ಯಶ್, ದರ್ಶನ್ ಇಬ್ರೂ ಪ್ರಚಾರಕ್ಕೆ ಬರಲ್ವಾ..? ಸುಮಲತಾಗೆ ಯಾರ ಬೆಂಬಲವೂ ಸಿಗ್ತಿಲ್ವಾ..?

ಯಶ್, ದರ್ಶನ್ ಇಬ್ರೂ ಪ್ರಚಾರಕ್ಕೆ ಬರಲ್ವಾ..? ಸುಮಲತಾಗೆ ಯಾರ ಬೆಂಬಲವೂ ಸಿಗ್ತಿಲ್ವಾ..?

ಇಡೀ ಇಂಡಿಯಾವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿದ್ದ ಸುಮಲತಾ ಅಂಬರೀಶ್ ಇದೀಗ ಮತ್ತೊಮ್ಮೆ ಮಂಡ್ಯದಿಂದಲೇ ಚುನಾವಣಾ ಕಣಕ್ಕಿಳಿಯಲು ಭರ್ಜರಿ ಕಸರತ್ತು ನಡೆಸುತ್ತಿದ್ದಾರೆ. ಬಿಜೆಪಿ ಟಿಕೆಟ್​ಗಾಗಿ ಪಟ್ಟು ಹಿಡಿದಿದ್ದು ಟಿಕೆಟ್ ಸಿಕ್ಕೇ ಸಿಗುತ್ತೆ ಅನ್ನೋ ದೃಢ ವಿಶ್ವಾಸದಲ್ಲಿದ್ದಾರೆ. ಹಾಗೊಂದು ವೇಳೆ ಸಿಗದೇ ಇದ್ದ ಪಕ್ಷದಲ್ಲಿ ಸ್ವತಂತ್ರ್ಯ ಸ್ಪರ್ಧಿಯಾಗಿ ಸವಾಲೊಡ್ಡಲು ಸರ್ವತಂತ್ರಗಳನ್ನೂ ಹೆಣೆಯುತ್ತಿದ್ದಾರೆ. ಆದ್ರೆ ರಾಜ್ಯದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೂ ಸುದ್ದಿ ಮಾಡುತ್ತಿರುವ ಸುಮಲತಾರ ಕಸನು ನನಸಾಗೋದು ಅಷ್ಟು ಸುಲಭವಿಲ್ಲ. ಕಳೆದ ಬಾರಿ ಮಂಡ್ಯದ ಸೊಸೆಗೆ ಬೆನ್ನೆಲುಬಾಗಿ ನಿಂತಿದ್ದ ಜೋಡೆತ್ತು ಈ ಬಾರಿ ಕಣದಿಂದ ಹಿಂದೆ ಸರಿದಿವೆ. ನಟ ದರ್ಶನ್ ಮತ್ತು ಯಶ್ ಜಂಟಿಯಾಗಿ ಪ್ರಚಾರಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಸುಮಲತಾ ಒಬ್ಬಂಟಿಯಾಗಿ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹಾಗಾದ್ರೆ ಸುಮಲತಾ ಏಕಾಂಗಿಯದ್ರಾ..? ಯಶ್, ದರ್ಶನ್ ಇಬ್ರೂ ಪ್ರಚಾರಕ್ಕೆ ಬರಲ್ವಾ..? ಸುಮಲತಾಗೆ ಯಾರ ಬೆಂಬಲವೂ ಸಿಗ್ತಿಲ್ವಾ..? ಈ ಬಗೆಗಿನ ಕಂಪ್ಲೀಟ್ ವಿವರಣೆ ಇಲ್ಲಿದೆ.

ಇದನ್ನೂ ಓದಿ:ಸುಮಲತಾ ಮಂಡ್ಯದಿಂದ ಸ್ಪರ್ಧಿಸಿದ್ರೆ ಗೆಲ್ಲೋದು ಕಷ್ಟನಾ..? – ಆಪ್ತರೇ ಕೈ ಕೊಟ್ಟ ಮೇಲೆ ಮುಂದೇನು?

