ಮುದ್ದಿನ ಶ್ವಾನಕ್ಕಾಗಿ ಮನೆ ಮಾರಾಟಕ್ಕಿಟ್ಟ ಮಾಲೀಕ! – ಮುಂದೇನಾಯ್ತು ಗೊತ್ತಾ?
ನಾಯಿ, ಬೆಕ್ಕು, ಕೋಳಿ, ಗಿಳಿ, ದನ ಇವುಗಳನ್ನು ಅನೇಕರು ಸಾಕುತ್ತಾರೆ. ಅವುಗಳು ದಿನ ಕಳೆಯುತ್ತಿದ್ದಂತೆ ಮಾನವರೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತದೆ. ಮನುಷ್ಯರು ಕೂಡ ಅವುಗಳನ್ನು ತಮ್ಮ ಮಕ್ಕಳಂತೆ ಪೋಷಿಸುತ್ತಾರೆ. ಅವುಗಳ ಸುಖ- ದುಖಃಗಳೊಂದಿಗೆ ಭಾಗಿಯಾಗುತ್ತಾರೆ. ಇಂತಹ ಸಾಕಷ್ಟು ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವರು ತಮ್ಮ ಅಚ್ಚುಮೆಚ್ಚಿನ ಪ್ರಾಣಿಗಳೊಂದಿಗಿನ ಒಡನಾಟ, ನೋವು ನಲಿವಿನ ಸಂಗತಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಇದೀಗ ವ್ಯಕ್ತಿಯೊಬ್ಬ ತನ್ನ ನಾಯಿಯ ಮನಮಿಡಿಯುವ ಕತೆಯೊಂದನ್ನು ಬರೆದಿದ್ದಾನೆ.
ಇದನ್ನೂ ಓದಿ: ಗದಗದಲ್ಲಿ “ಮೊಗ್ಯಾಂಬೋ, ರಾಮು ಕಾಕಾ” ಪ್ರತ್ಯಕ್ಷ! – ಸಂಶೋಧಕರೇ ಬೆರಗಾಗಿದ್ದೇಕೆ?
ಸಾಕು ಪ್ರಾಣಿಗಳು ಅವುಗಳ ಮಾಲೀಕರ ನಡುವಿನ ಸಂಬಂಧ ತಾಯಿ ಮತ್ತು ಮಕ್ಕಳಷ್ಟೇ ಗಾಢ ಎನ್ನುವುದನ್ನು ನಾವು ಕೇಳಿದ್ದೇವೆ. ಈಗ ಅಂಥದ್ದೇ ನಿದರ್ಶನಕ್ಕೆ ಸಾಮಾಜಿಕ ಜಾಲತಾಣ ಸಾಕ್ಷಿಯಾಗಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶ್ವಾನವನ್ನು ಉಳಿಸಿಕೊಳ್ಳಲು ಮಾಲೀಕನೊಬ್ಬ ತನ್ನ ಮನೆಯನ್ನೇ ಮಾರಾಟ ಮಾಡಲು ಸಿದ್ಧನಾಗಿದ್ದಾನೆ.
ಹೌದು, ಬ್ರಿಟಿಷ್ ಜೈಲು ಅಧಿಕಾರಿ ಜಾಕ್ಸನ್ ಫೀಲಿ ಎನ್ನುವವರು ರ್‍ಯಾಂಬೋ ಎನ್ನುವ 2 ವರ್ಷದ ಶ್ವಾನ ಸಾಕಿದ್ದಾರೆ. ಈ ನಾಯಿ ಹೈಪೋವೊಲೆಮಿಕ್ ಶಾಕ್ ಎನ್ನುವ ಕಾಯಿಲೆಯಿಂದ ಬಳಲುತ್ತಿತ್ತು. ಕಾಯಿಲೆಯ ತೀವ್ರತೆಯಿಂದ ಬದುಕುವುದೇ ಕಷ್ಟವೆಂದುಕೊಂಡಿದ್ದ. ಆದರೂ ತನ್ನ ಪ್ರೀತಿಯ ಶ್ವಾನವನ್ನು ಉಳಿಸಿಕೊಳ್ಳಬೇಕೆಂದು ಪಣತೊಟ್ಟಿದ್ದಾನೆ. ಅದಕ್ಕಾಗಿ ಆತ ಅನೇಕ ಪೆಟ್ ಕ್ಲಿನಿಕ್ ಗಳಿಗೆ ತೆರಳಿದ್ದಾನೆ.
ಮನೆಯ ಮಗುವಿನಂತೆ ಸಾಕಿದ್ದ ಶ್ವಾನದ ಪ್ರಾಣ ರಕ್ಷಣೆಗಾಗಿ ಫೀಲಿ ಮಾಡಿದ್ದು ಇಷ್ಟೇ ಅಲ್ಲ. ತನ್ನ ಮನೆಯನ್ನೂ ಮಾರಿ ಚಿಕಿತ್ಸೆ ಕೊಡಿಸಲು ಸಿದ್ಧನಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದ. ಆ ಬಳಿಕ ನೆಟ್ಟಿಗರು ಕೂಡ ಫೀಲಿ ಮತ್ತು ರ್‍ಯಾಂಬೋ ನಡುವಿನ ಬಾಂಧವ್ಯ ಮೆಚ್ಚಿ, ಚಿಕಿತ್ಸೆಗಾಗಿ ಹಣದ ನೆರವು ನೀಡಿ, ಶ್ವಾನದ ಉಳಿವಿಗೆ ಪ್ರಾರ್ಥಿಸಿದ್ದರು. ಕೊನೆಗೂ ಆತ ಶ್ವಾನಕ್ಕೆ ಚಿಕಿತ್ಸೆ ಕೊಡಿಸಿದ್ದಾನೆ. ಇದಕ್ಕಾಗಿ ಆತ ಖರ್ಚು ಮಾಡಿದ್ದು ಬರೋಬ್ಬರಿ 19.59 ಲಕ್ಷ ರೂ.!
ಈ ಬಗ್ಗೆ ಫೀಲಿ ಮಾತನಾಡಿದ್ದು, ಕೆಲ ವಾರಗಳಿಂದ ಸಾವಿನೊಂದಿಗೆ ಸೆಣಸಾಡಿದ ರ್‍ಯಾಂಬೋ, ಜೀವಂತವಾಗಿ ಮನೆಗೆ ಹಿಂದಿರುಗಿದೆ. ಕಳೆದ ಮೂರು ದಿನಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಸ್ವಲ್ಪ ಸ್ವಲ್ಪ ಆಹಾರವನ್ನೂ ಸೇವಿಸುತ್ತಿದೆ. ಆಮ್ಲಜನಕ ಮಟ್ಟವೂ ಉತ್ತಮ ಸ್ಥಿತಿಯಲ್ಲಿದೆ. ರ್‍ಯಾಂಬೋ ಜೀವ ಉಳಿಸಲು ಸಹಾಯ ಮಾಡಿ ಆದಷ್ಟು ಬೇಗ ಚೇತರಿಸಿಕೊಳ್ಳಲು ಪ್ರಾರ್ಥಿಸಿದವರಿಗಾಗಿ ಧನ್ಯವಾದ ಹೇಳಿದ್ದಾನೆ.
View this post on Instagram