ಬಾಂಗ್ಲಾವನ್ನು ಬಗ್ಗುಬಡಿದ ಸಿಂಹಿಣಿಯರು – ಸತತ ಐದನೇ ಬಾರಿಗೆ ಫೈನಲ್ ಪ್ರವೇಶಿಸಿದ ಭಾರತ ಮಹಿಳಾ ತಂಡ

9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಬಗ್ಗುಬಡಿದಿದೆ. ಈ ಮೂಲಕ ಟೀಮ್ ಇಂಡಿಯಾ ಫೈನಲ್‌ಗೆ ಲಗ್ಗೆಯಿಟ್ಟಿದೆ. ಸತತ 5 ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ ಟೀಮ್ ಇಂಡಿಯಾ.
ಇದನ್ನೂ ಓದಿ: ಗುರುವಿನ ಬದುಕು ಬೆಳಗಿದ ಸೂರ್ಯ – Sky ಬಾಲ್ಯದ ಕೋಚ್ ಕಣ್ಣೀರು..!
ಶುಕ್ರವಾರ ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ಗೆ 80 ರನ್ ಬಾರಿಸಿತು. ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತ 11 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 83 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಚೇಸಿಂಗ್ ಆರಂಭಿಸಿದ ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ 26 ರನ್ (28 ಎಸೆತ, 2 ಬೌಂಡರಿ), ಸ್ಮೃತಿ ಮಂಧಾನ () 55 ರನ್ (39 ಎಸೆತ, 9 ಬೌಂಡರಿ, 1 ಸಿಕ್ಸರ್) ಬಾರಿಸಿ ಅಜೇಯರಾಗುಳಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಬಾಂಗ್ಲಾ ದೇಶದ ವಿರುದ್ಧ ಭಾರತದ ಬೌಲರ್‌ಗಳು ಘಾತುಕ ದಾಳಿ ನಡೆಸಿದರು. ಮಧ್ಯಮವೇಗಿ ರೇಣುಕಾ ಸಿಂಗ್ 4 ಓವರ್‌ಗಳಲ್ಲಿ 1 ಮೇಡಿನ್ ಸಹಿತ ಕೇವಲ 10 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತರು. ಇದೇ ವೇಳೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 50 ವಿಕೆಟ್ಗಳ ಮೈಲುಗಲ್ಲು ತಲುಪಿದರು. ಇದರೊಂದಿಗೆ ರಾಧಾ ಯಾದವ್ 4 ಓವರ್‌ಗಳಲ್ಲಿ 3 ವಿಕೆಟ್ ಕಿತ್ತರೆ, ಪೂಜಾ ವಸ್ತ್ರಕಾರ್ ಹಾಗೂ ದೀಪ್ತಿ ಶರ್ಮಾ ತಲಾ ಒಂದೊಂದು ವಿಕೆಟ್ ಕಿತ್ತರು.
ಬಾಂಗ್ಲಾ ಪರ ನಾಯಕಿ ನಿಗರ್ ಸುಲ್ತಾನಾ 51 ಎಸೆತ ಎದುರಿಸಿ 32 ರನ್, ಶೋರ್ನಾ ಅಖ್ತರ್ 19 ರನ್ ಗಳಿಸಿದ್ರೆ, ಉಳಿದ ಆಟಗಾರರು ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದರು.
2012, 2016, 2018, 2022ರಲ್ಲಿ ಫೈನಲ್ ಪ್ರವೇಶಿಸಿದ್ದ ಭಾರತ 2018 ಹೊರತುಪಡಿಸಿ ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. 2018ರಲ್ಲಿ ಬಾಂಗ್ಲಾ ವಿರುದ್ಧವೇ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಸತತ 5ನೇ ಬಾರಿಗೆ ಫೈನಲ್ ಪ್ರವೇಶಿಸಿರುವ ಭಾರತ ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮುವ ಭರವಸೆ ಮೂಡಿಸಿದೆ.