ಆರ್‌ಸಿಬಿಗೆ ಇಂದು ಬಿಗ್ ಚಾಲೆಂಜ್ – ಫೈನಲ್‌ಗೆ ಲಗ್ಗೆ ಇಡುತ್ತಾ ಸ್ಮೃತಿ ಪಡೆ?

ಆರ್‌ಸಿಬಿಗೆ ಇಂದು ಬಿಗ್ ಚಾಲೆಂಜ್ – ಫೈನಲ್‌ಗೆ ಲಗ್ಗೆ ಇಡುತ್ತಾ ಸ್ಮೃತಿ ಪಡೆ?

4ನೇ  ಆವೃತ್ತಿಯ WPLನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಲೀಗ್‌ ಹಂತದಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಸ್ಮೃತಿ ಮಂಧಾನ ಪಡೆ ಅಬ್ಬರಿಸಿ ಜಯ ಸಾಧಿಸುವಲ್ಲಿ ಸಫಲರಾದರೆ, ಲೀಗ್‌ನಲ್ಲಿ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಹೊಂದಲಿದೆ. ಇನ್ನು ಮುಂಬೈ ಇಂಡಿಯನ್ಸ್‌ ಪಾಲಿಗೂ ಇದು ಮಾಡು ಇಲ್ಲವೆ ಮಡಿ ಪಂದ್ಯದ ರೀತಿ ಆಗಿದೆ. ಈ ಪಂದ್ಯದಲ್ಲಿ ಮುಂಬೈ ಗೆದ್ದರೆ ಮುಂದಿನ ಹಂತದ ಕನಸು ಫಲಿಸುತ್ತದೆ.

ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಸತತ ಮೂರು ಸೋಲುಗಳನ್ನು ಕಂಡಿದ್ದು ಗೆಲುವಿನ ಹಳಿಗೆ ಮರಳಲು ಬೇಕಾದ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ಆರ್‌ಸಿಬಿ ಕಳೆದ ಪಂದ್ಯದಲ್ಲಿ ಸೋತಿದ್ದು, ಲೀಗ್‌ ಹಂತದಲ್ಲಿ ಮತ್ತೊಂದು ಜಯ ಸಾಧಿಸಿ ಡೈರೆಕ್ಟ್ ಫೈನಲ್‌ಗೆ ಏರುವ ಕನಸು ಕಾಣುತ್ತಿದೆ. ಆರ್‌ಸಿಬಿ ಆಡಿರುವ 6 ಪಂದ್ಯಗಳಲ್ಲಿ 5 ಜಯ, 1 ಸೋಲನ್ನು ಕಂಡಿದ್ದು 10 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ ಈ ಪಂದ್ಯದಲ್ಲಿ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯುವ ಕನಸು ಕಾಣುತ್ತಿದೆ.

ಇದನ್ನೂಓದಿ: 77ನೇ ಗಣರಾಜ್ಯೋತ್ಸವಕ್ಕೆ ಮೋದಿ ಶುಭಾಶಯ – ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪ ನಮನ

ಆರ್‌ಸಿಬಿ ತಂಡ ತನ್ನ ಲೀಗ್‌ ಹಂತದ ಏಳನೇ ಪಂದ್ಯದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮಾಡಿದ ತಪ್ಪನ್ನು ಮೆಟ್ಟಿನಿಂತು ಆಟವನ್ನು ಆಡಿದರೆ ಗೆಲುವಿನ ನಗೆ ಬೀರಬಹುದಾಗಿದೆ. ಆರಂಭದಲ್ಲಿ ಸ್ಮೃತಿ ಮಂಧಾನ ಹಾಗೂ ಗ್ರೇಸ್ ಹ್ಯಾರಿಸ್ ಜೋಡಿ ಭರ್ಜರಿ ಜೊತೆಯಾಟದ ಕಾಣಿಕೆ ನೀಡಬೇಕಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಡಿನ್‌ ಡಿ ಕ್ಲರ್ಕ್‌, ರಾಧಾ ಯಾದವ್, ರಿಚಾ ಘೋಷ್‌ ಅವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಇನ್ನು ಬೌಲರ್‌ಗಳು ಬಿಗುವಿನ ದಾಳಿ ನಡೆಸಿ ಜಯದಲ್ಲಿ ಮಿಂಚುವ ಅನಿವಾರ್ಯತೆ ಇದೆ. ಪಿಚ್ ಹೇಗಿದೆ? ವಡೋದರಾದ ಕೋಟಂಬಿ ಕ್ರೀಡಾಂಗಣದ ಪಿಚ್ ಕಡಿಮೆ ಬೌನ್ಸ್ ಹೊಂದಿದೆ. ಈ ಪಿಚ್‌ ಬೌಲರ್‌ಗಳಿಗೆ ಕೊಂಚ ಅನುಕೂಲ ನೀಡುತ್ತಿದೆ. ಸ್ಪಿನ್ ಬೌಲರ್‌ಗಳಿಗೂ ಪಿಚ್‌ ಸಹಾಯ ಮಾಡಬಹುದು. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುವುದು ಒಳ್ಳೆಯ ನಿರ್ಧಾರವಾಗಬಹುದು ಎಂದು ಅಂದಾಜಿಸಲಾಗಿದೆ.

Kishor KV