ನವರಾತ್ರಿ ಮೂರನೇ ದಿನ ಚಂದ್ರಘಂಟೆಯ ಆರಾಧನೆ – ಈ ದೇವಿಯನ್ನು ಪೂಜಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತವೆ..!

ನವರಾತ್ರಿ ಮೂರನೇ ದಿನ ಚಂದ್ರಘಂಟೆಯ ಆರಾಧನೆ – ಈ ದೇವಿಯನ್ನು ಪೂಜಿಸಿದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತವೆ..!

ಇವತ್ತು ಮೂರನೇ ದಿನದ ನವರಾತ್ರಿಯ ಸಂಭ್ರಮ. ಮೊದಲ ದಿನ ಶೈಲಪುತ್ರಿಯನ್ನ ಆರಾಧಿಸಿದ ಭಕ್ತರು ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನ ಆರಾಧಿಸುತ್ತಾರೆ. ಇವತ್ತು ಮೂರನೇ ದಿನವಾಗಿ ದುರ್ಗಾಮಾತೆಯ ಇನ್ನೊಂದು ಅವತಾರ ಚಂದ್ರಘಂಟೆಯನ್ನ ಆರಾಧಿಸಲಾಗುತ್ತದೆ. ಈಕೆಯ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗುತ್ತವೆ. ಇವಳ ಈ ಸ್ವರೂಪ ಪರಮ ಶಾಂತಿದಾಯಕ ಮತ್ತು ಶ್ರೇಯಸ್ಸಿನ ಸಂಕೇತವೂ ಆಗಿದೆ.

ಇದನ್ನೂ ಓದಿ: ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆ – ಈ ದೇವಿಯ ಮಹತ್ವ ಮತ್ತು ವಿಶೇಷತೆಗಳ ವಿವರ ಇಲ್ಲಿದೆ.

ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ. ದುರ್ಗಾಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟೆ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ ತನ್ನ ಭಕ್ತರನ್ನ ರಕ್ಷಿಸುವ ಮಾತೆಯಾಗಿ ಚಂದ್ರಘಂಟೆ ಇಷ್ಟದೇವತೆಯಾಗಿ ಆರಾಧಿಸಲ್ಪಡುತ್ತಾಳೆ. ಚಂದ್ರಘಂಟಾ ಅಂದರೆ ಘಂಟೆಯಾಕಾರದ ಚಂದ್ರನನ್ನ ಮಸ್ತಕದಲ್ಲಿ ಧರಿಸಿದವಳು. ಹಾಗೂ ಚಂದ್ರಘಂಟೆಯ ಮೂರನೇ ಕಣ್ಣು ತೆರೆದೇ ಇದ್ದು ಯಾವ ಸಮಯದಲ್ಲಿ ಆದರೂ ದುಷ್ಟಶಕ್ತಿಗಳ ನಿಗ್ರಹಕ್ಕೆ ಸಿದ್ಧಳಾಗಿರುವಂತೆ ಕಾಣುತ್ತಾಳೆ. ಚಂದ್ರಘಂಟೆಯನ್ನು ಚಂದ್ರಿಕಾ, ರಣಚಂಡಿ ಅಂತಾನೂ ಕರೀತಾರೆ. ಇವಳಿಗೆ ಹತ್ತು ಕೈಗಳಿವೆ. ಹತ್ತೂ ಕೈಗಳಲ್ಲಿ ಶಸ್ತ್ರಾಸ್ತ್ರವನ್ನ ಹಿಡಿದುಕೊಂಡ ಈ ಮಾತೆಯ ವಾಹನ ಸಿಂಹ. ಹೀಗಾಗಿ ಈ ಚಂದ್ರಘಂಟಾದೇವಿ ಸಿಂಹವಾಹಿನಿಯಾಗಿ ರಾರಾಜಿಸುತ್ತಾಳೆ. ಇವಳ ಶರೀರದ ಬಣ್ಣವು ಚಿನ್ನದಂತೆ ಹೊಳೆಯುತ್ತದೆ.

