ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಆರಾಧನೆ – ಈ ತಾಯಿಯನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ..

ನವರಾತ್ರಿಯ 5ನೇ ದಿನ ಸ್ಕಂದಮಾತೆಯ ಆರಾಧನೆ – ಈ ತಾಯಿಯನ್ನು ಪೂಜಿಸಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ..

ನವರಾತ್ರಿಯ ಐದನೇ ದಿನ ತಾಯಿ ಸ್ಕಂದಮಾತೆಯ ಆರಾಧನೆ ಮಾಡಲಾಗುತ್ತದೆ. ಈಕೆಯು ದುರ್ಗೆಯ ಅವತಾರಗಳಲ್ಲಿ ಐದನೆಯವಳು. ಹಾಗೂ ನವರಾತ್ರಿ ಹಬ್ಬದ 5 ನೇ ದಿನದಂದು ದುರ್ಗಾ ದೇವಿಯ ಸ್ಕಂದಮಾತೆ ರೂಪವನ್ನು ಪೂಜಿಸಲಾಗುತ್ತದೆ. ನವರಾತ್ರಿ 5ನೇ ದಿನ ಸ್ಕಂದಮಾತೆ ಪೂಜೆ ಮಾಡುವುದು ಹೇಗೆ..? ಸ್ಕಂದಮಾತೆಯ ಪೂಜೆಯ ವಿಧಾನ ಮತ್ತು ಮಹತ್ವವನ್ನು ತಿಳಿದುಕೊಳ್ಳೋಣ.

ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ – ಬ್ರಹ್ಮಾಂಡವನ್ನು ರಚಿಸಿದ ಆದಿಶಕ್ತಿಯ ವಿಶೇಷತೆಯೇನು?

ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ, ಶಿವ ಹಾಗೂ ಪಾರ್ವತಿಯ ಹಿರಿಯ ಪುತ್ರ ಎಂಬುದು ಎಲ್ಲರಿಗೂ ಗೊತ್ತಿದೆ. ಕಾರ್ತಿಕೇಯನಿಗೆ ಸ್ಕಂದ ಎನ್ನುವ ಇನ್ನೊಂದು ಹೆಸರೂ ಕೂಡ ಇದೆ. ಸ್ಕಂದನು ಹುಟ್ಟಿದ ನಂತರ ತಾಯಿ ಪಾರ್ವತಿಯನ್ನು ಸ್ಕಂದಮಾತೆ ಎಂದು ಕರೆಯಲಾಗುತ್ತದೆ. ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ತಾಯಿ ಪಾರ್ವತಿಯ ತೊಡೆಯ ಮೇಲೆ ಸ್ಕಂದನು ಕುಳಿತಿದ್ದು, ಇದರಿಂದಲೇ ಆಕೆಗೆ ಸ್ಕಂದ ಮಾತೆ ಎನ್ನುವ ಹೆಸರು ಬಂದಿದೆ. ಸ್ಕಂದಮಾತೆಯು ಸಿಂಹಾರೂಢಳಾಗಿದ್ದು, ಆಕೆಯು ಹಲವು ಮುಖಗಳುಳ್ಳ ಕಾರ್ತಿಕೇಯನನ್ನು ತೊಡೆಯ ಮೇಲೆ ಕೂರಿಸಿಕೊಂಡಿದ್ದಾಳೆ. ತಾಯಿಯು ನಾಲ್ಕು ಕೈಗಳನ್ನು ಹೊಂದಿದ್ದು ಅಭಯ ಮುದ್ರೆಯನ್ನು ತೋರುತ್ತಿರುತ್ತಾಳೆ. ಆಕೆಯ ಹಣೆಯ ಮೇಲೆ ಶಿವನ ಮೂರನೇ ಕಣ್ಣು ಹಾಗೂ ಅದರ ಮೇಲೆ ಅರ್ಧ ಚಂದ್ರನ ಗುರುತು ಇದೆ. ಸ್ಕಂದಮಾತೆಯು ತಾವರೆಯ ಮೇಲೂ ಕುಳಿತುಕೊಂಡಿರುತ್ತಾಳೆ. ಹಾಗಾಗಿ ತಾಯಿಯನ್ನು ಪದ್ಮಾಸನ ಎಂದೂ ಕರೆಯಲಾಗುತ್ತದೆ. ಕಮಲವು ಆಕೆಯ ಇಷ್ಟವಾದ ಹೂವು ಎಂದು ಹೇಳಲಾಗುತ್ತದೆ. ಸ್ಕಂದ ಮಾತೆಗೆ ಕೆಂಪು ಬಣ್ಣದ ಹೂವು ವಿಶೇಷವಾಗಿ ಗುಲಾಬಿ ಹೂವು ಪ್ರಿಯವಾದುದು. ಸ್ಕಂದ ಮಾತೆ ಹಾಗೂ ಪುತ್ರ ಸ್ಕಂದ ಆಶೀರ್ವಾದಕ್ಕೆ ವಿಶೇಷ ಪೂಜೆಯನ್ನು ಈ ದಿನ ಮಾಡಬೇಕು. ಷೋಡಶೋಪಚಾರ ಪೂಜೆಯ ನಂತರ ಆರತಿಯೊಂದಿಗೆ ಪೂಜೆಯನ್ನು ಮುಕ್ತಾಯಗೊಳಿಸಬೇಕು. ಜೀವನದ ಸದ್ಗತಿಗೆ ಹಾಗೂ ಆಧ್ಯಾತ್ಮಿಕ ಸಂತುಷ್ಟಿಗಾಗಿ ಈ ಅವತಾರಕ್ಕೆ ಆರಾಧನೆ ಮಾಡಲಾಗುವುದು. ಭಕ್ತರ ಭಕ್ತಿಗೆ ದೇವಿಯು ಮಾರುಹೋಗುತ್ತಾಳೆ ಮತ್ತು ಅವರ ಇಷ್ಟಾರ್ಥ ಸಿದ್ಧಿಸುವಂತೆ ಆಶೀರ್ವದಿಸುತ್ತಾಳೆ ಎಂದು ಪಂಡಿತರು ಸ್ಕಂದಮಾತೆಯ ಬಗ್ಗೆ ಹೇಳುತ್ತಾರೆ. ತಾಯಿಯನ್ನು ಪೂಜಿಸುವವರ ಆಸೆಗಳು ಈಡೇರುತ್ತದೆ. ನಿಮ್ಮ ಮನೆಯಲ್ಲಿರುವ ಸಂಪತ್ತು ಇನ್ನಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

Sulekha