ಲೋಕಸಭಾ ಚುನಾವಣೆ ಘೋಷಣೆಗೂ ಮುನ್ನವೇ ಮಂಡ್ಯ ಕಣ ಕೊತಕೊತ ಕುದಿಯುತ್ತಿದೆ. ಬಿಜೆಪಿ ಜೆಡಿಎಸ್ ಮೈತ್ರಿಯಲ್ಲಿ ಟಿಕೆಟ್ ಯಾರಿಗೆ ಅನ್ನೋದೇ ಕನ್ಫರ್ಮ್ ಆಗಿಲ್ಲ. ಜೆಡಿಎಸ್ ನಾಯಕರು​ ನಮಗೇ ಕ್ಷೇತ್ರ ಎನ್ನುತ್ತಿದ್ರೆ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಟಿಕೆಟ್ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿಕೊಳ್ತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಪಕ್ಷದ ಮೈತ್ರಿ ಮಾತುಕತೆ ಕಾರಣಕ್ಕೆ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಟಿಕೆಟ್ ಸಿಗುವುದು ಬಹುತೇಕ ಪಕ್ಕಾ ಆಗಿದೆ. ಹೀಗಿದ್ದಾಗ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ, ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಡುವುದು ಗ್ಯಾರಂಟಿ. ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದ್ರೂ ಕಳೆದ ಬಾರಿಯಂತೆ ಈ ಸಲ ಜೋಡೆತ್ತಿನ ಬಲ ಸಿಗೋದಿಲ್ಲ.

2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದವು. ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿ ಅಭ್ಯರ್ಥಿ ಹಾಕದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಆಗ ನಟ ಯಶ್ & ನಟ ದರ್ಶನ್ ಅವರು ಸುಮಲತಾ ಪರ ಅಬ್ಬರದ ಪ್ರಚಾರ ನಡೆಸಿದ್ದರು. ತಿಂಗಳು ಪೂರ್ತಿ ಇಡೀ ಮಂಡ್ಯ ಕ್ಷೇತ್ರದಲ್ಲಿ ಸಂಚಾರ ಮಾಡಿ ಸುಮಲತಾಗೆ ಮತ ನೀಡುವಂತೆ ಯಾಚಿಸಿದ್ದರು. ಇಬ್ಬರು ನಟರ ಕ್ಯಾಂಪೇನ್ ಸುಮಲತಾ ಅಂಬರೀಶ್‌ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಆದ್ರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. 2024 ಲೋಕಸಭೆ ಚುನಾವಣೆ ವೇಳೆ ನಟ ಯಶ್ ಸುಮಲತಾ ಅವ್ರ ಪರ ಪ್ರಚಾರ ಮಾಡಲ್ಲ ಅನ್ನೋದು ಪಕ್ಕಾ ಆಗಿದೆ. ಸುಮಲತಾ ಪರ ಪ್ರಚಾರಕ್ಕೆ ಹೋಗಲ್ಲ ಎಂದು ಯಶ್ ಕೂಡ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸಂಸದೆ ಸುಮಲತಾ ಕೂಡ ಸ್ಪಷ್ಟನೆ ನೀಡಿದ್ದಾರೆ. ಯಶ್ ನನ್ನ ಬಳಿ ಈ ಮೊದಲೇ ಪ್ರಚಾರಕ್ಕೆ ಬರಲ್ಲ ಎಂಬ ವಿಷಯವನ್ನು ಚರ್ಚೆ ಮಾಡಿದ್ದರು. ಅಲ್ಲದೆ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿರುತ್ತಾರೆ. ಹೀಗಾಗಿ ಅವರನ್ನ ಕರೆಯಲು ನನಗೆ ಇಷ್ಟವಾಗುತ್ತಿಲ್ಲ. ಅವರ ಕೆಲಸ ಬಿಟ್ಟು ಹೇಗೆ ಬರ್ತಾರೆ ಹೇಳಿ? ಎಂದಿದ್ದಾರೆ.

ಯಶ್ ಅಂತೂ ಈಗಾಗ್ಲೇ ಪ್ರಚಾರಕ್ಕೆ ಬರೋಕೆ ಆಗಲ್ಲ ಅನ್ನೋದನ್ನ ಹೇಳಿದ್ದಾರೆ. ಆದ್ರೆ ದರ್ಶನ್ ಮಾತ್ರ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಯಾಕಂದ್ರೆ ಸುಮಲತಾ & ದರ್ಶನ್ ಮಧ್ಯೆ ಅಮ್ಮ ಮಗನ ಬಾಂಧವ್ಯ ಇದೆ. ಅಭಿಷೇಕ್ ಅಂಬರೀಶ್ ಕೂಡ ದರ್ಶನ್ ಅವರನ್ನ ಅಣ್ಣ ಎಂದೇ ಕರೆಯುತ್ತಾರೆ. ಇಷ್ಟೆಲ್ಲ ಹೊಂದಾಣಿಕೆ ಇರುವ ದರ್ಶನ್ & ಅಂಬರೀಶ್ ಅವರ ಕುಟುಂಬ ಒಂದೇ ಫ್ಯಾಮಿಲಿ ರೀತಿಯೇ ಇದೆ. ಹೀಗಾಗಿ ಯಶ್ ಪ್ರಚಾರಕ್ಕೆ ಬರದೇ ಇದ್ದರೂ ಸುಮಲತಾ ಅವರಿಗೆ ದರ್ಶನ್ ಬೆಂಬಲ ನೀಡುವುದು ಪಕ್ಕಾ.. ಆದ್ರೂ ಕೂಡ ಸುಮಲತಾಗೆ ಈ ಸಲ ಸಾಲು ಸಾಲು ಸವಾಲುಗಳಿವೆ.

