ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ – ಬ್ರಹ್ಮಾಂಡವನ್ನು ರಚಿಸಿದ ಆದಿಶಕ್ತಿಯ ವಿಶೇಷತೆಯೇನು?

ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ – ಬ್ರಹ್ಮಾಂಡವನ್ನು ರಚಿಸಿದ ಆದಿಶಕ್ತಿಯ ವಿಶೇಷತೆಯೇನು?

ಇವತ್ತು ನವರಾತ್ರಿಯ ನಾಲ್ಕನೇ ದಿನ.  ದುರ್ಗಾಮಾತೆಯ ಒಂಭತ್ತು ಅವತಾರಗಳಲ್ಲಿ ಕೂಷ್ಮಾಂಡ ಸ್ವರೂಪವನ್ನ ಇವತ್ತು ಆರಾಧನೆ ಮಾಡ್ತಾರೆ. ಕೂಷ್ಮಾಂಡಾ ದೇವಿಯನ್ನ ಆದಿಶಕ್ತಿಯ ರೂಪದಲ್ಲೂ ಪೂಜಿಸುತ್ತಾರೆ. ಭೂಮಿಯ ಸೃಷ್ಟಿಕರ್ತೆಯೇ ಕೂಷ್ಮಾಂಡಾ ದೇವಿ ಎನ್ನಲಾಗುತ್ತಿದೆ. ಮೂರನೇ ದಿನ ಚಂದ್ರಘಂಟಾ ಮಾತೆಯ ಪೂಜಿಸಿದ ನಂತರ ಚತುರ್ಥ ದಿನದಂದು ಕೂಷ್ಮಾಂಡಾ ದೇವಿಯನ್ನ ಭಕ್ತಿಯಿಂದ ಪೂಜಿಸಲಾಗುತ್ತೆ. ಸೃಷ್ಟಿಯಲ್ಲಿ ಎಲ್ಲೆಡೆ ಅಂಧಾಕಾರವಿದ್ದ ಸಮಯದಲ್ಲಿ ಕೂಷ್ಮಾಂಡ ದೇವಿ ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ರಚಿಸುತ್ತಾಳೆ ಅಂತಾನು ಹೇಳಲಾಗ್ತಿದೆ. ಹಾಗಾಗಿ ದೇವಿಯ ಈ ಸ್ವರೂಪವನ್ನ ಕೂಷ್ಮಾಂಡಾ ಎಂದು ಕರೆಯುತ್ತಾರೆ.

ಇದನ್ನೂ ಓದಿ: ನವರಾತ್ರಿ ಮೂರನೇ ದಿನ ಚಂದ್ರಘಂಟೆಯ ಆರಾಧನೆ – ಈ ದೇವಿಯನ್ನು ಪೂಜಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತವೆ..!

