ಮೌಲ್ವಿ ಮುಂದಿಟ್ಟು ಸಿದ್ದರಾಮಯ್ಯಗೆ ಗುರಿ ಇಟ್ಟ ಯತ್ನಾಳ್ – ರಾಜ್ಯ ರಾಜಕೀಯದಲ್ಲಿ ನಿಲ್ಲದ ಜಟಾಪಟಿ

ಮೌಲ್ವಿ ಮುಂದಿಟ್ಟು ಸಿದ್ದರಾಮಯ್ಯಗೆ ಗುರಿ ಇಟ್ಟ ಯತ್ನಾಳ್ – ರಾಜ್ಯ ರಾಜಕೀಯದಲ್ಲಿ ನಿಲ್ಲದ ಜಟಾಪಟಿ

ಸರ್ಕಾರ ಯಾವುದೇ ಇರಲಿ ಸಿಎಂ ಯಾರೇ ಆಗಿರಲಿ ಸದಾ ಗರ್ಜಿಸುವ ನಾಯಕ ಅಂದ್ರೆ ಅದು ಬಸನಗೌಡ ಪಾಟೀಲ್ ಯತ್ನಾಳ್. ಬಿಜೆಪಿಯ ಫೈರ್ ಬ್ರ್ಯಾಂಡ್ ಲೀಡರ್ ಅಂತಾನೇ ಕರೆಸಿಕೊಳ್ಳುವ ಯತ್ನಾಳ್, ತಮ್ಮದೇ ಸರ್ಕಾರ ಆಗಲಿ ಸ್ವಪಕ್ಷ ನಾಯಕರೇ ಇರಲಿ ಯಾವ ಮುಲಾಜನ್ನೂ ನೋಡದೇ ಅಲ್ಲೇ ಡ್ರಾ ಅಲ್ಲೇ ಬಹುಮಾನ ಅನ್ನೋ ಹಾಗೇ ಮಾತಾಡ್ತಾರೆ. ಈಗಂತೂ ಬಿಜೆಪಿ ಮತ್ತು ಕಾಂಗ್ರೆಸ್ ಪಾಲಿಗೆ ಯತ್ನಾಳರೇ ಬಿಸಿ ತುಪ್ಪವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಮತ್ತು ವಿಪಕ್ಷನಾಯಕರಾಗಿ ಆರ್.ಅಶೋಕ್ ಆಯ್ಕೆಯಾದ ಮೇಲೆ ಯತ್ನಾಳರ ಪಿತ್ತ ನೆತ್ತಿಗೇರಿದೆ. ಬಹಿರಂಗವಾಗೇ ಹೇಳಿಕೆ ನೀಡುತ್ತಾ ಬಿಜೆಪಿಯನ್ನ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇದು ಒಂದ್ಕಡೆಯಾದ್ರೆ ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹುದೊಡ್ಡ ಬಾಂಬ್ ಸಿಡಿಸಿದ್ದಾರೆ. ಐಸಿಸ್ ಉಗ್ರರ ಲಿಂಕ್ ಇರುವ ಮೌಲ್ವಿ ಜೊತೆ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ಎನ್​ಐಎ ತನಿಖೆ ಆಗ್ಬೇಕು ಅಂತಾ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಯತ್ನಾಳರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಕಾಂಗ್ರೆಸ್ ನಾಯಕರು ಯತ್ನಾಳ್ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.

