ಕ್ಷಣ ಕ್ಷಣಕ್ಕೂ ಉಕ್ಕುತ್ತಿದೆ ಯಮುನಾ ನದಿ – ಐತಿಹಾಸಿಕ ಕೆಂಪುಕೋಟೆಗೆ ನುಗ್ಗಿದ ನೀರು..!
44 ವರ್ಷಗಳ ನಂತರ ದೆಹಲಿಯಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಯಮುನಾ ನದಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿದ್ದು, ನೀರು ದೆಹಲಿಯ ಪ್ರಮುಖ ರಸ್ತೆಗಳಿಗೆ ನುಗ್ಗಿದೆ. ಯುಮುನಾ ನದಿ ಉಕ್ಕಿ ಹರಿಯುತ್ತಿದ್ದು, ಇದರ ಪರಿಣಾಮ ಐತಿಹಾಸಿಕ ಕೆಂಪುಕೋಟೆಗೂ ನೀರು ನುಗ್ಗಿದೆ. ದೆಹಲಿಯ ಪ್ರಮುಖ ರಸ್ತೆಗಳು ಮುಳುಗಡೆಯಾಗಿದೆ. ಪಂಜಾಬ್ ಕಡೆ ಹೋಗುವ ರಸ್ತೆಗಳು ಮುಳುಗಡೆಯಾಗಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಬದಿಯಲ್ಲಿ ನಿಲ್ಲಿಸಿದ ವಾಹನಗಳು ತೇಲುತ್ತಿವೆ. 40 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ಇದನ್ನೂ ಓದಿ: ಮುಂದುವರಿದ ಮಳೆಯ ಅಬ್ಬರ – ದೆಹಲಿಯಲ್ಲಿ ಯಮುನಾ ನದಿ ಮಟ್ಟ ಮತ್ತಷ್ಟು ಏರಿಕೆ
ಯಮುನಾ ನದಿ ಸುತ್ತಮುತ್ತಲಿನ ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ನದಿ ಪಾತ್ರ, ತಗ್ಗು ಪ್ರದೇಶದ ಜನರ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈವರೆಗೂ 16,564 ಜನರನ್ನ ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ನೀರಿನ ಪ್ರಮಾಣ ಹಳೇ ರೈಲು ಸೇತುವೆ ಬಳಿ ಬುಧವಾರ ರಾತ್ರಿ 208 ಮೀಟರ್‌ಗೆ ತಲುಪಿತ್ತು. ಆ ಪ್ರಮಾಣ ಇಂದು ಬೆಳಗ್ಗೆ 8ರ ಹೊತ್ತಿಗೆ 208.48 ಮೀಟರ್‌ಗೆ ಏರಿದೆ. ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದು ಮಿತಿ ಮೀರಿದ ಪರಿಸ್ಥಿತಿ ಎಂದು ಕೇಂದ್ರ ಜಲ ಆಯೋಗ ಆತಂಕ ವ್ಯಕ್ತಪಡಿಸಿದೆ. ಸಿವಿಲ್ ಲೈನ್ಸ್ ಪ್ರದೇಶದ ರಿಂಗ್ ರೋಡ್ ಜಲಾವೃತಗೊಂಡಿದ್ದು, ಮಜ್ನು ಕಾ ತಿಲಾವನ್ನು ಕಾಶ್ಮೀರಿ ಗೇಟ್ ಐಎಸ್ಬಿಟಿಗೆ ಸಂಪರ್ಕಿಸುವ ಮಾರ್ಗವನ್ನು ಪ್ರವಾಹದಿಂದಾಗಿ ಮುಚ್ಚಲಾಗಿದೆ. ಈ ಸ್ಥಳವು ಮುಖ್ಯಮಂತ್ರಿ ಕೇಜ್ರಿವಾಲ್ ನಿವಾಸ ಮತ್ತು ದೆಹಲಿ ವಿಧಾನಸಭೆಯಿಂದ ಕೇವಲ 500 ಮೀಟರ್ ದೂರದಲ್ಲಿದೆ.