ಮುಂದುವರಿದ ಮಳೆಯ ಅಬ್ಬರ – ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ
ನವದೆಹಲಿ: ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ದೆಹಲಿಯ ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಬುಧವಾರ ರಾತ್ರಿ ವೇಳೆ ಭಾರಿ ಮಳೆ ಸುರಿದಿದ್ದು, ರಸ್ತೆ, ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮುಂಗಾರು ಅವಾಂತರವನ್ನೇ ಸೃಷ್ಟಿಸಿದ್ದು, ಭಾರೀ ಪ್ರಮಾಣದ ನಾಶವಾಗಿದೆ. ಉತ್ತರ ಭಾಗದಲ್ಲಿ ಭಾರೀ ಮಳೆಯಿಂದಾಗಿ ಬ್ಯಾರೇಜ್ ತುಂಬಿದ್ದು, ಈ ಹಿನ್ನೆಲೆ ನೀರನ್ನು ಯಮುನಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ದೆಹಲಿಯಾದ್ಯಂತ ರಸ್ತೆ, ಮನೆಗಳಿಗೆ ನೀರು ನುಗ್ಗಿದೆ. ಸಿವಿಲ್ ಲೈನ್ಸ್ ಪ್ರದೇಶದ ರಿಂಗ್ ರೋಡ್ ಕೂಡ ಜಲಾವೃತಗೊಂಡಿದೆ. ಮಜ್ನು ಕಾ ತಿಲಾವನ್ನು ಕಾಶ್ಮೀರಿ ಗೇಟ್ ಐಎಸ್‌ಬಿಟಿಗೆ ಸಂಪರ್ಕಿಸುವ ಮಾರ್ಗವನ್ನು ಮುಚ್ಚಲಾಗಿದೆ.
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೂ ಮುನ್ನ ಚೆಂಗಾಲಮ್ಮನಿಗೆ ಪೂಜೆ – ಪ್ರತಿ ಬಾರಿಯೂ ಇಸ್ರೋದಿಂದ ಈ ದೇವಿಗೆ ಪೂಜೆ ಸಲ್ಲಿಕೆ..!
ಇನ್ನು ಹರಿಯಾಣದ ಹತ್ನಿಕುಂಡ್ ಬ್ಯಾರೇಜ್‌ನಿಂದ ನದಿಗೆ ನೀರು ಬಿಡುತ್ತಿರುವ ಹಿನ್ನೆಲೆ ಗುರುವಾರ ಬೆಳಗ್ಗೆ 7 ಗಂಟೆ ವೇಳೆಗೆ ನೀರಿನ ಮಟ್ಟ 208.46 ಮೀ. ಆಗಿದೆ. ಪ್ರಸ್ತುತ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತಲೂ 3 ಮೀ.ನಷ್ಟು ಹೆಚ್ಚಾಗಿದೆ. ಈ ಹಿನ್ನೆಲೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬ್ಯಾರೇಜ್ ನೀರು ಬಿಡುವುದನ್ನು ನಿಲ್ಲಿಸುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ. ಆದರೆ ಕೇಂದ್ರ ಬ್ಯಾರೇಜ್‌ನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವುದು ಅಗತ್ಯವಾಗಿದೆ ಎಂದು ಹೇಳಿದೆ.
ಪ್ರವಾಹ ಪರಿಸ್ಥಿತಿಯ ಹಿನ್ನೆಲೆ ಕೇಜ್ರಿವಾಲ್ ತುರ್ತು ಸಭೆ ನಡೆಸಿ, ನಿವಾಸಿಗಳಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ಯಮುನಾ ನದಿಯ ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಯಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರು ಮನೆಗಳನ್ನು ಖಾಲಿ ಮಾಡಿ, ನಿಮ್ಮ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಟೆಂಟ್‌ಗಳು ಅಥವಾ ಸುರಕ್ಷಿತ ಸ್ಥಳಗಳಿಗೆ ಹೊರಡಿ. ಪ್ರವಾಹದ ನೀರನ್ನು ವೀಕ್ಷಿಸಲು ಹೋಗಬೇಡಿ. ನೀರಿನ ಮಟ್ಟದಲ್ಲಿ ತ್ವರಿತ ಏರಿಕೆ ಅಪಾಯಕಾರಿ ಹೇಳಿದ್ದಾರೆ.
ಹರಿಯಾಣ ಬ್ಯಾರೇಜ್‌ನಿಂದ ನೀರಿನ ಹರಿವು ಮಧ್ಯಾಹ್ನ 2 ಗಂಟೆಯ ನಂತರ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಜಲ ಆಯೋಗ ತಿಳಿಸಿದೆ. ಕಳೆದೆರಡು ದಿನಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆಯಾಗದಿದ್ದರೂ ಹರಿಯಾಣದಿಂದ ಯಮುನಾಗೆ ಬಿಡುತ್ತಿರುವ ನೀರಿನಿಂದಾಗಿ ಅದರ ಸಮೀಪ ವಾಸಿಸುವ ಜನರಿಗೆ ಅಪಾರ ತೊಂದರೆಯಾಗಿದೆ. ನೀರು ನುಗ್ಗಿದ ನೂರಾರು ಮನೆಗಳನ್ನು ಜನರು ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸದ್ಯ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದ್ದು, ದುರ್ಘಟನೆಗಳನ್ನು ನಿಯಂತ್ರಿಸಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 12 ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.