ಕೂಷ್ಮಾಂಡ ದೇವಿಯು ಆದಿಶಕ್ತಿಯ ರೂಪವಾಗಿದ್ದಾಳೆ. ಪ್ರಥ್ವಿಗೆ ಅಧಿಪತಿಯಾಗಿರುವ ತಾಯಿ ಕೂಷ್ಮಾಂಡಾ ದೇವಿ ಸೂರ್ಯನ ಕೇಂದ್ರಸ್ಥಾನದಲ್ಲಿ ವಾಸಿಸುತ್ತಾಳೆ ಎಂದು ವೈದಿಕ ಜ್ಯೋತಿಷ್ಯ ಹೇಳುತ್ತದೆ. ಸೂರ್ಯನಿಗಿಂತಲೂ ಕೂಷ್ಮಾಂಡ ದೇವಿ ಪ್ರಕಾಶಮಾನಳಾಗಿರುತ್ತಾಳೆ. ಸೌರವ್ಯೂಹದ ಗ್ರಹಗಳ ಚಲನೆಯನ್ನು ನಿಯಂತ್ರಿಸುತ್ತಾಳೆ. ಈ ಮಾತೆ ಇರುವಲ್ಲಿ ಬೆಳಕಷ್ಟೇ ಅಲ್ಲ ಜ್ಞಾನದ ದೀಪವೂ ಇರುತ್ತದೆ. ಕೂಷ್ಮಾಂಡ ದೇವಿ ಕೂಡಾ ಸಿಂಹವನ್ನೇರಿ ಆಸೀನಳಾಗಿದ್ದಾಳೆ. ಈ ದೇವಿಗೂ ಎಂಟು ಕೈಗಳಿವೆ. ಕಮಂಡಲ, ಧನಸ್ಸು, ಜಪಮಾಲೆ, ಕಮಲ, ಗಧೆ, ಅಮೃತಕಳಶ, ಚಕ್ರ ಹಾಗೂ ಬಾಣವನ್ನ ಹಿಡಿದಿದ್ದಾಳೆ. ಕೂಷ್ಮಾಂಡ ದೇವಿಯ ತಲೆ ಮೇಲೆ ರತ್ನಗಳಿಂದ ಅಲಂಕರಿಸಿದ ಕಿರೀಟವಿದೆ. ತಾಯಿಯ ಈ ರೂಪದಲ್ಲಿ ವಿಶೇಷ ತೇಜಸ್ಸು ಇದೆ. ಈಕೆಯ ಆರಾಧನೆಯಿಂದ ಮನದ ದುಗುಡ ದೂರವಾಗಿ ಜ್ಞಾನದ ಬೆಳಕು ಮೂಡುತ್ತದೆ.

ಸಂಸ್ಕೃತದಲ್ಲಿ ಕೂಷ್ಮಾಂಡವೆಂದರೆ ಬೂದುಗುಂಬಳಕಾಯಿ ಎಂದರ್ಥವಿದೆ. ಇದಕ್ಕೆ ಬ್ರಹ್ಮಾಂಡ ಅಂತಾನೂ ಅರ್ಥವಿದೆ. ಆಯುರ್ವೇದ ಶಾಸ್ತ್ರದ ಪ್ರಕಾರ ಬೂದುಗುಂಬಳಕಾಯಿ ಜ್ಞಾನವರ್ದಕ, ತೇಜೋವರ್ದಕ. ದೇಹದ ಸಕಲ ತಾಪವನ್ನ ನಿವಾರಣೆ ಮಾಡಿ ದೇಹಕ್ಕೆ ತಂಪೆರೆಯುವ ಶಕ್ತಿಯನ್ನೂ ಹೊಂದಿದೆ. ಕೂಷ್ಮಾಂಡ ಪದದಲ್ಲಿ ಕು ಎಂದರೆ ಚಿಕ್ಕದು, ಉಷ್ಮ ಅಂದರೆ ಶಕ್ತಿ ಮತ್ತು ಅಂಡ ಎಂದರೆ ಭ್ರೂಣ ಎಂದರ್ಥ. ಹೀಗಾಗಿಯೇ ತಾಯಿ ಕೂಷ್ಮಾಂಡ ದೇವಿ ತನ್ನ ನಗುವಿನಿಂದ ಅಂಧಾಕಾರವನ್ನ ದೂರಮಾಡುವ ಶಕ್ತಿದೇವತೆಯಾಗಿದ್ದಾಳೆ.

