ಯಮುನೋತ್ರಿ ರೋಪ್ ವೇಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ – 5 ಗಂಟೆ ಪ್ರಯಾಣಕ್ಕೆ ಇನ್ಮುಂದೆ 10 ನಿಮಿಷ ಸಾಕು!

ಯಮುನೋತ್ರಿ ರೋಪ್ ವೇಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್ – 5 ಗಂಟೆ ಪ್ರಯಾಣಕ್ಕೆ ಇನ್ಮುಂದೆ 10 ನಿಮಿಷ ಸಾಕು!

ಡೆಹ್ರಾಡೂನ್: ಹಲವು ವರ್ಷಗಳಿಂದ ಯಮುನೋತ್ರಿ ದೇಗುಲಕ್ಕೆ ರೋಪ್ ವೇ ವ್ಯವಸ್ಥೆ ಕಲ್ಪಿಸಬೇಕೆಂದು ಅಲ್ಲಿನ ಸ್ಥಳೀಯರು ಹಾಗೂ ಯಾತ್ರಾರ್ಥಿಗಳಿಂದ ಬೇಡಿಕೆಯಿತ್ತು. ಒಂದು ದಶಕಗಳ ವಿಳಂಬದ ನಂತರ ಯಮುನೋತ್ರಿ ಯಾತ್ರಾರ್ಥಿಗಳಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಯಮುನೋತ್ರಿ ದೇಗುಲಕ್ಕೆ ರೋಪ್ ವೇ ನಿರ್ಮಿಸುವ ಪ್ರಸ್ತಾವನೆಗೆ ಕೊನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಯಮುನೋತ್ರಿ ದೇಗುಲಕ್ಕೆ ಹೋಗಲು ಸುಮಾರು 5 ಕಿಲೋಮೀಟರ್ ಚಾರಣ ಮಾಡಬೇಕಿತ್ತು. ಇದರಿಂದಾಗಿ ವೃದ್ದರಿಗೆ, ಅನಾರೋಗ್ಯ ಪೀಡಿತರಿಗೆ ದೇಗುಲಕ್ಕೆ ತೆರಳಲು ಕಷ್ಟವಾಗುತ್ತಿತ್ತು. ಹೀಗಾಗಿ ದಶಕಗಳಿಂದ ಯಮುನೋತ್ರಿ ದೇಗುಲಕ್ಕೆ ರೋಪ್ ವೇ ವ್ಯವಸ್ಥೆ ಕಲ್ಪಿಸಬೇಕೆಂದು ಅಲ್ಲಿನ ಸ್ಥಳೀಯರು ಹಾಗೂ ಯಾತ್ರಾರ್ಥಿಗಳಿಂದ ಬೇಡಿಕೆಯಿತ್ತು. ಆದರೆ ಸರ್ಕಾರ ಮಾತ್ರ ಯಾವುದೇ ರೀತಿಯಲ್ಲಿ ಸ್ಪಂದಿಸುತ್ತಿರಲಿಲ್ಲ. ಇದೀಗ ಈ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ.

ಇದನ್ನೂ ಓದಿ: ಕೆನಡಾದಲ್ಲಿ ಹಿಂದೂ ದೇಗುಲಗಳೇ ಟಾರ್ಗೆಟ್ – ಮೋದಿ ವಿರುದ್ಧವೂ ಆಕ್ಷೇಪಾರ್ಹ ಬರಹ..!

ಯಮುನೋತ್ರಿ ದೇಗುಲ ಹಾಗೂ ಖಾರ್ಸಾಲಿ ಗ್ರಾಮ ಸಂಪರ್ಕಿಸುವ ಯೋಜನೆಯ ಅಭಿವೃದ್ಧಿಗಾಗಿ ಸರ್ಕಾರ ಶೀಘ್ರದಲ್ಲೇ 3.8 ಹೆಕ್ಟೇರ್ ಭೂಮಿಯನ್ನು ವರ್ಗಾಯಿಸಲಿದೆ. 3.7 ಕಿಲೋ ಮೀಟರ್ ಉದ್ದದ ರೋಪ್ ವೇ ನಿರ್ಮಾಣದಿಂದ 5 ಗಂಟೆಗಳ ಪ್ರಯಾಣದ ಸಮಯ ಕೇವಲ 10 ನಿಮಿಷಗಳಲ್ಲೇ ಕ್ರಮಿಸಬಹುದಾಗಿದೆ ಎಂದು ಕೇಂದ್ರ ಹೇಳಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ, ಯೋಜನೆಯ ನಿರ್ಮಾಣ ಕಾರ್ಯ ಬೇಸಿಗೆಯಲ್ಲಿ ಪ್ರಾರಂಭವಾಗಲಿದ್ದು, ಎರಡು ವರ್ಷಗಳಲ್ಲಿ ರೋಪ್ ವೇ ನಿರ್ಮಾಣ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇದು ಯಾತ್ರಾರ್ಥಿಗಳಿಗೆ, ವಿಶೇಷವಾಗಿ ವಯಸ್ಸಾದವರಿಗೆ ಪರ್ತತದ ತುದಿ ಏರಲು 5 ಕಿಲೋ ಮೀಟರ್ ಚಾರಣ ತಪ್ಪಿಸಲು ಸಹಾಯಕವಾಗಲಿದೆ.

ಕಳೆದ ವರ್ಷ ಯಮುನೋತ್ರಿ ಯಾತ್ರೆಯಲ್ಲಿ 81 ಯಾತ್ರಿಕರು ದುರಂತ ಅಂತ್ಯ ಕಂಡಿದ್ದರು. ಈ ನಿಟ್ಟಿನಲ್ಲಿ ಯಮುನೋತ್ರಿಗೆ ರೋಪ್ ವೇ ಬೇಕೆಂಬ ಬೇಡಿಕೆ ಹೆಚ್ಚಾಗಿತ್ತು. ಇದೀಗ ಬಹುಕಾಲದ ಬೇಡಿಕೆ ಈಡೇರುತ್ತಿರುವುದರ ಬಗ್ಗೆ ದೇಗುಲದ ಅರ್ಚಕರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಾಮಾಜಿಕ ಕಾರ್ಯಕರ್ತ ಸೂರತ್ ರಾವಲ್, ಯಮುನೋತ್ರಿಗೆ ರೋಪ್ ವೇ ನಿರ್ಮಿಸುವ ಪ್ರಯತ್ನ 2006ರಲ್ಲಿ ಪ್ರಾರಂಭವಾಗಿತ್ತು. ಆದರೆ ಕಳೆದ 16 ವರ್ಷಗಳಿಂದ ಸರ್ಕಾರದ ಕಡತ ಧೂಳು ತಿನ್ನುತ್ತಾ ಬಿದ್ದಿತ್ತು. ಕೊನೆಗೂ ಕೇಂದ್ರ ರೋಪ್ ವೇ ಯೋಜನೆಗೆ ಅಸ್ತು ಅಂದಿದೆ ಎಂದು ಹೇಳಿದ್ದಾರೆ.

suddiyaana