ಚಂದ್ರಘಂಟೆಯು ದುರ್ಗಾಮಾತೆಯ ಅವತಾರಗಳಲ್ಲಿ ಹೊಸದಾಗಿ ವಿವಾಹವಾದ ಸ್ವರೂಪವನ್ನ ಹೊಂದಿದ್ದಾಳೆ. ಪರಶಿವನ ಒಲಿಸಿಕೊಳ್ಳಲು ಪಾರ್ವತಿ ದೇವಿ ಬಲು ಕಠಿಣ ತಪಸ್ಸನ್ನ ಮಾಡುತ್ತಾಳೆ. ಶಿವನ ಮೇಲಿನ ನಿಷ್ಠೆಯನ್ನ ಪರೀಕ್ಷಿಸಿದ ಪರಶಿವ, ಪಾರ್ವತಿಯ ತಪಸ್ಸಿಗೆ ಒಲಿಯುತ್ತಾನೆ.  ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನ ಪ್ರವೇಶಿಸುತ್ತಾನೆ. ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನ ನೋಡಿ ಪಾರ್ವತಿದೇವಿಯು ತಾಯಿ ಮೂರ್ಛೆ ಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟಾ ರೂಪ ತಾಳಿ ಶಿವನ ಮುಂದೆ ಪ್ರತ್ಯಕ್ಷಳಾಗುತ್ತಾಳೆ. ಶಿವನು ರಾಜಕುಮಾರನ ರೂಪವನ್ನ ತಾಳಬೇಕು ಅಂತಾ ವಿನಂತಿಸಿಕೊಳ್ಳುತ್ತಾಳೆ. ಚಂದ್ರಘಂಟೆಯ ಮಾತಿಗೆ ಒಲಿದ ಶಿವ ಸುಂದರ ರೂಪವನ್ನ ತಾಳುತ್ತಾನೆ. ನಂತರ ಶಿವ ಪಾರ್ವತಿಯರ ವಿವಾಹ ಕಾರ್ಯ ನೆರವೇರುತ್ತದೆ.

ಚಂದ್ರಘಂಟೆಯು ಶುಕ್ರಗ್ರಹದ ಅಧಿದೇವತೆಯಾಗಿದ್ದಾಳೆ. ಭೂಮಿಯ ಮೇಲಿರುವ ಎಲ್ಲಾ ಜೀವಿಗಳಿಗೂ ಸಂತೋಷವನ್ನು ನೀಡುವ ತಾಯಿ ಈ ದೇವಿ. ಇವಳ ಆರಾಧನೆಯಿಂದ ಸಂಪತ್ತು ಮತ್ತು ಸಮೃದ್ಧಿಯನ್ನೂ ಪಡೆಯಬಹುದು. ಈಕೆಯ ಆಶೀರ್ವಾದದಿಂದ ಮನೆಯಲ್ಲಿ ಎಂದಿಗೂ ಆಹಾರದ ಕೊರತೆಯೂ ಬಾರದು. ಚಂದ್ರಘಂಟೆಗೆ ಮಲ್ಲಿಗೆ ಹೂವು ಅರ್ಪಿಸಿ ಪೂಜೆ ಮಾಡುತ್ತಾರೆ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ ಆರತಿ ಮಾಡಿ ಭಕ್ತಿಯಿಂದ ಪೂಜಿಸಲಾಗುತ್ತೆ.

ಕೆಂಪುಬಣ್ಣದಲ್ಲಿ ಕಂಗೊಳಿಸುವ ದೇವಿಯು ಅನುಗ್ರಹ ಮತ್ತು ನೆಮ್ಮದಿಯನ್ನ ಕರುಣಿಸುತ್ತಾಳೆ. ಈಕೆ ಸೌಂದರ್ಯ ಮತ್ತು ಧೈರ್ಯದ ಸಂಕೇತವೂ ಹೌದು. ಈ ದಿನ ದೇವಿಗೆ ಕೆಂಪುಬಣ್ಣದ ವಸ್ತ್ರಾಲಂಕಾರ ಮಾಡುವುದರ ಮೂಲಕ ಆರಾಧಿಸಲಾಗುತ್ತದೆ. ಈ ಮಾತೆಯ ಆರಾಧನೆಯಿಂದ ಮನಸ್ಸಿನಲ್ಲಿರುವ ಭಯವೂ ದೂರವಾಗುತ್ತದೆ. ಈಕೆಯನ್ನ ಪೂಜಿಸಿದರೆ ಜೀವನದಲ್ಲಿ ಯಶಸ್ಸು ಸಾಧಿಸುವ ಧೈರ್ಯ ಬರುತ್ತದೆ. ಇನ್ನು ದೇವಿಯ ಮಸ್ತಕದಲ್ಲಿರುವ ಚಂದ್ರಘಂಟೆಯ ನಾದವು ಋಣಾತ್ಮಕ ಶಕ್ತಿ, ದುಷ್ಟಶಕ್ತಿಗಳನ್ನೆಲ್ಲಾ ದೂರ ಮಾಡುವುದು. ಹೀಗಾಗಿಯೇ ಚಂದ್ರಘಂಟೆ ಮಾತೆಯನ್ನ ಪೂಜಿಸಿ, ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನ ದೂರ ಮಾಡಿ.

Sulekha