ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾ ಆರ್ಭಟ – ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ

ಆಂಗ್ಲರ ನಾಡಲ್ಲಿ ಟೀಮ್ ಇಂಡಿಯಾ ಆರ್ಭಟ – ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ

ಆಂಗ್ಲರ ನಾಡಿನಲ್ಲಿ ಟೀಮ್ ಇಂಡಿಯಾದ ಯುವ ದಾಂಡಿಗ ಯಶಸ್ವಿ ಜೈಸ್ವಾಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 58 ವರ್ಷಗಳ ಬಳಿಕ ಎಂಬುದು ವಿಶೇಷ. ಲೀಡ್ಸ್​ನ ಹೆಡಿಂಗ್ಲೆ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ.

ಈ ಪಂದ್ಯದಲ್ಲಿ 159 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 1 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ ಒಟ್ಟು 101 ರನ್ ಬಾರಿಸಿದ್ದಾರೆ. ಈ ಮೂಲಕ ಹೆಡಿಂಗ್ಲೆ ಮೈದಾನದಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ದಾಖಲೆಯಿದ್ದದ್ದು ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಫಾರೂಖ್ ಇಂಜಿನಿಯರ್ ಹೆಸರಿನಲ್ಲಿ. 1967 ರಲ್ಲಿ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ್ದ ಫಾರೂಖ್ ಇಂಜಿನಿಯರ್ 87 ರನ್ ಬಾರಿಸಿದ್ದರು. ಇದೀಗ ಈ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿ ಜೈಸ್ವಾಲ್ ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲದೆ ಹೆಡಿಂಗ್ಲೆ ಮೈದಾನದಲ್ಲಿ ಮೂರಂಕಿ ರನ್​ಗಳಿಸಿದ ಭಾರತದ ಮೊದಲ ಆರಂಭಿಕ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಮೈದಾನದಲ್ಲಿ ಸೆಂಚುರಿ ಬಾರಿಸಿದ ಟೀಮ್ ಇಂಡಿಯಾ 7ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅದರಲ್ಲೂ 2002 ರಲ್ಲಿ ಈ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ ಬಳಿಕ ಭಾರತದ ಯಾವುದೇ ಬ್ಯಾಟರ್ ಲೀಡ್ಸ್​ನಲ್ಲಿ ಮೂರಂಕಿ ರನ್​ಗಳ ಗಡಿದಾಟಿರಲಿಲ್ಲ.

ಇದೀಗ ಫಾರೂಖ್ ಇಂಜಿನಿಯರ್ ಅವರ 58 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಯಶಸ್ವಿ ಜೈಸ್ವಾಲ್ ಶತಕ ಸಿಡಿಸಿದ್ದಾರೆ. ಈ ಶತಕದ ನೆರವಿನೊಂದಿಗೆ ಭಾರತ ತಂಡವು ಮೊದಲ ದಿನದಾಟದ ಮುಕ್ತಾಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 359 ರನ್​ ಕಲೆಹಾಕಿದೆ. ಸದ್ಯ ಕ್ರೀಸ್​ನಲ್ಲಿ ಶುಭ್​ಮನ್ ಗಿಲ್ – 127  ಹಾಗೂ ರಿಷಭ್ ಪಂತ್  -65  ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

 

Kishor KV