ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆ – ಈ ದೇವಿಯ ಮಹತ್ವ ಮತ್ತು ವಿಶೇಷತೆಗಳ ವಿವರ ಇಲ್ಲಿದೆ.

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿಯ ಆರಾಧನೆ – ಈ ದೇವಿಯ ಮಹತ್ವ ಮತ್ತು ವಿಶೇಷತೆಗಳ ವಿವರ ಇಲ್ಲಿದೆ.

ಇವತ್ತು ನವರಾತ್ರಿಯ ಎರಡನೇ ದಿನ. ನಾಡಿನೆಲ್ಲೆಡೆ ಅದಾಗಲೇ ನವರಾತ್ರಿಯ ಸಂಭ್ರಮ ಶುರುವಾಗಿದೆ. 9 ದಿನಗಳ ಕಾಲ ದುರ್ಗಾದೇವಿಯ 9 ಅವತಾರಗಳನ್ನ ಪೂಜಿಸಲಾಗುತ್ತದೆ. ನವರಾತ್ರಿಯ ಎರಡನೇ ದಿನದ ಪೂಜಾರಂಭವೂ ಬೆಳಗ್ಗೆಯಿಂದಲೇ ಆರಂಭವಾಗುತ್ತದೆ.. ಹೀಗಾಗಿ ಇವತ್ತಿನ ನವರಾತ್ರಿಯ ಆರಾಧನೆಯೂ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ.

ಇದನ್ನೂ ಓದಿ: ನವರಾತ್ರಿ ಸಮಯದಲ್ಲಿ ಈ ದೇವಸ್ಥಾನಗಳಿಗೆ ಭೇಟಿ ಕೊಟ್ಟರೆ ಕಷ್ಟಗಳೆಲ್ಲಾ ಪರಿಹಾರ! – ಐದು ದೇವಿ ದೇವಾಲಯಗಳ ಹಿನ್ನೆಲೆ ಗೊತ್ತಾ?

ಮೊದಲ ದಿನ ಶೈಲಪುತ್ರಿ ದೇವಿಯನ್ನ ಆರಾಧಿಸಿದ ಭಕ್ತರು ಇವತ್ತು ಎರಡನೇ ದಿನ ದುರ್ಗಾಮಾತೆಯ ಮತ್ತೊಂದು ಅವತಾರವನ್ನ ಪೂಜಿಸುತ್ತಾರೆ. ಆ ದೇವಿಯ ಸ್ವರೂಪವೇ ಬ್ರಹ್ಮಚಾರಿಣಿ. ಈ ದೇವಿ ಶುದ್ಧತೆಯ ಪ್ರತೀಕವಾಗಿದ್ದಾಳೆ. ಬ್ರಹ್ಮಚಾರಿಣಿ ಪದದ ಅರ್ಥವೇ ಅವಿವಾಹಿತೆ.  ಬ್ರಹ್ಮಚಾರಿಣಿ ದೇವಿಯು ಬುದ್ದಿವಂತಿಕೆಯಿಂದ ತುಂಬಿದ ಕನ್ಯೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ. ಬ್ರಹ್ಮಚಾರಿಣಿ ದೇವಿ ತನ್ನ ಕೈಯಲ್ಲಿ ಜಪಮಾಲೆ ಮತ್ತು ಕಮಂಡಲವನ್ನ ಹಿಡಿದಿರುತ್ತಾಳೆ. ದೇವಿಯು ಭಕ್ತರನ್ನ ಶಾಶ್ವತ ಜ್ಞಾನ ಮತ್ತು ಆನಂದದಿಂದ ಆಶೀರ್ವದಿಸುತ್ತಾಳೆ. ಈ ದೇವಿಯ ಸೌಹಾರ್ಧಯುತ ಮತ್ತು ಶಾಂತಿಯುತ ರೂಪವು ಮನಸ್ಸಿನಲ್ಲಿ ಪ್ರಶಾಂತ ಮತ್ತು ಶಾಂತ ಭಾವ ಮೂಡುವಂತೆ ಮಾಡುತ್ತದೆ. ಬ್ರಹ್ಮಚಾರಿಣಿಯ ಆರಾಧನೆಯಿಂದ ಭಕ್ತರಲ್ಲಿ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ಮೋಕ್ಷವನ್ನ ಪಡೆಯಲು ಬಯಸಿದರೆ ದೇವಿಯ ಈ ಅವತಾರಕ್ಕೆ ಪೂಜೆ ಸಲ್ಲಿಸಿದರೆ ಅನುಗ್ರಹ ನೀಡುತ್ತಾಳೆ.

