18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆದ ಗುಕೇಶ್ – ಗುಕೇಶ್ ಯಾರು?, ಕನಸು ನನಸಾಗಿದ್ದು ಹೇಗೆ?
ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ಭಾರತದ ಚೆಸ್ ಆಟಗಾರ ಡಿ ಗುಕೇಶ್ ವಿಶ್ವ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಚೀನಾದ ಡಿಂಗ್ ಲಿರೆನ್ನನ್ನು ಸೋಲಿಸುವ ಮೂಲಕ ತಮಿಳುನಾಡು ಮೂಲದ 18ನೇ ವರ್ಷದ ಗುಕೇಶ್ ವಿಶ್ವ ಚೆಸ್ ಸಾಮ್ರಾಟ ಪಟ್ಟಕ್ಕೇರಿದ್ದಾರೆ. ಸಿಂಗಾಪುರದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ಡಿಂಗ್ ಲಿರೆನ್ರನ್ನು ಸೋಲಿಸುವ ಮೂಲಕ ಗುಕೇಶ್, ವಲ್ಡ್ ಚಾಂಪಿಯನ್ ಆದರು. ಈ ಗೆಲುವಿನ ಮೂಲಕ ಗುಕೇಶ್, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶ್ವನಾಥ್ ಆನಂದ್ ಬಳಿಕ ಚದುರಂಗದ ಕಿಲಾಡಿ ಆದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಗುಕೇಶ್‌ಗೆ ಸೇರಿದೆ.
ಇದನ್ನೂ ಓದಿ: 18ನೇ ವಯಸ್ಸಿಗೆ ಚೆಸ್ ಚಾಂಪಿಯನ್ ಗುಕೇಶ್ – ವಿಶ್ವ ಚೆಸ್ ಸಾಮ್ರಾಟ ಪಟ್ಟಕ್ಕೇರಿದ ಭಾರತದ ಗುಕೇಶ್
ಡಿ.ಗುಕೇಶ್. ಪೂರ್ತಿ ಹೆಸರು ಗುಕೇಶ್ ದೊಮ್ಮರಾಜು. ಮೂಲತಃ ತಮಿಳುನಾಡಿನವರು. ತಮ್ಮ 7ನೇ ವಯಸ್ಸಿಗೆ ಚೆಸ್ ಆಡಲು ಶುರುಮಾಡಿದ ಗುಕೇಶ್, 12ನೇ ವಯಸ್ಸಿಗೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿ ದೊಡ್ಡ ಸಾಧನೆ ಮಾಡಿದರು. ಇದೀಗ 18ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಳೆದ 7 ವರ್ಷಗಳ ಹಿಂದೆಯೇ ಅತಿ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಬೇಕೆಂಬ ಕನಸು ಹೊಂದಿದ್ದೇನೆ ಎಂದು ಹೇಳಿದ್ದ ಗುಕೇಶ್ ಈಗ ಆ ಕನಸನ್ನ ಪೂರ್ತಿಗೊಳಿಸಿದ್ದಾರೆ. ಚೆಸ್ ಪಟು ಗುಕೇಶ್ ಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಗಣ್ಯರು, ಸೆಲೆಬ್ರೆಟಿಗಳು, ದಿಗ್ಗಜರು ಶುಭಾಶಯಗಳ ಸುರಿಮಳೆ ಸುರಿಸಿದ್ದಾರೆ.
