ಮಣಿಪುರದಲ್ಲಿ ದೇಶವೇ ತಲೆತಗ್ಗಿಸುವ ಪೈಶಾಚಿಕ ಕೃತ್ಯ – ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರ..!
ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದ ಸಮಯದಲ್ಲೇ ಅಮಾನುಷ ಕೃತ್ಯವೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇದು ಇಡೀ ದೇಶವೇ ತಲೆತಗ್ಗಿಸುವ ಕೃತ್ಯ ಎಂದರೂ ತಪ್ಪಾಗಲ್ಲ. ಮಣಿಪುರದ ಕಾಂಗ್ಬೊಕ್ಪಿ ಜಿಲ್ಲೆಯಲ್ಲಿ ಮೇ 4ರಂದು ಪೈಶಾಚಿಕ ಕೃತ್ಯವೊಂದು ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಅಂದು ಘಟನೆ ನಡೆದ ದಿನ 800ಕ್ಕೂ ಹೆಚ್ಚಿನ ಪುರುಷರ ಗುಂಪೊಂದು ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮವೊಂದಕ್ಕೆ ನುಗ್ಗಿದ್ದರು. ಅವರು ಆವತ್ತು ಬರೀ ಆಸ್ತಿ ಪಾಸ್ತಿಗಳನ್ನು ನಾಶ ಮಾಡಿರಲಿಲ್ಲ. ಸಿಕ್ಕ ಸಿಕ್ಕ ಮನೆಗಳನ್ನು ಸುಟ್ಟು ಹಾಕಿದ್ದರು. ಇಷ್ಟಕ್ಕೂ ಅವರು ಸುಮ್ಮನಾಗಿರಲಿಲ್ಲ. ನಂತರ ಅವರೆಲ್ಲಾ ಸೇರಿ ಮಾಡಿದ್ದು ಅಕ್ಷರಶಃ ಅಮಾನವೀಯ, ಪೈಶಾಚಿಕ ಕೃತ್ಯ.
ಇದನ್ನೂ ಓದಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ – ವಿಸ್ತೃತ ವರದಿ ಕೇಳಿದ ಸುಪ್ರೀಂ ಕೋರ್ಟ್
ಆವತ್ತು ಬರೀ ಮನೆಗಳನ್ನು ಸುಟ್ಟುಹಾಕಿದ್ದು ಮಾತ್ರವಲ್ಲ. ಮಹಿಳೆಯರ ಮಾನಭಂಗ ಮಾಡಿದ್ದಾರೆ ನೀಚರು. ಅಷ್ಟೇ ಅಲ್ಲ. 20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಯುವತಿಯನ್ನು ರಕ್ಷಣೆ ಮಾಡಲು ಬಂದ ಸಹೋದರನನ್ನು ಅಲ್ಲಿಯೇ ಕೊಂದು ಹಾಕಿದ್ದಾರೆ. ಇಷ್ಟಕ್ಕೂ ನಿಂತಿಲ್ಲ ಇವರ ವಿಕೃತಿ. ಮೂವರು ಮಹಿಳೆಯರನ್ನು ಬೆತ್ತಲೆ ಮಾಡಿಕೊಂಡು ಪುರುಷರ ಗುಂಪು ಮೆರವಣೆಗೆಯಲ್ಲಿ ಕರೆದುಕೊಂಡು ಬರುತ್ತಾರೆ. ಬೆತ್ತಲೆಯಾಗಿ ರಕ್ಷಣೆಗಾಗಿ ಪಾಪದ ಹೆಣ್ಣು ಮಕ್ಕಳು ಆಕ್ರಂದನ ಮಾಡುತ್ತಿದ್ದರೆ ಅವರ ಖಾಸಗಿ ಭಾಗಗಳನ್ನು ಮುಟ್ಟುತ್ತಾ ವಿಕೃತವಾಗಿ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ನಂತರ ಬೆತ್ತಲೆ ಮೆರವಣಿಗೆಯಲ್ಲಿ ಕರೆದುಕೊಂಡು ಬಂದು ಭತ್ತದ ಗದ್ದೆಗೆ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಇದೀಗ ಮಹಿಳೆಯರ ಬೆತ್ತಲೆ ಮೆರವಣಿಗೆಯ ವಿಡೀಯೋ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಮೈತೇಯ್ ಸಮುದಾಯದ ಪುರುಷರ ಗುಂಪೊಂದು ಕುಕಿ ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ಮಾಡಲು ಭತ್ತದ ಗದ್ದೆಗೆ ಎಳೆದುಕೊಂಡು ಹೋಗುವುದನ್ನು ತೋರಿಸುತ್ತದೆ. ಪುರುಷರ ಗುಂಪು ಮಹಿಳೆಯರನ್ನು ಬೆತ್ತಲಾಗಿಸಿ, ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಲ್ಲದೇ ಅವರಿಗೆ ಕಿರುಕುಳ ನೀಡುತ್ತಿರುವುದು ಕಂಡು ಬಂದಿದೆ. ಮಹಿಳೆಯರು ಅಸಹಾಯಕತೆಯಿಂದ ಅಳುತ್ತಾ ತಮ್ಮನ್ನು ಬಿಡುವಂತೆ ಮನವಿ ಮಾಡಿರುವುದು ಕೂಡಾ ವೀಡಿಯೋದಲ್ಲಿ ಕಂಡುಬಂದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೆರವಣಿಗೆಯ ವೀಡಿಯೋದಲ್ಲಿ ಆರೋಪಿ ಹಸಿರು ಟಿ ಶರ್ಟ್ ಧರಿಸಿದ್ದ. ಇದೇ ವೀಡಿಯೋ ಸಹಾಯದಿಂದ ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.