ಕೊಳಕು ಜೀನ್ಸ್‌ಪ್ಯಾಂಟ್ ಬೆಲೆ ಲಕ್ಷ ರೂಪಾಯಿ! – ಏನಿದರ ವಿಶೇಷತೆ?
ವಾಷಿಂಗ್ಟನ್: ಜೀನ್ಸ್ ಎಂದಿಗೂ ‘ಔಟ್ ಆಫ್ ಫ್ಯಾಶನ್’ ಆಗಲು ಸಾಧ್ಯವಿಲ್ಲ. ಯುವಕ-ಯುವತಿಯರಿಗೆ ಟ್ರೆಂಡಿಯಾದ ಜೀನ್ಸ್ ಧರಿಸೋದು ಗೀಳಾಗಿಬಿಟ್ಟಿದೆ. ಮಾರುಕಟ್ಟೆಯಲ್ಲೂ ವಿವಿಧ ವಿನ್ಯಾಸದ ಜೀನ್ಸ್ ಪ್ಯಾಂಟ್ ಗಳು ಲಭ್ಯವಿರುತ್ತದೆ. ಆದರೆ ಕೊಳಕಾದ, ಹಳೆಯ ಜೀನ್ಸ್‌ಪ್ಯಾಂಟ್‌ವೊಂದು ಲಕ್ಷಾಂತರ ರೂಪಾಯಿಗೆ ಮಾರಾಟವಾಗಿದೆ.
ಹೌದು, 1857ರಲ್ಲಿ ಉತ್ತರ ಕೆರೊಲಿನಾದ ಕರಾವಳಿಯಲ್ಲಿ ಸಂಭವಿಸಿದ ಹಡಗು ದುರಂತದಲ್ಲಿ ಕಳೆದುಹೋಗಿದ್ದ ಜೀನ್ಸ್‌ಪ್ಯಾಂಟ್‌ವೊಂದು ಪತ್ತೆಯಾಗಿದೆ. ಇದನ್ನು ವಿಶ್ವದ ಹಳೆಯ ಜೀನ್ಸ್‌ಪ್ಯಾಂಟ್ ಎಂದು ಗುರುತಿಸಲಾಗಿದ್ದು, 1,14,000 ಯುಎಸ್ ಡಾಲರ್ ಅಂದರೆ, 94 ಲಕ್ಷ ರೂ.ಗಳಿಗೆ ಮಾರಾಟ ಮಾಡಲಾಗಿದೆ.
ಇದನ್ನೂ ಓದಿ: ಮುದ್ದಿನ ಶ್ವಾನಕ್ಕೆ ಸೀಮಂತ ಸಂಭ್ರಮ – ಗರ್ಭಿಣಿ ನಾಯಿಗೆ ನೆಟ್ಟಿಗರಿಂದ ಶುಭ ಹಾರೈಕೆ
1857ರ ಸೆಪ್ಟೆಂಬರ್‌ನಲ್ಲಿ 425 ಜನರಿದ್ದ ಶಿಪ್ ಆಫ್ ಗೋಲ್ಡ್ ಹಡಗು ಪನಾಮದಿಂದ ನ್ಯೂಯಾರ್ಕ್‌ಗೆ ಪ್ರಯಾಣಿಸುತ್ತಿದ್ದ ವೇಳೆ ಚಂಡಮಾರುತಕ್ಕೆ ಹೊಡೆತಕ್ಕೆ ಸಿಕ್ಕಿ ಮುಳುಗಡೆಯಾಗಿತ್ತು. ಈ ವೇಳೆ ಹಡಗಿನಲ್ಲಿದ್ದ ಟ್ರಂಕ್‌ವೊಂದರಲ್ಲಿ ಹಳೆಯ ಜೀನ್ಸ್‌ಪ್ಯಾಂಟ್ ಇದ್ದಿದ್ದನ್ನು ಎಸ್‌ಎಸ್ ಸೆಂಟ್ರಲ್ ಅಮೆರಿಕಾ ಪತ್ತೆಮಾಡಿದೆ. ಒರೆಗಾನ್‌ನ ಮೆಕ್ಸಿಕನ್-ಅಮೆರಿಕ ಯುದ್ಧದ ಅನುಭವಿ ಜಾನ್ ಡಿಮೆಂಟ್‌ಗೆ ಸೇರಿದ್ದ ಟ್ರಂಕ್‌ನಲ್ಲಿ ಈ ಪ್ಯಾಂಟ್ ಪತ್ತೆಯಾಗಿದೆ.
ಕಳೆದ ವಾರ ಕೆನಡಾದ ರೆನೋವಾದಲ್ಲಿ 270 ಗೋಲ್ಡ್ ರಶ್-ಯುಗದ ಕಲಾಕೃತಿಗಳೊಂದಿಗೆ ಪ್ರದರ್ಶಿಸಲಾಗಿತ್ತು. ಈ ವೇಳೆ ಈ ಜೀನ್ಸ್‌ಪ್ಯಾಂಟ್ ಮಾರಾಟವಾಗಿದೆ.
ವಿಶ್ವದ ಜನಪ್ರಿಯ ಜೀನ್ಸ್ ತಯಾರಕರಲ್ಲಿ ಒಬ್ಬರಾದ ಲೆವಿಸ್ಟ್ರಾಸ್ ಈ ಪ್ಯಾಂಟ್ ಅನ್ನು ತಯಾರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಪ್ಯಾಂಟ್ ಲೆವಿಗಿಂತಲೂ 16 ವರ್ಷ ಹಳೆಯದ್ದಾಗಿದೆ. ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಲೆವಿಸ್ಟ್ರಾಸ್ 1873 ರಲ್ಲಿ ಮೊದಲಿಗೆ ಪ್ಯಾಂಟ್ ಸಿದ್ಧಮಾಡಿದ್ದರು ಎಂದು ವರದಿಗಳು ಹೇಳಿವೆ.