ಕೇವಲ 18ನೇ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿ ಗುಕೇಶ್ ಹೊರಹೊಮ್ಮಿದ್ದಾರೆ. ಗೆಲುವಿಗಾಗಿ ನಡೆದ 14ನೇ ಸುತ್ತಿನಲ್ಲಿ ಚೀನಾದ ಡಿಂಗ್ ಲಿರೆನ್ ಸೋಲಿಸಿದ ಗುಕೇಶ್ ಡಿ ಇತಿಹಾಸ ರಚಿಸಿದ್ದಾರೆ. 13 ಸುತ್ತುಗಳಲ್ಲಿ ಗುಕೇಶ್ ಹಾಗೂ ಡಿಂಗ್ ಲಿರೆನ್ 6.5 ಅಂಕ ಪಡೆದು ಸಮಭಲ ಸಾಧಿಸಿದ್ದರು. ಹೀಗಾಗಿ 14 ಸುತ್ತು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಸಮಭಲ ಹೋರಾಟ ಕಂಡುಬಂದಿತ್ತು. ಟೈ ಬ್ರೇಕರ್‌ನಲ್ಲಿ ಅಂತ್ಯಗೊಳ್ಳಲಿದೆ ಅನ್ನುವಷ್ಟರಲ್ಲೇ ಗುಕೇಶ್ ಗೆಲುವಿನ ನಗೆ ಬೀರಿದ್ದರು. ಗುಕೇಶ್ 7.5 ಹಾಗೂ ಡಿಂಗ್ 6.5 ಅಂಕಗಳಿಸಿದರು. ಒಂದು ಸಣ್ಣ ತಪ್ಪು ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಸೋಲಿಗೆ ಕಾರಣವಾಯಿತು. ಗುಕೇಶ್ ಡಿ ಅಥವಾ ಗುಕೇಶ್ ದೊಮ್ಮರಾಜು ಹುಟ್ಟಿದ್ದು 2006ರಲ್ಲಿ. ಚೆನ್ನೈನಲ್ಲಿ ಗುಕೇಶ್ ತನ್ನ ಪೋಷಕರ ಜೊತೆಗೆ ವಾಸವಾಗಿದ್ದಾರೆ. ತೆಲುಗು ಕುಟುಂಬವಾದರೂ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಗುಕೇಶ್ ತಂದೆ ಡಾ. ರಜನೀಕಾತ್ ಇಎನ್‌ಟಿ ಸರ್ಜನ್, ತಾಯಿ ಡಾ. ಪದ್ಮಾ ಮೈಕ್ರೋಬಯೋಲಜಿಸ್ಟ್. ಗುಕೇಶ್ ತನ್ನ 7ನೇ ವಯಸ್ಸಿನಲ್ಲಿ ಚೆಸ್ ಅಭ್ಯಾಸ ಆರಂಭಿಸಿದ್ದಾರೆ. 2013ರಲ್ಲಿ ಗುಕೇಶ್ ವಾರದ ಮೂರು ದಿನ ತಲಾ ಒಂದು ಗಂಟೆಯಂತೆ ಚೆಸ್ ಆಡಲು ಆರಂಭಿಸಿದ್ದರು. ಅಷ್ಟೇ ವೇಗದಲ್ಲಿ ಗುಕೇಶ್ ಚೆಸ್ ಪಟುವಾಗಿ ಹೊರಹೊಮ್ಮಿದರು. ಹೀಗಾಗಿ ಅತೀ ಕಿರಿಯ ವಯಸ್ಸಿನಲ್ಲಿ ಗುಕೇಶ್ ಟೆಸ್ ಟೂರ್ನಮೆಂಟ್‌ಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲತೊಡಗಿದ್ದರು. ಜಯದ ನಗೆ ಬೀರಿದ ಬೆನ್ನಲ್ಲೇ ಕಣ್ಣೀರು ಹಾಕಿದರು. ಗುಕೇಶ್ ಭಾವುಕ ಕ್ಷಣದ ವಿಡಿಯೋ, ಫೋಟೋಗಳು ವೈರಲ್ ಆಗುತ್ತಿವೆ.
ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲ್ಲುತ್ತಿದ್ದಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಈತ ತೆಲುಗು ಹುಡುಗ ನಮ್ಮವ ಎಂದು ಹೇಳಿಕೊಂಡಿರುವುದು ತಮಿಳು ಭಾಷಿಕರ ಕೋಪಕ್ಕೆ ಕಾರಣವಾಗಿದೆ. ಸಾಮಾನ್ಯ ಜನ ಮಾತ್ರವಲ್ಲ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರ ಬಾಬು ನಾಯ್ಡು ಕೂಡ ಡಿ ಗುಕೇಶ್‌ಗೆ ಅಭಿನಂದನೆ ಸಲ್ಲಿಸುವ ಟ್ವೀಟ್‌ನಲ್ಲಿ, ನಮ್ಮ ತೆಲುಗು ಹುಡುಗ ಎಂದು ಕರೆದಿದ್ದಾರೆ. ಇದಕ್ಕೆ ಅನೇಕ ತಮಿಳು ಭಾಷಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಆತ ತಮಿಳು ಹುಡುಗ ಎಂದು ತಿರುಗೇಟು ನೀಡಿದ್ದಾರೆ. ಡಿ ಗುಕೇಶ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ತಮಿಳು ನಾಡು ಸಿಎಂ ಸ್ಟಾಲಿನ್ ಟ್ವೀಟ್ ಮಾಡಿದ್ದು, 18ನೇ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಕ್ಕೆ ಅಭಿನಂದನೆಗಳು, ಮತ್ತೊಬ್ಬ ವಿಶ್ವ ದರ್ಜೆಯ ಚಾಂಪಿಯನ್ ಅನ್ನು ನೀಡುವ ಮೂಲಕ ಚೆನ್ನೈ ಚೆಸ್‌ನ ಜಾಗತಿಕ ರಾಜಧಾನಿಯಾಗಿದೆ. ಇಡೀ ತಮಿಳುನಾಡು ನಿನ್ನ ಸಾಧನೆಗೆ ಹೆಮ್ಮೆ ಪಡುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇನೆ ಇದ್ರು ಗುಕೇಶ್ ದೇಶಕ್ಕಾಗಿ ಆಡಿ, ವಿಶ್ವ ಚಾಂಪಿಯನ್ ಪಟ್ಟ ತಂದಿದ್ದಾರೆ.
ಚೆಸ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪ್ರತೀ ಗೆಲುವಿಗೆ ಬಹುಮಾನ ನೀಡಲಾಗುವುದು. ಅದರಂತೆ ಡಿ. ಗುಕೇಶ್ 11.45 ಕೋಟಿ ರೂ. ಮೊತ್ತವನ್ನು ಗಳಿಸಿದರು. ಡಿಂಗ್ ಲಿರೆನ್‌ಗೆ 9.75 ಕೋಟಿ ರೂ. ಸಿಕ್ಕಿದೆ. ಇಲ್ಲಿ ಪ್ರತೀ ಗೆಲುವಿಗೆ 2 ಲಕ್ಷ ಡಾಲರ್ ಸಿಗುತ್ತೆ. 3 ಗೇಮ್ ಗೆದ್ದ ಗುಕೇಶ್ ಈ ಮೂಲಕ 6 ಲಕ್ಷ ಡಾಲರ್ ಪಡೆದ್ರೆ, ಉಳಿದ 1.5 ಮಿಲಿಯನ್ ಡಾಲರ್ ಬಹುಮಾನ ಮೊತ್ತವನ್ನು ಇಬ್ಬರಿಗೂ ಸಮನಾಗಿ ಹಂಚಲಾಗುತ್ತದೆ. ಭಾರತೀಯ ಚೆಸ್ ತಂಡಕ್ಕೆ ಗುರುವಾಗಿ ಜವಾಬ್ದಾರಿ ಹೊತ್ತುಕೊಂಡಿರುವುದು ವಿಶ್ವನಾಥನ್ ಆನಂದ್ ಗುಕೇಶ್‌ರನ್ನು ರೂಪಿಸಲು ಶ್ರಮಿಸಿದ್ದಾರೆ. ಚೆಸ್ ವಿಶ್ವಕಪ್ ಪ್ರತಿ 2 ವರ್ಷಕ್ಕೊಮ್ಮೆ ನಡೆಯುತ್ತದೆ. ವಿಶ್ವಚಾಂಪಿಯನ್‌ಶಿಪ್ ಕೂಡ 2 ವರ್ಷಕೊಮ್ಮೆ ನಡೆಯುತ್ತದೆ. ವಿಶ್ವಕಪ್‌ನಲ್ಲಿ ಆಡಿದವರು ತಮ್ಮ ಸಾಧನೆಯ ಆಧಾರದ ಮೇಲೆ ಕ್ಯಾಂಡಿಡೇಟ್ಸ್ ಚೆಸ್‌ನಲ್ಲಿ ಆಡಲು ಅರ್ಹತೆ ಪಡೆಯುತ್ತಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ವಿಶ್ವ ಚೆಸ್ ಚಾಂಪಿಯನ್ ಆದ ಗುಕೇಶ್‌ಗೆ ನಮ್ಮ ಸಲಾಂ.