ಕರಾವಳಿಯ ಯಕ್ಷಲೋಕದ ದಿಗ್ಗಜ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತ

ಕರಾವಳಿಯ ಯಕ್ಷಲೋಕದ ದಿಗ್ಗಜ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತ

ಮಂಗಳೂರು : ಕರಾವಳಿಯ ಯಕ್ಷಲೋಕದ ದಿಗ್ಗಜ, ಯಕ್ಷರಂಗದ ಅಪ್ರತಿಮ ಕಲಾವಿದ ಕುಂಬ್ಳೆ ಸುಂದರ್ ರಾವ್ ಅಸ್ತಂಗತರಾಗಿದ್ದಾರೆ. ಮಾಜಿ ಶಾಸಕರೂ ಆಗಿದ್ದ ಕುಂಬ್ಳೆ ಸುಂದರ್ ರಾವ್ ವಯೋಸಹಜ ಸಮಸ್ಯೆಯಿಂದ ಬುಧವಾರ ಬೆಳಗ್ಗೆ ನಿಧನರಾದರು. ಯಕ್ಷಗಾನ ಮತ್ತು ತಾಳ-ಮದ್ದಳೆ ಕಲಾವಿದರಾಗಿದ್ದ ಸುಂದರ್ ರಾವ್, ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು.  1994 ರಿಂದ 1999ರವರೆಗೆ ಬಿಜೆಪಿಯಿಂದ ಸುರತ್ಕಲ್ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಸುರತ್ಕಲ್, ಧರ್ಮಸ್ಥಳ ಮತ್ತು ಇರಾ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಅಪಾರ ಅಭಿಮಾನ ಬಳಗ ಹೊಂದಿದ್ದರು.

ಇದನ್ನೂ ಓದಿ :  ಬೆಂಗಳೂರಿಗೂ ಕಾಲಿಟ್ಟಿತು ಡಿಜಿಟಲ್ ರುಪಿ – ಬಳಕೆ ಹೇಗೆ?

ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಯಕ್ಷಗಾನ ಕಲಾವಿದರೊಬ್ಬರು ನೇರವಾಗಿ ಮತದಾರರಿಂದಲೇ ಆರಿಸಲ್ಪಟ್ಟ ಪ್ರಪ್ರಥಮ ಶಾಸಕರೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಕಾಯರ್ಕಾಡಿ ಕುಂಞಕಣ್ಣ ಮತ್ತು ಕಲ್ಯಾಣಿ ದಂಪತಿ ಸುಪುತ್ರರಾಗಿ 1934ನೇ  ಮಾರ್ಚ್ 20ರಲ್ಲಿ ಕೇರಳ ರಾಜ್ಯದ ಕುಂಬಳೆಯಲ್ಲಿ ಜನಿಸಿದ ಅವರು ಪ್ರಸ್ತುತ ಮಂಗಳೂರಿನ ಪಂಪ್ ವೆಲ್ ಬಳಿ ವಾಸವಾಗಿದ್ದರು. ‌ಕುಂಬ್ಳೆ ಸುಂದರ್ ರಾವ್ ಯಕ್ಷಗಾನ, ರಾಜಕೀಯ, ಧಾರ್ಮಿಕ, ಸಾಮಾಜಿಕ ವಲಯದಲ್ಲಿಯೂ ಗುರುತಿಸಿಕೊಂಡವರು.

ಯಕ್ಷಗಾನದ ಅಭಿಮಾನಿಗಳ ಪಾಲಿಗೆ ಕುಂಬ್ಳೆ ಸುಂದರ್ ರಾವ್ ಅವರನ್ನ ಶ್ರೀಕೃಷ್ಣನ ಪಾತ್ರದಲ್ಲಿ ನೋಡುವುದೇ ಪರಮಾನಂದ. ಶ್ರೀಕೃಷ್ಣನ ಪಾತ್ರಕ್ಕೆ ಜೀವ ತುಂಬುತ್ತಿದ್ದ ರೀತಿಯೇ ಕಲಾರಸಿಕರ ಕಣ್ಮನ ಸೆಳೆಯುತ್ತಿತ್ತು. ಕನ್ನಡ ಭಾಷೆಯ ಸೊಗಸಾದ ನಿರೂಪಣೆ ಮತ್ತು ಸಂಭಾಷಣೆಗಳಿಂದ ಕುಂಬ್ಳೆ ಸುಂದರ್ ರಾವ್ ಕಲಾಭಿಮಾನಿಗಳ ಮನಗೆದ್ದಿದ್ದರು. ಕಲಿತದ್ದು ಕೇವಲ ಏಳನೆಯ ತರಗತಿ. ಆದರೆ ಅವರ ವಾಕ್ಚಾತುರ್ಯಕ್ಕೆ ಸರಿಸಾಟಿ ಯಾರೂ ಇಲ್ಲ ಅನ್ನೋ ರೀತಿ ಅಪಾರ ಅಭಿಮಾನ ಬಳಗ ಹೊಂದಿದ್ದರು.

 

suddiyaana