ಕಂದನಿಗೆ ಉಸಿರು ನೀಡಿ ತಾಯಿ ಕೊನೆಯುಸಿರು – ಅವಶೇಷಗಳಡಿ ಹೊಕ್ಕುಳಬಳ್ಳಿ ಸಮೇತ ಸಿಕ್ಕ ಹಸುಗೂಸು!

ಕಂದನಿಗೆ ಉಸಿರು ನೀಡಿ ತಾಯಿ ಕೊನೆಯುಸಿರು – ಅವಶೇಷಗಳಡಿ ಹೊಕ್ಕುಳಬಳ್ಳಿ ಸಮೇತ ಸಿಕ್ಕ ಹಸುಗೂಸು!

ಮುಗಿಲೆತ್ತರದ ಕಟ್ಟಡಗಳು ಧ್ವಂಸ. ಸಾವಿರಾರು ಜನರ ಮಾರಣಹೋಮ. ಪ್ರಕೃತಿ ವಿಕೋಪಕ್ಕೆ ಟರ್ಕಿ ಮತ್ತು ಸಿರಿಯಾ ಅಕ್ಷರಶಃ ಸ್ಮಶಾನ ಆಗಿವೆ. ಎಲ್ಲೆಲ್ಲೂ ಸಾವಿನ ಆರ್ತನಾದ ಕೇಳುತ್ತಿದೆ. ಪುಟ್ಟ ಪುಟ್ಟ ಮಕ್ಕಳೂ ಕೂಡ ಅವಶೇಷಗಳಡಿ ಜೀವಂತಸಮಾಧಿಯಾಗಿದ್ದಾರೆ. ಇದೇ ನೆಲದಲ್ಲಿ ಪವಾಡವೆಂಬಂತೆ ಹಸುಗೂಸು ಬದುಕುಳಿದಿದೆ. ಮುದ್ದು ಕಂದನಿಗೆ ಜನ್ಮನೀಡಿ ತಾಯಿ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ : ಟರ್ಕಿ ಭೂಕಂಪಕ್ಕೆ ಬಲಿಯಾದ ಗೋಲ್‌ಕೀಪರ್ – ಫುಟ್ಬಾಲ್ ಆಟಗಾರನ ದುರಂತ ಅಂತ್ಯ

ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಆದರೆ ಅದೇ ಅವಶೇಷಗಳಡಿ ಮಗುವೊಂದು ಜನಿಸಿದ್ದು, ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದು ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಸಾವಿರಾರು ಜನ ಇನ್ನೂ ಕೂಡ ಅವಶೇಷಗಳಡಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಶೋಧ ಕಾರ್ಯಾಚರಣೆ ವೇಳೆ ಅವಶೇಷಗಳಡಿ ಸಿಲುಕಿದ್ದ ಗರ್ಭಿಣಿ ಹೆಣ್ಣುಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟಿದ್ದಾರೆ. ಸಿರಿಯಾದ ಜಿಂಡರೆಸ್ ನಗರದಲ್ಲಿ ಭೂಕಂಪದಿಂದ 34 ವರ್ಷದ ಖಲೀಲ್ ಅಲ್ ಶಮಿ ಅನ್ನೋರ ಸಹೋದರನ ಮನೆಯೂ ಛಿದ್ರವಾಗಿತ್ತು. ಕುಟುಂಬಸ್ಥರು ಅವಶೇಷಗಳಡಿ ಸಿಲುಕಿದ್ದರು. ಇದೇ ನೋವಿನಲ್ಲೇ ತಮ್ಮವರನ್ನ ಹುಡುಕಲು ಹೋದಾಗ ಮಹಿಳೆ ಮೃತಪಟ್ಟಿದ್ದು ಪಕ್ಕದಲ್ಲೇ ನವಜಾತ ಹೆಣ್ಣು ಶಿಶು ಕಂಡಿದೆ. ಈ ವೇಳೆ ಮಗುವನ್ನ ಎತ್ತಿಕೊಂಡಾಗ ಮಗು ಜೀವಂತವಾಗಿರೋದು ಗೊತ್ತಾಗಿದೆ. ತಕ್ಷಣವೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ಹೊರತೆಗೆಯಲಾಗಿದೆ. ವಿಪರ್ಯಾಸ ಅಂದ್ರೆ ತಾಯಿ ಮೃತಪಟ್ಟಿದ್ದರು. ಅತ್ತಿಗೆ ತುಂಬು ಗರ್ಭಿಣಿಯಾಗಿದ್ದರು, ಒಂದು ಅಥವಾ ಎರಡು ದಿನಗಳಲ್ಲಿ ಹೆರಿಗೆಯಾಗುತ್ತದೆ ಎಂದುಕೊಂಡಿದ್ದೆವು. ಅಷ್ಟರಲ್ಲೇ ದುರಂತ ಸಂಭವಿಸಿದೆ ಎಂದು ಖಲೀಲ್ ಕಣ್ಣೀರಾಕಿದ್ದಾರೆ.

 

suddiyaana