ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ – ಕನ್ನಡಕ್ಕೊಬ್ಬರೇ ಕೈಲಾಸಂ
ಟಿ.ಪಿ ಕೈಲಾಸಂ. ತಮ್ಮ ನಾಟಕಗಳ ಮೂಲಕ ಕನ್ನಡಿಗರನ್ನು ನಗಿಸಿ, ನಲಿಸಿ ಕನ್ನಡಿಗರ ಮನದಲ್ಲಿ ಸದಾ ನೆಲೆಸಿರುವರು ಕೈಲಾಸಂ. ಕನ್ನಡಕ್ಕೊಬ್ಬರೇ ಕೈಲಾಸಂ. ಈ ಮಹನೀಯರ ಕುರಿತ ಮಾಹಿತಿ ಇಲ್ಲಿದೆ..
ಇದನ್ನೂ ಓದಿ:ಕನ್ನಡ ಪದಗಳನ್ನು ಹಾಡುತ್ತ ಕನ್ನಡವನ್ನು ಮೆರೆಸಿದ ಸಾಹಿತಿ ಜಿ.ಪಿ ರಾಜರತ್ನಂ
ಕನ್ನಡ ನಾಟಕರಂಗದಲ್ಲಿ ಹೊಸಶಕೆಯನ್ನು ಆರಂಭಿಸಿದ ಟಿ ಪಿ. ಕೈಲಾಸಂ ಅವರು ಬೆಂಗಳೂರಿನಲ್ಲಿ 26-07-1885ರಲ್ಲಿ ತ್ಯಾಗರಾಜ ಪರಮಶಿವ ಅಯ್ಯರ್ ಹಾಗೂ ಕಲಮಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಬೆಂಗಳೂರು, ಹಾಸನ, ಮೈಸೂರುಗಳಲ್ಲಿ ಶಾಲಾ ಶಿಕ್ಷಣ ಮುಗಿಸಿ 1908ರಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಬಿ ಎ ಪದವಿಗಳಿಸಿದರು. ಪ್ರೌಢವ್ಯಾಸಂಗಕ್ಕೆ ಲಂಡನ್ನಿಗೆ ತೆರಳಿ 6 ವರ್ಷಗಳ ಕಾಲ ಭೂಗರ್ಭಶಾಸ್ತ್ರ ಅಭ್ಯಸಿಸಿ 1915ಕ್ಕೆ ಬೆಂಗಳೂರಿಗೆ ಹಿಂತಿರುಗಿದರು. ಭೂಗರ್ಭಶಾಸ್ತ್ರ ಇಲಾಖೆಯಲ್ಲಿ ಭೂಶೋಧಕರಾಗಿ ಸೇರಿ 5 ವರ್ಷ ಉದ್ಯೋಗ ಮಾಡಿದರು. ಅನಂತರ ರಾಜೀನಾಮೆ ನೀಡಿ ರಂಗಭೂಮಿಯ ಚಟುವಟಿಕೆಗಳಲ್ಲಿ ನಿರತರಾದರು. ಕರ್ನಾಟಕ ಪ್ರಹಸನ ಪಿತಾಮಹ, ತ್ಯಾಗರಾಜ ಪರಮಶಿವ ಕೈಲಾಸಂ ಕನ್ನಡದ ಜನರ ಮನ ಮನೆಗಳಲ್ಲಿ ಚಿರಕಾಲ ಉಳಿಯುವ, ಜನಪ್ರಿಯ ಹೆಸರು. ಇವರು ಕನ್ನಡ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ.
ಆಧುನಿಕ ರಂಗಭೂಮಿಯ ಹರಿಕಾರರೆಂದೇ ಕರೆಯಲ್ಪಟ್ಟ ಇವರ ಹಾಸ್ಯ ಚಟಾಕಿಗಳು ಇಂದಿಗೂ ಜನರನ್ನು ನಗಿಸುತ್ತಾ ನಲಿಸುತ್ತಾ ಇವೆ. ಕನ್ನಡ ರಂಗಭೂಮಿಯನ್ನು ಸಾಂಪ್ರದಾಯಿಕತೆಯ ಸಂಕೋಲೆಗಳಿಂದ ಹೊರಗೆಳೆದು ತಂದು ಅದಕ್ಕೆ ಹೊಸ ತಿರುವನ್ನು ಆಯಾಮಗಳನ್ನು ತಂದು ಕೊಟ್ಟ ಹಿರಿಮೆ ಅವರದ್ದು ಎಂದರೆ ತಪ್ಪಾಗಲಾರದು. ನಾಟಕದ ಅತೀ ನಾಟಕೀಯತೆಯನ್ನು ಸಾಮಾನ್ಯ ಮಟ್ಟಕ್ಕೆ ತಂದು, ಜನಸಾಮಾನ್ಯರು ತಮ್ಮ ಬಿಂಬವನ್ನು ಕಾಣುವಂತೆ ಮಾಡಿದರು. ಅದರಲ್ಲಿರುವ ಗ್ರಾಂಥಿಕ ಭಾಷೆಯನ್ನು, ಆಡು ಮಾತಿಗೆ ಬದಲಾಯಿಸಿ, ಜನರಿಗೆ ಹೆಚ್ಚು ತಲುಪುವಂತೆ ಮಾಡಿದರು. ಕೈಲಾಸಂ ನಾಟಕಗಳಲ್ಲಿನ ಕನ್ನಡಾಂಗ್ಲೋ ಪದಗಳ ಬಳಕೆ ಬಹು ವಿಶಿಷ್ಟವಾದುದು. ಈ ಮೂಲಕ ಇಂಗ್ಲಿಷ್ ಪದಗಳನ್ನು ಕನ್ನಡಕ್ಕೆ ಒಗ್ಗಿಸಿ, ಕನ್ನಡದ ಸತ್ವವನ್ನು ಹಿಗ್ಗಿಸಿದವರು ಕೈಲಾಸಂ..
