ಕರಾವಳಿಯ ಯಕ್ಷಗಾನ ಭೀಷ್ಮ ಕೆ. ಗೋವಿಂದ ಭಟ್ ಇನ್ನು ನೆನಪು ಮಾತ್ರ – ಕಲಾಪಯಣ ಮುಗಿಸಿದ ಯಕ್ಷರಂಗದ ದಿಗ್ಗಜ

ಕರಾವಳಿಯ ಯಕ್ಷಗಾನ ಭೀಷ್ಮ ಕೆ. ಗೋವಿಂದ ಭಟ್ ಇನ್ನು ನೆನಪು ಮಾತ್ರ – ಕಲಾಪಯಣ ಮುಗಿಸಿದ ಯಕ್ಷರಂಗದ ದಿಗ್ಗಜ

ದಶವತಾರಿ ಎಂದೇ ಜನಪ್ರಿಯರಾಗಿದ್ದ ಸೂರಿಕುಮೇರು ಕೆ. ಗೋವಿಂದ ಭಟ್ ತಮ್ಮ ಕಲಾಪಯಣ ಮುಗಿಸಿದ್ದಾರೆ. ತೆಂಕುತ್ತಿಟ್ಟು ಯಕ್ಷಗಾನ ಶೈಲಿಯ ಅಪ್ರತಿಮ ಕಲಾತಪಸ್ವಿ, ರಂಗಸ್ಥಳದ ಮೇರು ಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ಅವರು 71ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ:ಯುದ್ಧ ನಿಂತರೂ ಮುಗಿಯಲ್ಲ ಅನಿಲ ಸಮಸ್ಯೆ – ಇರಾನ್ ಹುಚ್ಚಾಟಕ್ಕೆ ಭಾರತ ಸೇರಿ ಇಡೀ ಜಗತ್ತಿಗೇ 2 ವರ್ಷ ಸಂಕಷ್ಟ!  

ಯಕ್ಷರಂಗದ ಮೇರುಕಲಾವಿದ ಸೂರಿಕುಮೇರು ಕೆ. ಗೋವಿಂದ ಭಟ್ ನಿಧನರಾದರು. ಗೋವಿಂದ ಭಟ್ಟರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು ಕೆಲವು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶಿವಮೊಗ್ಗದಲ್ಲಿರುವ ಹಿರಿಯ ಮಗನ ಮನೆಯಲ್ಲಿ ಕೆ. ಗೋವಿಂದ ಭಟ್ಟರು ವಾಸವಾಗಿದ್ದರು. ಶುಕ್ರವಾರ ರಾತ್ರಿ ಮಾರ್ಚ್​ 20ರ ರಾತ್ರಿ 9.30ರ ಸುಮಾರಿಗೆ ಯಕ್ಷರಂಗದ ದಿಗ್ಗಜ ಕೆ. ಗೋವಿಂದ ಭಟ್ ನಿಧನರಾದರು ಎಂದು ಕುಟುಂಬದವರು ತಿಳಿಸಿದರು.

ಯಕ್ಷಗಾನ ಹೆಜ್ಜೆಗಾರಿಕೆ, ಮಾತುಗಾರಿಕೆಯಲ್ಲಿ ಜನರನ್ನ ಸೆಳೆಯುತ್ತಿದ್ದ ಗೋವಿಂದ ಭಟ್ಟರು ಪಾತ್ರದ ಪರಕಾಯ ಪ್ರವೇಶ ಮಾಡುವುದನ್ನು ನೋಡುವುದೇ ಕಲಾಭಿಮಾನಿಗಳಿಗೆ ಸಂಭ್ರಮ. 1940ರ ಮಾರ್ಚ್​ 22ರಂದು ಬಂಟ್ವಾಳದ ಕೋಡಪದವಿನ ಕಡು  ಬಡತನದ ಕುಟುಂಬದಲ್ಲಿ ಜನಸಿದ ಗೋವಿಂದ ಭಟ್ಟರು, ಬಡತನವನ್ನ ಮೆಟ್ಟಿ ನಿಂತು ಸಾಧನೆಗೈದರು. 1951ರಲ್ಲಿ ಬಾಲಗೋಪಾಲ ವೇಷದ ಮೂಲಕ ಧರ್ಮಸ್ಥಳ ಮೇಳದಲ್ಲಿ ಆರಂಭವಾದ ಅವರ ಕಲಾ ಪಯಣ, ಯಕ್ಷಗಾನದ ಇತಿಹಾಸದಲ್ಲಿ ಒಂದು ದಾಖಲೆಯಾಗಲಿ ಉಳಿಯುವಂಥದ್ದು, ಇಳಿ ವಯಸ್ಸಿನಲ್ಲೂ ಇವರು ರಂಗಭೂಮಿಯ ಮೇಲಿನ ಮೋಹ ಬಿಟ್ಟವರಲ್ಲ. ಕಣ್ಣಿನ ದೃಷ್ಟಿಯೇ ಮಂಜಾಗುತ್ತಿದ್ದರೂ, ಶರೀರ ದಣಿಯುತ್ತಿದ್ದರೂ ರಂಗಸ್ಥಳ ಬಿಟ್ಟು ನನಗೇನು ಗತಿ?” ಎಂದು ಕೇಳುತ್ತಿದ್ದ ಕಲಾತಪಸ್ವಿ ಅವರು. ಮಣಿಮೇಖನೆ, ಕಾವೇರಿ ಮಹಾತ್ಮ, ಮೂರುವರೆ ವಜ್ರಗಳು, ರಾಜಶೇಖರ ವಿಲಾಸ, ಮಹಾವೀರ ಸಾಮ್ರಾಟ ಅಶೋಕ, ನಹುಷೇಂದ್ರ ಪ್ರಸಂಗಗಳನ್ನು ಅವರು ರಚಿಸಿದ್ದಾರೆ. ಗೋವಿಂದ ಭಟ್ ಅವರು ವಿಶೇಷವಾಗಿ ರಕ್ತಬೀಜ, ಇಂದ್ರಜಿತ್, ಭೀಷ್ಮ, ಕೌರವ ಮುಂತಾದ ನಾನಾ ಪಾತ್ರಗಳ ಮೂಲಕ ಮನೆಮಾತಾಗಿದ್ದಾರೆ. ಕುಮಾರಯ್ಯ ಹೆಗ್ಗಡೆ, ಋುತುಪರ್ಣ, ಕೌರವ ಪಾತ್ರ ಪ್ರಸಿದ್ದ. ವಾಕ್ಯರೂಪದಲ್ಲಿ ಸ್ಪಷ್ಟವಾಗಿ ಅರ್ಥ ಹೇಳುವ ಭಟ್ಟರ ಕಂಠಸಿರಿಯೂ ಭಿನ್ನ. ಅವರ ಅದ್ಭುತ ಅರ್ಥಗಾರಿಕೆ, ಶಿಸ್ತುಬದ್ಧ ನೃತ್ಯ ಮತ್ತು ವಚೋವೈಖರಿಗೆ 2016ರ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯಮಟ್ಟದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಸಂಘ, ಸಂಸ್ಥೆಗಳಿಂದ ಸನ್ಮಾನ, ಬಿರುದುಗಳು ಸಂದಿವೆ.

ಯಕ್ಷರಂಗದ ಮೇರು ದಿಗ್ಗಜನ ಕಲಾಪಯಣ ಮುಗಿದಿದ್ದು, ಕಲಾಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಜೊತೆಗೆ ಯಕ್ಷರಂಗದ ದಿಗ್ಗಜನ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ.

Sulekha