ಇದನ್ನೂ ಓದಿ : ಪ್ರಶ್ನೆಗಾಗಿ ನಗದು ಪ್ರಕರಣ – ಮಹುವಾ ಮೊಯಿತ್ರಾ ಸಂಸತ್ತಿನಿಂದ ಉಚ್ಚಾಟನೆ

ಹಿಂದೂ ಹುಲಿ ಅಂತಾನೇ ಕರೆಸಿಕೊಳ್ಳುವ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ರಾಜಕಾರಣದ ಪ್ರಭಾವಿ ನಾಯಕ. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಐಸಿಸ್ ನಂಟು ಹೊಂದಿರುವ ಮೌಲ್ವಿ ಜೊತೆ ವೇದಿಕೆ ಹಂಚಿಕೊಂಡಿದ್ದಾರೆಂದು ಸ್ಫೋಟಕ ಆರೋಪ ಮಾಡಿದ್ದಾರೆ. ಡಿಸೆಂಬರ್ 4ರಂದು ಹುಬ್ಬಳ್ಳಿಯಲ್ಲಿ ಅವಲಾದ ಗೌಸ ಎ ಆಜಮ್ ಸಮ್ಮೇಳನ ನಡೆದಿತ್ತು. ಇದೇ ವೇದಿಕೆಯಲ್ಲಿ ವಿವಿಧ ದರ್ಗಾಗಳ ಪೀಠಾಧೀಶರು, ರಾಜಕೀಯ ಧುರೀಣರು, ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್. ಕೆ ಪಾಟೀಲ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ರು. ಹಾಗೂ ಮುಸ್ಲಿಂ ಧರ್ಮಗುರು ಮೊಹಮ್ಮದ್ ತನ್ವೀರ್ ಪೀರ್ ಹಾಸ್ಮಿ ಸೇರಿದಂತೆ  ಮುಸ್ಲಿಂ ಸಮುದಾಯದ ಪ್ರಮುಖ ಮೌಲ್ವಿಗಳೆಲ್ಲಾ ಹಾಜರಿದ್ರು. ಸಿಎಂ ಸಿದ್ದರಾಮಯ್ಯ ಪಕ್ಕದಲ್ಲೇ ತನ್ವೀರ್ ಪೀರ್ ಕುಳಿತುಕೊಂಡಿದ್ದರು. ಆದ್ರೆ ಈ ಸಮಾವೇಶದ ಬಳಿಕವೇ ವಿವಾದ ಭುಗಿಲೆದ್ದಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಐಸಿಸ್ ನಂಟಿನ ಬಾಂಬ್ ಸಿಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಐಸಿಸ್ ಬೆಂಬಲಿಗ ಹಾಗೂ ಉಗ್ರರ ಮೇಲೆ ಸಹಾನುಭೂತಿಯಳ್ಳ ತನ್ವೀರ್ ಫೀರ್ ಎಂಬಾತನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿರುವ ಯತ್ನಾಳ್, ಟ್ವೀಟ್ ಮೂಲಕ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ತನ್ವೀರ್ ಫೀರ್ ಮಧ್ಯಪ್ರಾಚ್ಯದಲ್ಲಿ ಉಗ್ರರೊಂದಿಗೆ ಸಂಬಂಧ ಇರುವವರ ಜೊತೆ ನಂಟು ಹೊಂದಿದ್ದಾರೆ ಎಂದು ಬಿಂಬಿಸುವ ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಪೀರಾ ಈ ಹಿಂದೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ ರ್ಯಾಡಿಕಲ್ ಇಸ್ಲಾಮಿಕ್ ಔಟ್​​ಫಿಟ್ ನಾಯಕರನ್ನು ಭೇಟಿಯಾಗಿದ್ದರು ಎಂಬುದು ನನ್ನ ಗಮನಕ್ಕೆ ಬಂದಿದೆ. ಪೀರಾ ಅವರು ನಮ್ಮ ರಾಷ್ಟ್ರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಮುಸ್ಲಿಂ ರಾಷ್ಟ್ರಗಳಿಂದ ನಿಧಿಯನ್ನು ತರುತ್ತಿದ್ದಾರೆ ಎಂದು ಮಾಹಿತಿ ನನಗೆ ಸಿಕ್ಕಿದೆ. ಪಾಕಿಸ್ತಾನದ ಐಎಸ್‍ಐ ಹಾಗೂ ಭಯೋತ್ಪಾದನೆ ಸಂಘಟನೆಗಳ ಜೊತೆ ಸಂಪರ್ಕ ಇಟ್ಟುಕೊಂಡಿರುವ ಮೌಲ್ವಿ ಜೊತೆ ಸಿದ್ದರಾಮಯ್ಯ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡಿದ್ದು ಅತ್ಯಂತ ದುರ್ದೈವ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದಾಗ ಅದು ಹೇಗೆ ಜಾರಿ ಮಾಡುತ್ತೀರಿ ಎಂದು ಇದೇ ಮೌಲ್ವಿ ಪ್ರಾಣ ಬೆದರಿಕೆ ಹಾಕಿದ್ದ. ಇಂಥವರ ಬಗ್ಗೆ ಕಾಳಜಿ ತೋರುವ ಮುಖ್ಯಮಂತ್ರಿ ವೇದಿಕೆ ಹಂಚಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.