ಕೈಲಾಸಂ ಅವರ ಪೋಲಿಕಿಟ್ಟಿ ಮತ್ತು ಟೊಳ್ಳು-ಗಟ್ಟಿ ಪ್ರಖ್ಯಾತ ನಾಟಕಗಳು. ಟೊಳ್ಳು ಟೊಳ್ಳೇ, ಗಟ್ಟಿ ಗಟ್ಟಿಯೇ ಎನ್ನುವ ಸಂದೇಶವನ್ನು ಕೊಡುವ ಮೂಲಕ ಮಕ್ಕಳ ಸಾಮರ್ಥ್ಯವನ್ನು ಅಳೆಯಲು ಪರೀಕ್ಷೆಯನ್ನು ಮಾನದಂಡವಾಗಿ ಇಟ್ಟುಕೊಳ್ಳಬೇಡಿ ಎನ್ನುವ ಸಂದೇಶವನ್ನು ಕೈಲಾಸಂ ಪ್ರಬಲವಾಗಿ ಸಾರಿದರು. ಸಮಾಜದಲ್ಲಿರೋದು ಎರಡೇ ಜಾತಿ. ದುಡ್ಡಿಂದ ಕೊಬ್ಬಿದವರು, ದುಡ್ಡಿಲ್ಲದವರು ಎನ್ನುತ್ತಾನೆ ಪೋಲಿ ಕಿಟ್ಟಿ. ಅಲ್ಲದೆ ಇಪ್ಪತ್ತನೇ ಶತಮಾನದ ಆರಂಭದಲ್ಲೇ ಕನ್ನಡ ಭಾಷೆಗೆ ಎದುರಾಗಬಹುದಾದ ಇಂಗ್ಲಿಷ್ ಭಾಷೆಯ ಸವಾಲನ್ನು ಪೋಲಿಕಿಟ್ಟಿ ನಾಟಕದ ಮೂಲಕ ತೋರಿಸದವರು ಟಿ.ಪಿ.ಕೈಲಾಸಂ.. ಅವರ ನಾಟಕಗಳಲ್ಲಿನ ಪಾತ್ರಗಳ ಸಂಭಾಷಣೆಗಳು, ಸನ್ನಿವೇಶಗಳು ನಗಿಸುತ್ತವೆ, ನಗುವಿನ ಹಿಂದೆ ಮನಸ್ಸಿನಲ್ಲಿ ಪ್ರಶ್ನೆಗಳನ್ನೂ ಹುಟ್ಟಿ ಹಾಕುತ್ತವೆ. ಕೈಲಾಸಂ ಒಂದು ರೀತಿಯಲ್ಲಿ ಆಶು ಕವಿ ಎಂದರೂ ತಪ್ಪಾಗಲಾರದು.
ಇಂಗ್ಲೆಂಡ್‌ನಲ್ಲಿ ಕೈಲಾಸಂ ಓದುತ್ತಿದ್ದಾಗ ಕಾನ್ಸ್‌ಸ್ಟಾಂಟಿನೋಪಲ್ ಎಂಬ ಕವಿತೆಯನ್ನು ಇಂಗ್ಲೀಷ್‌ನ ಸಂಗೀತಗಾರ ಹೊಸ ರಾಗದಲ್ಲಿ ಹಾಡಿ, ನೋಡೋಣ ಈ ಸ್ವರೂಪದ ಕವಿತೆ ಬೇರೊಂದಿರಲು ಸಾಧ್ಯವೇ ಇಲ್ಲ.. ಹಾಗೇನಾದ್ರೂ ಇದೇ ರಾಗದಲ್ಲಿ ಬೇರೆ ಹಾಡನ್ನು ರಚಿಸಿದ್ರೆ ಅಂತವ್ರಿಗೆ ತಾನು ಬಹುಮಾನ ಕೊಡೋದಾಗಿ ಘೋಷಿಸಿದ್ದ.. ಆದ್ರೆ ಸವಾಲನ್ನು ಸ್ವೀಕರಿಸಿದ ಕೈಲಾಸಂ, ಇಂಗ್ಲಿಷ್ ಸಂಗೀತದ ರಾಗದಲ್ಲಿ ನಾನು ಕೋಳಿ ಕೆ ರಂಗ ಹಾಡನ್ನು ರಚಿಸಿ, ಹಾಡಿ, ಆ ಬಹುಮಾನ ಗೆದ್ದಿದ್ದರು.. ಇದಕ್ಕಾಗಿಯೇ ಕನ್ನಡಕ್ಕೊಬ್ಬರೇ ಕೈಲಾಸಂ ಎಂಬ ಮಾತು ಇಂದಿಗೂ ಉಳಿದುಕೊಂಡಿರೋದು..