ನವರಾತ್ರಿಯ ನಾಲ್ಕನೇ ದಿನದ ಪೂಜೆಯಲ್ಲಿ ಕೂಷ್ಮಾಂಡಳನ್ನ ಪೂಜಿಸುವುದರಿಂದ ಒಳ್ಳೆಯ ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ. ಸಿದ್ಧಿ ಮತ್ತು ನಿಧಿಯು ತಾಯಿಯ ಜಪಮಾಲೆಯಲ್ಲಿದೆ ಅನ್ನೋ ನಂಬಿಕೆಯೂ ಇದೆ. ನವರಾತ್ರಿಯಲ್ಲಿ ಮಾತೆ ಕೂಷ್ಮಾಂಡಳನ್ನ ಪೂಜಿಸುವುದರಿಂದ ಭಕ್ತರಿಗೆ ಅಮೂಲ್ಯವಾದ ಶಕ್ತಿಯು ಪ್ರಾಪ್ತವಾಗುತ್ತದೆ. ದೇವಿಯ ಮುಖದಲ್ಲಿರುವ ಮಂದಹಾಸವನ್ನ ನೋಡಿದರೆ ಭಕ್ತರ ಜೀವನದಲ್ಲಿ ಧನಾತ್ಮಕ ಭಾವನೆ ಮೂಡುತ್ತದೆ. ಮೊದಲೇ ಹೇಳಿದಂತೆ ಸೂರ್ಯದೇವನಿಗೆ ಬೆಳಕು ನೀಡುವ ಈ ಮಾತೆ ಸೂರ್ಯನಿಗೂ ಅಧಿಪತಿಯೂ ಹೌದು. ಈ ಕಾರಣದಿಂದಾಗಿಯೇ ಕೂಷ್ಮಾಂಡದೇವಿಯನ್ನ ಪೂಜಿಸುವುದರಿಂದ ಜಾತಕದಲ್ಲಿ ಯಾರಿಗಾದ್ರೂ ಸೂರ್ಯನಿಂದಾಗುವ ಕೆಡುಕೇನಾದ್ರೂ ಇದ್ರೆ ನಿವಾರಣೆಯಾಗುತ್ತದೆ.

ಈ ದೇವಿಯನ್ನ ನೆನೆದು ಮನಸ್ಸಿನಲ್ಲಿ ಪೂಜಿಸಿದರೆ ಹೆಚ್ಚು ಫಲ ಪ್ರಾಪ್ತಿಯಾಗುತ್ತದೆ. ಈ ಮಾತೆಯನ್ನ ಪೂಜಿಸುವ ದಿನ ಮೊಸರು, ಹಣ್ಣು ಸೇರಿದಂತೆ ಸಿಹಿಯೂಟ ಮಾಡಬೇಕು. ಕೂಷ್ಮಾಂಡದೇವಿಯ ಪೂಜೆಗೆ ಅತೀ ಪವಿತ್ರವಾದ ಹೂವೆಂದರೆ ಕೆಂಪು ಬಣ್ಣದ ಹೂವುಗಳು. ದೇವಿಗೆ ಕೆಂಪುಹೂವುಗಳಿಂದ ಅರ್ಚನೆ ಮಾಡಿ ಘೋಡಶೋಪಚಾರ ಪೂಜೆ ಮಾಡಬೇಕು.  ನವರಾತ್ರಿಯ ನಾಲ್ಕನೇ ದಿನವಾದ ಇವತ್ತು ಭಕ್ತರಿಗೆ ಕೇಸರಿ ಬಣ್ಣವು ಶುಭ ತರುವುದು. ಪ್ರಕಾಶಮಾನವಾದ ಮತ್ತು ರೋಮಾಂಚಕವಾದ ಬಣ್ಣವೇ ಕಿತ್ತಳೆ. ಹೀಗಾಗಿ ಈ ಬಣ್ಣವು ಶಕ್ತಿ ಮತ್ತು ಸಂತೋಷದ ಪ್ರತೀಕವೂ ಹೌದು. ಒಟ್ನಲ್ಲಿ ಇವತ್ತು ಕೂಷ್ಮಾಂಡದೇವಿಯನ್ನ ಆರಾಧಿಸುವುದರಿಂದ ಕುಟುಂಬದಲ್ಲಿ ಸಮೃದ್ಧಿ ಹೆಚ್ಚುತ್ತದೆ. ಸಮಾಜದಲ್ಲೂ ಒಳ್ಳೇ ಸ್ಥಾನಮಾನ ಸಿಗುತ್ತದೆ.

Sulekha