ಇದನ್ನ ಇಷ್ಟಕ್ಕೇ ಬಿಡದ ಯತ್ನಾಳ್, ತನ್ವೀರ್ ಪೀರಾಗೆ ಐಸಿಸ್ ಜೊತೆ ನಂಟಿದ್ದು ಈ ಬಗ್ಗೆ ಎನ್​ಐಎ ತನಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ಪೀರಾ ಅವರು ಐಸಿಸ್ ನಾಯಕರ ಭೇಟಿಯ ಉದ್ದೇಶ, ಪ್ರಯಾಣದ ನಿಧಿಯ ಮೂಲಗಳನ್ನು ಗುರುತಿಸಲು ತನಿಖೆ ಮಾಡಲು ವಿಚಾರಣೆಗೆ ಒಳಪಡಿಸಬೇಕು. ಇದಕ್ಕೆ ಕೇಂದ್ರ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.  ಇನ್ನು ವಿವಾದ ತಾರಕಕ್ಕೇರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಮುಸ್ಲಿಂ ಗುರು ಪೀರಾ ಜೊತೆ ನನಗೆ ಹಲವು ವರ್ಷದ ನಂಟಿದೆ. ಬಸನಗೌಡ ಪಾಟೀಲ್ ಯತ್ನಾಳ್ ಮಹಾ ಸುಳ್ಳುಗಾರ. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಬೇಕಿದ್ದರೆ ಆರೋಪವನ್ನು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಮತ್ತೊಂದೆಡೆ ಯತ್ನಾಳ್​ಗೆ ತಿರುಗೇಟು ನೀಡಿರುವ ಧರ್ಮ ಗುರು ತನ್ವೀರ್ ಪೀರ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನನಗೆ ಯಾವುದೇ ಐಸಿಸ್ ಸಂಘಟನೆ ಜೊತೆ ಲಿಂಕ್ ಇಲ್ಲ. ಹಾಗೇನಾದ್ರೂ ಸಾಬೀತು ಪಡಿಸಿದ್ದೇ ಆದಲ್ಲಿ ದೇಶ ಬಿಟ್ಟು ಹೋಗೋಕೂ ರೆಡಿ ಅಂತಾ ಚಾಲೆಂಜ್ ಮಾಡಿದ್ದಾರೆ.

ಯತ್ನಾಳ್ ವಿರುದ್ಧ ಕಿಡಿ ಕಾರಿರುವ ತನ್ವೀರ್ ಪೀರಾ ಹಾಸ್ಮಿ, ಯತ್ನಾಳ್ ಆರೋಪ ಸಾಬೀತಾದರೆ ದೇಶವನ್ನೇ ತೊರೆಯುತ್ತೇನೆ. ನನಗೆ ಐಸಿಸ್ ಉಗ್ರರ ಜೊತೆ ನಂಟಿದೆ ಎಂಬುದನ್ನು ಕೇಂದ್ರ ಮತ್ತು ರಾಜ್ಯದ ಎಲ್ಲಾ ತನಿಖಾ ಸಂಸ್ಥೆಗಳಿಗೆ ಯತ್ನಾಳ್ ದಾಖಲೆ ಸಮೇತ ಸಾಬೀತು ಮಾಡಬೇಕು. ಒಂದು ವಾರದೊಳಗೆ ಐಸಿಸ್ ಉಗ್ರರ ಜೊತೆಗೆ ನನ್ನ ನಂಟಿದೆ ಎಂಬುದನ್ನು ದಾಖಲೆ ಸಮೇತ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಶಾಸಕರ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕೆಂದು ತನ್ವೀರ್ ಪೀರಾ ಸವಾಲು ಹಾಕಿದ್ದಾರೆ. ನಾನಷ್ಟೇ ಅಲ್ಲ. ನನ್ನ ಭಕ್ತರು, ಶಿಷ್ಯರು ಐಸಿಸ್ ಜೊತೆ ನಂಟಿದೆ ಎಂಬುದನ್ನು ಸಾಬೀತು ಪಡಿಸಿದರೆ ನಾನು ದೇಶವನ್ನು ತ್ಯಾಗ ಮಾಡುತ್ತೇನೆ. ಯತ್ನಾಳ್ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಡಿಸೆಂಬರ್ 4ರಂದು ಹುಬ್ಬಳ್ಳಿಯಲ್ಲಿ ನಡೆದ ಅವಲಾದ ಗೌಸ ಎ ಆಜಮ್ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದೆ. ಇದೇ ವೇದಿಕೆಯಲ್ಲಿ ವಿವಿಧ ದರ್ಗಾಗಳ ಪೀಠಾಧೀಶರು, ರಾಜಕೀಯ ಧುರೀಣರು, ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಹೆಚ್. ಕೆ ಪಾಟೀಲ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಸಮ್ಮೇಳನದಲ್ಲಿ ದೇಶದ ಪ್ರತಿನಿಧಿಯಾಗಿ ನಾನು ಪಾಲ್ಗೊಂಡಿದ್ದೇನೆ. ಐಸಿಸ್ ಜೊತೆ ನನ್ನ ನಂಟಿದೆ ಎಂದು ಯತ್ನಾಳ್ ಸಾರ್ವಜನಿಕರಿಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

Shantha Kumari