ಕೂಡಾ ಬ್ರಹ್ಮಚಾರಿಣಿಯನ್ನ ಶುದ್ಧಳು, ಪವಿತ್ರತೆ ಹೊಂದಿದವಳು, ಧಾರ್ಮಿಕ ಜ್ಞಾನ ಹೊಂದಿದವಳು ಅನ್ನೋದನ್ನ ವೇದಗ್ರಂಥಗಳಲ್ಲೂ ನೋಡಬಹುದಾಗಿದೆ. ಬ್ರಹ್ಮಚಾರಿಣಿ ಬಿಳಿ ಬಟ್ಟೆಗಳನ್ನ ಧರಿಸುತ್ತಾಳೆ. ಬರಿಗಾಲಿನಲ್ಲಿ ನಡೆಯುತ್ತಾಳೆ. ಅಂದರೆ ಯಾರೀ ಬ್ರಹ್ಮಚಾರಿಣಿ ಅಂತಾ ನೋಡಿದಾಗ ಈಕೆ ದುರ್ಗಾದೇವಿಯ ಕೂಷ್ಮಾಂಡ ರೂಪವನ್ನ ಪಡೆದ ನಂತರ, ಬ್ರಹ್ಮಚಾರಿಣಿಯ ಅವತಾರವನ್ನ ತಾಳುತ್ತಾಳೆ. ಶಿವನ ಬಗ್ಗೆ ಆಳವಾದ ತಿರಸ್ಕಾರ ಹೊಂದಿದ್ದ ದಕ್ಷ ಪ್ರಜಾಪತಿಯ ಮಗಳಾಗಿ ಪಾರ್ವತಿಯು ಜನಿಸುತ್ತಾಳೆ. ಇವಳ ಮೊದಲ ರೂಪವನ್ನ ಬ್ರಹ್ಮಚಾರಿಣಿ ಎಂದು ಪೂಜಿಸಲಾಗುತ್ತದೆ. ದೇವಿಯು ತನ್ನ ಮುಂದಿನ ಜನ್ಮದಲ್ಲಿ ಶಿವನನ್ನ ಗೌರವಿಸುವ ಒಬ್ಬ ಒಳ್ಳೆಯ ತಂದೆಯನ್ನು ಪಡೆಯಲು ತೀವ್ರ ತಪಸ್ಸು ಮಾಡಿದಳು. ಬರಿಗಾಲಿನಲ್ಲಿ ನಡೆದಳು. ಭಗವಾನ್ ಶಿವನನ್ನ ಮದುವೆಯಾಗಲು ಪಾರ್ವತಿಯು ಸಾವಿರಾರು ವರ್ಷಗಳ ಕಾಲ ತಪಸ್ಸನ್ನ ಮಾಡುತ್ತಾಳೆ. ಪಾರ್ವತಿಯು ಯೋಗಿಗಳು ಮತ್ತು ತಪಸ್ವಿಗಳ ಮೆಚ್ಚಿನ ತಾಣ ಪರ್ವತಗಳಲ್ಲಿ ವಾಸಿಸುತ್ತಿದ್ದಳು. ಹೂವುಗಳು, ಹಣ್ಣುಗಳು, ಎಲೆಗಳನ್ನ ಮಾತ್ರ ಸೇವಿಸುತ್ತಿದ್ದಳು. ನಂತರದಲ್ಲಿ ಎಲೆಯ ಸೇವನೆಯನ್ನೂ ನಿಲ್ಲಿಸದಳು. ಪರ್ಣ ಅಂದರೆ ಎಲೆ. ಹೀಗಾಗಿ ಈಕೆಯನ್ನ ಅಪರ್ಣಾ ಅಂತಾನೂ ಕರೀತಾರೆ. ಈಕೆ ನಂತರ ಇದೆಲ್ಲವನ್ನೂ ಬಿಟ್ಟು ಕೇವಲ ಗಾಳಿಯಲ್ಲೇ ಜೀವಿಸಲು ಶುರುಮಾಡಿದ್ದಳು. ಹೀಗಾಗಿಯೇ ಪಾರ್ವತಿಯ ಈ ಧರ್ಮನಿಷ್ಠೆ ಹಾಗೂ ಶಾಂತತೆಯ ಬದುಕು ಬ್ರಹ್ಮಚಾರಿಣಿಯ ಸ್ವರೂಪದಿಂದ ಕೂಡಿತ್ತು.

