ಜೈ ಹೋ ಜೈಸ್ವಾಲ್ – ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

ಜೈ ಹೋ ಜೈಸ್ವಾಲ್ – ಆಂಗ್ಲರ ವಿರುದ್ಧ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಯಶಸ್ವಿ ಜೈಸ್ವಾಲ್ ಅವರ ಈ ದ್ವಿಶತಕದೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆ ಹಾಕಿದೆ.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ – ಆಂಗ್ಲರನ್ನು ಬೆಂಡೆತ್ತಿದ ಭಾರತದ ಯಂಗ್ ಬ್ಯಾಟರ್

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಆಕರ್ಷಕ ದ್ವಿಶತಕ ಬಾರಿಸಿದ್ದಾರೆ. ವಿಶಾಖಪಟ್ಟಣಂನಲ್ಲಿನ ಡಾ. ವೈಎಸ್ ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಜೈಸ್ವಾಲ್ 277 ಎಸೆತಗಳಲ್ಲಿ ತಮ್ಮ ಚೊಚ್ಚಲ ಡಬಲ್ ಸೆಂಚುರಿ ಪೂರೈಸಿದ್ದಾರೆ. ಮೊದಲ ದಿನದಾಟದಲ್ಲಿ 151 ಎಸೆತಗಳಲ್ಲಿ ಶತಕ ಬಾರಿಸಿದ್ದ ಜೈಸ್ವಾಲ್ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ಅಲ್ಲದೆ ಮೊದಲ ದಿನದಾಟದ ಮುಕ್ತಾಯದ ವೇಳೆ ಅಜೇಯ 179 ರನ್ ಬಾರಿಸಿ ದ್ವಿತೀಯ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇದೀಗ ದ್ವಿತೀಯ ದಿನದಾಟದ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಆರಂಭಿಸಿದ ಯುವ ದಾಂಡಿಗ 277 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 18 ಫೋರ್‌ಗಳೊಂದಿಗೆ 201* ರನ್ ಕಲೆಹಾಕಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧ ಡಬಲ್ ಸೆಂಚುರಿ ಬಾರಿಸಿದ 2ನೇ ಕಿರಿಯ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಅವರನ್ನು ಹೊರತುಪಡಿಸಿದ ಟೀಮ್ ಇಂಡಿಯಾದ ಯಾವುದೇ ಅಗ್ರ ಕ್ರಮಾಂಕದ ಬ್ಯಾಟರ್ 35 ಕ್ಕಿಂತ ಹೆಚ್ಚಿನ ರನ್ ಕಲೆಹಾಕಿಲ್ಲ. ಅಂದರೆ ಭಾರತ ತಂಡವು ಪೇರಿಸಿರುವ ಒಟ್ಟು ರನ್‌ಗಳ ಅರ್ಧದಷ್ಟು ಸ್ಕೋರ್ ಜೈಸ್ವಾಲ್ ಅವರ ಬ್ಯಾಟ್‌ನಿಂದಲೇ ಬಂದಿದೆ.

Sulekha