ವಿಶ್ವದ ಅತೀ ದೊಡ್ಡ ಹಿಂದೂ ದೇಗುಲ ಅಮೆರಿಕದಲ್ಲಿ ಉದ್ಘಾಟನೆ – ಅ. 18 ರಿಂದ ಭಕ್ತರ ದರ್ಶನಕ್ಕೆ ಮುಕ್ತ
ವಾಷಿಂಗ್ಟನ್: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತ್ಯಂತ ದೊಡ್ಡ ಹಿಂದೂ ದೇವಾಲಯ ಉದ್ಘಾಟನೆಯಾಗಿದೆ. ಆದರೆ ಈ ದೇವಾಲಯಕ್ಕೆ ಈಗ ಭಕ್ತರ ಪ್ರವೇಶಕ್ಕೆ ನಿರ್ಬಂಧಿಸಲಾದ್ದು, ಅ.18ರಿಂದ ಭಕ್ತರ ಪ್ರವೇಶಕ್ಕೆ ಈ ದೇಗುಲ ಮುಕ್ತವಾಗಲಿದೆ ಎಂದು ವರದಿಯಾಗಿದೆ.
BAPS ಸ್ವಾಮಿನಾರಾಯಣ ಅಕ್ಷರಧಾಮ ದೇವಾಲಯವು ಅಮೆರಿಕದ ನ್ಯೂಜೆರ್ಸಿಯಲ್ಲಿ ಉದ್ಘಾಟನೆಯಾಗಿದೆ. ಈ ದೇವಾಲಯ ಆಧುನಿಕ ಯುಗದಲ್ಲಿ ಭಾರತದ ಹೊರಗಿನ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಎಂದು ಹೇಳಲಾಗುತ್ತದೆ. ನ್ಯೂಜೆರ್ಸಿಯ ರಾಬಿನ್ಸ್‌ವಿಲ್ಲೆ ನಗರದಲ್ಲಿ ನಿರ್ಮಾಣ ಮಾಡಲಾಗಿದೆ. ಬಿಎಪಿಎಸ್ ಸ್ವಾಮಿನಾರಾಯಣ ಅಕ್ಷರಧಾಮಕ್ಕೆ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ‘ವಿಶ್ವದಾದ್ಯಂತ ಅಪಾರ ಸಂಖ್ಯೆಯ ಭಕ್ತರಿಗೆ ಇದು ಆಧ್ಯಾತ್ಮಿಕ ಮಹತ್ವದ ಸಂದರ್ಭವಾಗಿದೆ’ ಎಂದು ಮೋದಿ ಬಣ್ಣಿಸಿದ್ದಾರೆ.
ಇದನ್ನೂ ಓದಿ: ನೆಕ್ಟ್‌ಫ್ಲಿಕ್ಸ್ ಬಳಕೆದಾರರಿಗೆ ಕಹಿ ಸುದ್ದಿ! – ಶೀಘ್ರದಲ್ಲೇ ಸಬ್ ಸ್ಕ್ರಿಪ್ಷನ್ ಶುಲ್ಕ ಹೆಚ್ಚಳ?
ಈ ದೇವಾಲಯವನ್ನು ಇಟಲಿ ಮತ್ತು ಬಲ್ಗೇರಿಯಾದ ವಿಧದ ಅಮೃತಶಿಲೆಯಿಂದ ರಚಿಸಲಾಗಿದೆ. ಈ ವಾಸ್ತುಶಿಲ್ಪದ ದೇವಾಲಯವು ವಿಶಾಲವಾದ 126 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ದೇವಾಲಯದ ಗೋಡೆಗಳಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಮತ್ತು ಅಬ್ರಹಾಂ ಲಿಂಕನ್ ಸೇರಿದಂತೆ ಐತಿಹಾಸಿಕ ವ್ಯಕ್ತಿಗಳ ಪ್ರತಿರೂಪವನ್ನು ಕೆತ್ತನೆ ಮಾಡಲಾಗಿದೆ ಎಂದು ದೇವಾಲಯದ ಸ್ವಯಂಸೇವಕ ಮತ್ತು ಕೊಲಂಬಿಯಾ ವಿಶ್ವವಿದ್ಯಾನಿಲಯದ ಧಾರ್ಮಿಕ ವಿದ್ವಾಂಸ ಯೋಗಿ ತ್ರಿವೇದಿ ತಿಳಿಸಿದ್ದಾರೆ. 2011 ರಲ್ಲಿ ಅಕ್ಷರಧಾಮ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಪ್ರಪಂಚದಾದ್ಯಂತದ 12,500 ಸ್ವಯಂಸೇವಕರು ಈ ದೇವಾಲಯವನ್ನು ನಿರ್ಮಿಸಿದ್ದಾರೆ.