ಬ್ರಹ್ಮಚಾರಿಣಿ ಅತ್ಯಂತ ನಿಷ್ಠೆಯಿಂದ ತಪಸ್ಸನ್ನಾಚರಿಸುವಾಗ ಶಿವನು ಒಬ್ಬ ಸನ್ಯಾಸಿಯ ರೂಪವನ್ನ ತಾಳಿ ಬರುತ್ತಾನೆ. ಶಿವನಲ್ಲಿ ಈಕೆಗಿರುವ ನಿಷ್ಠೆಯನ್ನ ಪರೀಕ್ಷಿಸುತ್ತಾನೆ. ಶಿವನು ಬೂದಿಬಡುಕ, ಸ್ಮಶಾನವಾಸಿ, ಭಿಕ್ಷುಕ ಅಂಥವನನ್ನ ಯಾಕೆ ಬಯಸುತ್ತೀಯಾ ಅಂತಾ ಪ್ರಶ್ನಿಸುತ್ತಾನೆ. ಆದರೆ, ಪಾರ್ವತಿ ಸನ್ಯಾಸಿಯ ಮಾತಿಗೆ ಕಿವಿಕೊಡಲಿಲ್ಲ. ಪಾರ್ವತಿಯ ಅಖಂಡ ನಿಷ್ಠೆಗೆ ಪರಶಿವ ಒಲಿಯುತ್ತಾನೆ.

ಶುದ್ಧಬಟ್ಟೆಗಳನ್ನ ಧರಿಸಿ ದುರ್ಗಾದೇವಿಯ ಎರಡನೇ ಅವತಾರವಾದ ಬ್ರಹ್ಮಚಾರಿಣಿಯನ್ನ ಪೂಜಿಸಲು ತಯಾರಿಮಾಡಿಕೊಳ್ಳಲಾಗುತ್ತದೆ.  ಅಕ್ಷತೆ, ಹೂವುಗಳು, ಕುಂಕುಮ, ಶ್ರೀಗಂಧಗಳನ್ನ ಪೂಜೆಗಿಡಲಾಗುತ್ತೆ. ದೇವಿಗೆ ಹಾಲು ಮೊಸರು, ತುಪ್ಪ, ಜೇನು ಮತ್ತು ಸಕ್ಕರೆಯ ಅಭಿಷೇಕ ಮಾಡಲಾಗುತ್ತದೆ. ದೇವಿ ಬ್ರಹ್ಮಚಾರಿಣಿಗೆ ವೀಳ್ಯದೆಲೆ, ಅಡಿಕೆ ಮತ್ತು ಲವಂಗವನ್ನ ಅರ್ಪಿಸಿ ನಂತರ ಮಂತ್ರಗಳನ್ನ ಪಠಿಸಲಾಗುತ್ತೆ. ಹವನಕುಂಡದಲ್ಲಿ ಹವನ ಮಾಡಿ, ನಂತರ ಕಲಶವನ್ನ ,ನವಗ್ರಹವನ್ನ , ಗ್ರಾಮದೇವರನ್ನ , ಮನೆ ದೇವರನ್ನ ಭಕ್ತಿಯಿಂದ ಪೂಜಿಸಲಾಗುತ್ತೆ. ಬ್ರಹ್ಮಚಾರಿಣಿಗೆ ಇಷ್ಟವಾದ ಹೂವು ಮಲ್ಲಿಗೆ. ಹೀಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಈ ದೇವಿಯನ್ನ ಅಲಂಕರಿಸುತ್ತಾರೆ. ಇನ್ನು ಈ ದೇವಿಯನ್ನ ಪೂಜಿಸುವಾಗ 16 ವಿಧದ ಅರ್ಪಣೆಯೂ ಇರುತ್ತದೆ. ನಂತರ ಆರತಿಯೊಂದಿಗೆ ಪೂಜೆ ಮುಗಿಯುತ್ತದೆ.

ಬ್ರಹ್ಮಚಾರಿಣಿ ಮಂಗಳ ಗ್ರಹದ ಅಧಿಪತಿ ಅಂತಾನೂ ಹೇಳುತ್ತಾರೆ. ತನ್ನ ಭಕ್ತರಿಗೆ ಅದೃಷ್ಟ ನೀಡುತ್ತಾಳೆ. ಮಾನಸಿಕ ಕ್ಷೋಭೆ ದೂರಮಾಡಿ ನೆಮ್ಮದಿಯನ್ನ ದಯಪಾಲಿಸುತ್ತಾಳೆ. ಜನ್ಮಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನ ಪೂಜಿಸಿದರೆ ಸಂಕಷ್ಟಗಳು ದೂರವಾಗುತ್ತವೆ. ಬ್ರಹ್ಮಚಾರಿಣಿಯ ಆರಾಧನೆ ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗಣಗಳು ಕಳೆಯುತ್ತದೆ. ಯಶಸ್ಸಿಗೆ ಅಡ್ಡ ಬಂದಿರೋ ವಿಘ್ನಗಳು ನಿವಾರಣೆಯಾಗಿ ಮನಸ್ಸಲ್ಲಿ ಶಾಂತಿ ನೆಮ್ಮದಿ ಮೂಡುವುದು.

Sulekha