ಘಟಾನುಘಟಿ ನಾಯಕರು ಸಿಎಂ ಕೂಡ ಆದವರು ಇದ್ದಾರೆ. ಇವರ ಹತ್ರನೇ ಪಕ್ಷ ಕಟ್ಟಿ ಉಳಿಸಿಕೊಳ್ಳೋಕೆ ಆಗಿಲ್ಲ. ಹಿಂದುತ್ವ ಅಂತಾ  ಹೋಗಿ ಪಕ್ಷ ಕಟ್ಟಿದವರು ಕೂಡ ಸೋತು ಹೋಗಿದ್ದಾರೆ. ಯತ್ನಾಳ್ ಕೂಡ ಹಿಂದುತ್ವದ ಹೆಸರಲ್ಲಿ ಪಕ್ಷ ಕಟ್ಟೋದು ಸುಲಭದ ಮಾತಲ್ಲ.  ಅವರ ಕ್ಷೇತ್ರದಲ್ಲಿ ಒಂದಷ್ಟು ಜನ ಅವರ ಹಿಂದೆ ಹೋಗಬಹುದು. ಆದ್ರೆ ಅರ್ಧಕ್ಕೆ ಅರ್ಧ ಬಿಜೆಪಿಯ ಕಾರ್ಯಕರ್ತರು ಯತ್ನಾಳ್ ಹಿಂದೆ ಹೋಗಲ್ಲ. ಯಾಕಂದ್ರೆ ಬಿಜೆಪಿ ದೊಡ್ಡ ಪಕ್ಷ..ಹೀಗಾಗಿ ಅಳೆದು ತೂಗಿನೇ ಯತ್ನಾಳ್ ಇಲ್ಲಿ ನಿರ್ಧಾರ ತೆಗೆದುಕೊಳ್ತಾರೆ. ಅಭಿಪ್ರಾಯವನ್ನ ಸಂಗ್ರಹ ಮಾಡ್ತಾರೆ..

ಯತ್ನಾಳ್ ಹೊಸ ಪಕ್ಷ ಕಟ್ಟಲ್ಲ ಎಂದ ರಮೇಶ್

ಯತ್ನಾಳ್‌ ಹೊಸ ಪಕ್ಷ ಕಟ್ಟಲ್ಲ ಬಿಜೆಪಿಯಲ್ಲೇ ಮುಂದುವರೆಯುತ್ತಾರೆ ಅಂತ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ‌ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಅವರು, ಯತ್ನಾಳ್‌ ಬಿಜೆಪಿಗೆ ವಾಪಸ್ ಬರ್ತಾರೆ, ಯತ್ನಾಳ್‌ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ, ಮಾಧ್ಯಮದಲ್ಲಿ ಬಂದಿರೋದೆ ಬೇರೆ, ಬಿಜೆಪಿಯಲ್ಲಿ ಯತ್ನಾಳ್‌ ಮುಂದುವರೆಯವ ವಿಶ್ವಾಸವಿದೆ, ಎಲ್ಲಿಯೂ ಹೋಗಲ್ಲ ಎಂದು ಹೇಳಿದರು. ಹಿಂದೂತ್ವಕ್ಕಾಗಿ ಹೊಸ ಪಕ್ಷ ಸ್ಥಾಪನೆ ವಿಚಾರ, ಆರ್‌ಎಸ್‌ಎಸ್ ಇದೆಯಲ್ಲ, ಅಷ್ಟೇ ಸಾಕು, ಮೊನ್ನೆ ಶಾಸಕರ ಕಮಿಟಿ ಮೀಟಿಂಗ್‌ನಲ್ಲಿ ಚರ್ಚೆ ಆಗಿದೆ, ಪಕ್ಷಕ್ಕೆ ಮುಜುಗರ ಆಗೋತರಾ ಹೇಳಿಕೆ ಕೊಡಬೇಡ ಅಂತಾ ಹೇಳಿದ್ದೇವೆ ಎಂದು ಹೇಳಿದರು. ಇಲ್ಲೇ ಅರ್ಥ ಆಗುತ್ತೆ ನೋಡಿ ಯತ್ನಾಳ್‌ ಹೊಸ ಪಕ್ಷ ಕಟ್ಟಲ್ಲ. ಯಾಕಂದ್ರೆ ಇದು ಅಷ್ಟು ಸುಲಭ ಅಲ್ಲ. ಹೀಗಾಗಿ ಯತ್ನಾಳ್ ಕೋಪದಲ್ಲಿ ಮುಗು ಕೊಯ್ದು ಕೊಳ್ಳುವ ಕೆಲಸ ಮಾಡಲ್ಲ.. ಅವರ ಜೊತೆ ಇರೋ ರೆಬಲ್ಸ್ ನಾಯಕರು ಕೂಡ ಬಿಜೆಪಿ ಬಿಟ್ಟು ಹೋಗಲ್ಲ.. ಯಾಕಂದ್ರೆ ಈಗಾಗಲೇ ಬಿಜೆಪಿ ಬಿಟ್ಟು ಹೋದವರು ಏನೆಲಾದ್ರೂ ಅನ್ನೋ ಇವರಿಗೂ ಗೊತ್ತಿದೆ.. ಹೀಗಾಗಿ ಯತ್ನಾಳ್ ಕಾದು ನೋಡುವ ತಂತ್ರಕ್ಕೆ ಮುಂದಾಗಬಹುದು..

Kishor KV

Leave a Reply

Your email address will not be published. Required fields are marked *