ಯಶ್‌ ಬಾಸ್‌ ಕಾಣೆಯಾಗಿದ್ದಾರೆ.. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ!

ಯಶ್‌ ಬಾಸ್‌ ಕಾಣೆಯಾಗಿದ್ದಾರೆ.. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ!

ರಾಕಿಂಗ್‌ ಸ್ಟಾರ್ ಯಶ್ ಕೆಜಿಎಫ್ ಚಿತ್ರ ಸರಣಿಯ ಮೂಲಕ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಆಗಿದ್ದು, ದೊಡ್ಡ ಮಟ್ಟದ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ಯಶ್‌ ಅವರ ಕೆಜಿಎಫ್‌ -2 ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸಾರ್ವಕಾಲಿಕ ದಾಖಲೆಯನ್ನೇ ಬರೆದಿತ್ತು. ಕೆಜಿಎಫ್ ಚಾಪ್ಟರ್ 2 ಮೂಲಕ ದೊಡ್ಡ ಮಟ್ಟದ ಹೆಸರನ್ನು ಮಾಡಿರುವ ಯಶ್ ಮುಂದೆ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಹಾಗೂ ಪ್ರಶ್ನೆ ಹಲವು ದಿನಗಳಿಂದ ಸತತವಾಗಿ ಎಲ್ಲರನ್ನೂ ಕಾಡುತ್ತಿದೆ. ಮುಂದಿನ ಚಿತ್ರದ ಅಪ್ಡೇಟ್ ಯಾವಾಗ ಸಿಗಲಿದೆ ಎಂದು ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ.

ಕೆಜಿಎಫ್ ಚಾಪ್ಟರ್ 2 ಚಿತ್ರ ಬಿಡುಗಡೆಗೊಂಡ ಬಳಿಕ ಯಶ್ ಯಾವ ನಿರ್ದೇಶಕರ ಜತೆ ಚಿತ್ರ ಮಾಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಕೆಜಿಎಫ್‌ 2 ಸಿನಿಮಾ ರಿಲೀಸ್‌ ಆಗಿ ಒಂದೂವರೆ ವರ್ಷ ಸಮೀಪಿಸುತ್ತಿದ್ದರೂ ಸಹ ತಮ್ಮ ಮುಂದಿನ ಚಿತ್ರದ ಬಗೆಗಿನ ಯಾವುದೇ ಸುಳಿವನ್ನೂ ಸಹ ಯಶ್ ಬಿಟ್ಟುಕೊಟ್ಟಿಲ್ಲ. ಹೀಗಾಗಿ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಕಾದು ಕಾದು ಹತಾಶರಾಗಿರುವ ಯಶ್‌ ಅಭಿಮಾನಿಗಳು ನಟ ಯಶ್ ಕಾಣೆಯಾಗಿದ್ದಾರೆ.. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ಕೊಡಲಾಗುವುದು! ಎಂದು ಪೋಸ್ಟರ್ ಅನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಎಂ.ಎಸ್ ಧೋನಿಗೆ ಜಗತ್ತಿನಾದ್ಯಂತ ಅಭಿಮಾನಿಗಳು – ಧೋನಿ ಪತ್ನಿ ಮಾತ್ರ ‘ಅಲ್ಲು ಅರ್ಜುನ್ ‘ಅಭಿಮಾನಿಯಂತೆ..!

ಇಷ್ಟು ದಿನಗಳು ನೇರವಾಗಿ ಯಶ್ 19 ಬಗ್ಗೆ ಮಾಹಿತಿಯನ್ನು ಕೊಡಿ ಎಂದು ಬರೆದುಕೊಳ್ಳುತ್ತಿದ್ದ ಯಶ್ ಫ್ಯಾನ್ಸ್ ಈ ಬಾರಿ ಯಶ್ ಕಾಣೆಯಾಗಿದ್ದಾರೆ ಎಂದು ವಿಭಿನ್ನವಾಗಿ ಪ್ರಕಟಣೆಯೊಂದನ್ನು ಪೋಸ್ಟ್ ಮಾಡುವುದರ ಮೂಲಕ ಯಶ್ 19 ಚಿತ್ರವನ್ನು ಬೇಗ ಘೋಷಿಸುವಂತೆ ಒತ್ತಡ ಹೇರಿದ್ದಾರೆ. ಪತ್ರಿಕೆಯೊಂದರಲ್ಲಿ ಕಾಣೆಯಾಗಿರುವವರ ಬಗ್ಗೆ ಹಾಕಲಾಗುವಂತಹ ಪ್ರಕಟಣೆಯಂತೆ ಎಡಿಟ್ ಮಾಡಿರುವ ಯಶ್ ಫ್ಯಾನ್ಸ್ ತಮ್ಮ ನೆಚ್ಚಿನ ನಟ ಫೋಟೊವನ್ನು ಬಳಸಿ “ಕಾಣೆಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಮ್ಮ ಕನ್ನಡ ಚಿತ್ರರಂಗದ ಹೆಮ್ಮಯ ನಟ. ಕೆಜಿಎಫ್ ಬಾರಿ ಸಕ್ಸಸ್‌ನಿಂದ ತನ್ನ ಮುಂದಿನ ಚಿತ್ರದ ಘೋಷಣೆ ಮಾಡುತ್ತೇನೆ ಎಂದು ಹೇಳಿ ಅಭಿಮಾನಿಗಳಲ್ಲಿ ನಿರಾಸೆ ಉಂಟು ಮಾಡಿದ್ದಾರೆ. ಕೂಡಲೇ ಯಾರಾದರೂ ಅವರನ್ನು ಸಂಪರ್ಕಿಸಿ. ಕೇವಲ ಘೋಷಣೆ ಮಾಡೋಕೆ ಎರಡು ವರ್ಷ ತಗೊಂಡ್ರೆ ಹೇಗೆ? ಅಭಿಮಾನಿಗಳ ಎಮೋಷನ್ಸ್ ಜತೆ ಆಟ ಆಡ್ತಾ ಇದ್ದೀರಾ. ಎಲ್ಲರೂ ಅವರಿವರ ನಟರ ಚಿತ್ರಗಳ ಅಪ್‌ಡೇಟ್ ತಗೊಂಡು ಎಂಜಾಯ್ ಮಾಡ್ತಾ ಇದ್ದಾರೆ. ನೀವು ಮಾತ್ರ ಇನ್ನೂ ಘೋಷಣೆಯನ್ನೇ ಮಾಡಿಲ್ಲ. ಯಾವುದೇ ಸುಳಿವನ್ನೂ ಸಹ ಕೊಟ್ಟಿಲ್ಲ. ತುಂಬಾ ಬೇಜಾರಾಗುತ್ತೆ ಬಾಸ್. ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ” ಎಂದು ಪೋಸ್ಟರ್‌ನಲ್ಲಿ ಬರೆದಿದ್ದಾರೆ.

ಅಭಿಮಾನಿಗಳು ರಚಿಸಿರುವ ಈ ಪೋಸ್ಟರ್‌ ಸಾಮಾಜಿಕ ಜಾಲತಾಣಗಳಲ್ಲಿ  ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಯಶ್ ಅಭಿಮಾನಿಗಳು ಈ ಫೋಟೊವನ್ನು ಹಂಚಿಕೊಂಡು ಯಶ್ 19 ಚಿತ್ರವನ್ನು ಬೇಗ ಘೋಷಿಸಿ ಎಂದು ಬರೆದುಕೊಂಡಿದ್ದಾರೆ.

suddiyaana