ಕಳೆದ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸುಮಲತಾಗೆ ಒಂದು ರೀತಿ ಎಲ್ಲಾ ಪಕ್ಷಗಳಿಂದಲೂ ಬೆಂಬಲ ಇತ್ತು. ಜೆಡಿಎಸ್ ಜೊತೆ ಮೈತ್ರಿ ಇದ್ದರೂ ಕೆಲ ನಾಯಕರು ಸ್ಥಳೀಯರ ಜೊತೆಗಿನ ಅಸಮಾಧಾನದಿಂದ ಸುಮಲತಾಗೆ ಸಪೋರ್ಟ್ ಮಾಡಿದ್ದರು. ಬಿಜೆಪಿ ಕೂಡ ನೇರವಾಗಿಯೇ ಸುಮಲತಾಗೇ ಸಪೋರ್ಟ್ ಮಾಡಿತ್ತು. ಅಷ್ಟೇ ಅಲ್ಲದೆ ಅಂಬರೀಶ್ ನಿಧನದ ಅನುಕಂಪವೂ ಪ್ಲಸ್ ಆಗಿತ್ತು. ಸ್ವಾಭಿಮಾನದ ಹೆಸ್ರಲ್ಲಿ ಸೆರಗೊಡ್ಡಿ ಮತಯಾಚನೆ ಮಾಡಿದ್ದ ಸಯಮಲತಾಗೆ ಜನರ ಪ್ರೀತಿಯೂ ಸಿಕ್ಕಿತ್ತು. ಆದ್ರೆ ಚುನಾವಣೆ ಗೆದ್ದ ಮೇಲೆ ಸುಮಲತಾ ಜನರ ಜೊತೆ ಬೆರೆತಿಲ್ಲ. ಬರೀ ಬೆಂಗಳೂರಲ್ಲೇ ಇರ್ತಾರೆ ಅನ್ನೋ ಆರೋಪವಿದೆ. ಹೀಗಾಗಿ ಸುಮಲತಾಗೆ ಕಳೆದ ಬಾರಿಯಂತೆ ಈ ಬಾರಿ ಯಾರ ಬಲವೂ ಸಿಗ್ತಿಲ್ಲ. ರಾಜಕೀಯ ನಾಯಕರೂ ಜೊತೆಗಿಲ್ಲ. ಬೆಂಬಲಿಗರ ಪಡೆಯೂ ಇಲ್ಲ. ಅಭಿಮಾನಿಗಳ ಸೇನೆಯಂತೂ ಮೊದ್ಲೇ ಇಲ್ಲ. ಹೀಗಾಗೇ ಮಂಡ್ಯದಲ್ಲಿ ಸುಮಲತಾ ಪರ ಒಂದೇ ಒಂದು ಕೂಗು ಎದ್ದಿಲ್ಲ.

ಬಿಜೆಪಿ ಜೆಡಿಎಸ್ ಮೈತ್ರಿ ಮತ್ತು ಸುಮಲತಾ ಜಟಾಪಟಿ ನಡುವೆ ಕಾಂಗ್ರೆಸ್ ಕೂಡ ಪ್ರಬಲ ಅಭ್ಯರ್ಥಿಯ ಆಯ್ಕೆಗೆ ಕಸರತ್ತು ನಡೆಸಿದೆ. ಹೀಗಾಗಿ ಚುನಾವಣಾ ಅಖಾಡ ರಂಗೇರಿದೆ. ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಯಾರು ಕಮಾಲ್ ಮಾಡಿ ಗೆಲುವು ಸಾಧಿಸುತ್ತಾರೆ? ಅಂತಾ ಕಾದು ನೋಡಬೇಕಿದೆ.

Sulekha