ತೆಂಕುತಿಟ್ಟಿನ ಖ್ಯಾತ ಭಾಗವತ ವಿಧಿವಶ! – ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ

ತೆಂಕುತಿಟ್ಟು ಯಕ್ಷಗಾನ ರಂಗದ ಖ್ಯಾತ ಹಾಗೂ ಹಿರಿಯ ಭಾಗವತ ದಿನೇಶ್ ಅಮ್ಮಣ್ಣಾಯ( 65) ಗುರುವಾರ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅಮ್ಮಣ್ಣಾಯರು ಇಂದು ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: BBKಯಿಂದ ಮಂಜು, ಸತೀಶ್ OUT.. 5 ಮಂದಿ ವೈಲ್ಡ್ ಕಾರ್ಡ್ ಎಂಟ್ರಿ! – ವೀಕ್ಷಕರ Vote ಕೌಂಟ್ ಆಗಲ್ವಾ?
ಕಳೆದ ನಾಲ್ಕು ದಶಕಕ್ಕೂ ಹೆಚ್ಚು ಕಾಲ ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ರಸರಾಗ ಚಕ್ರವರ್ತಿ ಎಂಬ ಬಿರುದು ಹೊಂದಿದ್ದರು. ಇಂದು ಅಮ್ಮಣ್ಣಾಯರು ನಿಧನರಾಗಿದ್ದಾರೆ. ಮೃತರು ಪತ್ನಿ ಇಬ್ಬರು ಪುತ್ರಿಯರಮೃತರು ಪತ್ನಿ ಇಬ್ಬರು ಪುತ್ರಿಯರ ಸಹಿತ ಅಪಾರ ಅಭಿಮಾನಿ, ಬಂಧುಗಳನ್ನು ಅಗಲಿದ್ದಾರೆ.
ಇನ್ನು ದಿನೇಶ್ ಅಮ್ಮಣ್ಣಾಯರು ಹಿರಿಯ ಭಾಗವತ ದಾಮೋದರ ಮಂಡೆಚ್ಚ ಅವರ ಆಪ್ತ ಶಿಷ್ಯ. ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದರು. ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಎಡನೀರು ಮಠದ ಪರಮಶಿಷ್ಯರಾದ ಅಮ್ಮಣ್ಣಾಯರು ತಮ್ಮ ಜೀವನ ಅತೀ ಹೆಚ್ಚು ಯಕ್ಷಗಾನ ಭಾಗವತಿಕೆಯನ್ನು ಎಡನೀರು ಮಠದ ಮೇಳ ಹಾಗೂ ಎಡನೀರು ಕ್ಷೇತ್ರದಲ್ಲೇ ಮಾಡಿರುವುದು ವಿಶೇಷ.
ಅಮ್ಮಣ್ಣಾಯರು ಕೇವಲ ಪೌರಾಣಿಕ ಪ್ರಸಂಗಗಳಿಗಷ್ಟೇ ಅಲ್ಲದೆ, ಅನೇಕ ತುಳು ಪ್ರಸಂಗಗಳಿಗೂ ಧ್ವನಿಯಾಗಿ ಅಪಾರ ಜನಮನ್ನಣೆ ಗಳಿಸಿದವರು. ಅದರಲ್ಲೂ ‘ಕಾಡಮಲ್ಲಿಗೆ’, ‘ಕಚ್ಚೂರ ಮಾಲ್ದಿ’, ‘ಪಟ್ಟದ ಪದ್ಮಲೆ’ ಹಾಗೂ ‘ಮಾನಿಷಾದ’ ದಂತಹ ಪ್ರಸಂಗಗಳನ್ನು ತಮ್ಮ ಗಾಯನದಿಂದ ಜನಪ್ರಿಯಗೊಳಿಸಿದ ಕೀರ್ತಿ ಅವರದ್ದಾಗಿತ್ತು. ಅಲ್ಲದೆ, ‘ಸತ್ಯಹರಿಶ್ಚಂದ್ರ’ ಪ್ರಸಂಗದ ಅವರ ಹಾಡುಗಳು ಜನ ಮಾನಸದಲ್ಲಿ ಅಚ್ಚಳಿಯದೇ ಉಳಿದಿದೆ.
ದಿನೇಶ್ ಅಮ್ಮಣ್ಣಾಯ ಅವರ ಅನುಪಮ ಕಲಾ ಸೇವೆಯನ್ನು ಗುರುತಿಸಿ ಉಡುಪಿ ತುಳುಕೂಟವು ಪ್ರತಿಷ್ಠಿತ ‘ಸಾಮಗ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮಲ್ಪೆ ರಾಮದಾಸ ಸಾಮಗ, ಅಳಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್ ಅವರಂತಹ ಮೇರು ಕಲಾವಿದರ ಒಡನಾಟ ಹೊಂದಿದ್ದ ಅಮ್ಮಣ್ಣಾಯರು, ಇತ್ತೀಚೆಗೆ ಎಡನೀರು ಮೇಳದಲ್ಲಿ ತಿರುಗಾಟ ಪೂರ್ಣಗೊಳಿಸಿ ವಿಶ್ರಾಂತ ಜೀವನ ನಡೆಸುತ್ತಿದ್ದರು.

ನೋಡಿರಿ

