ಬಸ್ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಮಹಿಳೆಯರ ಪ್ರಯಾಣ – ಹೀಗೆ ಆದರೆ ಹೊಸ ನಿಯಮ ಜಾರಿ ಎಂದು ಸಾರಿಗೆ ಸಚಿವರ ಎಚ್ಚರಿಕೆ..!

ಬಸ್ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಮಹಿಳೆಯರ ಪ್ರಯಾಣ – ಹೀಗೆ ಆದರೆ ಹೊಸ ನಿಯಮ ಜಾರಿ ಎಂದು ಸಾರಿಗೆ ಸಚಿವರ ಎಚ್ಚರಿಕೆ..!

ಸರ್ಕಾರ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಿದ್ದೇನೋ ಸರಿ. ಆದರೆ, ಮಹಿಳೆಯರು ಕೂಡಾ ಉಚಿತ ಅನ್ನೋದನ್ನು ಒಳ್ಳೆಯ ರೀತಿಯಲ್ಲೇ ಬಳಕೆ ಮಾಡಿಕೊಳ್ಳಬೇಕು. ಉಚಿತ ಎಂದುಕೊಂಡು ಬಸ್ ಇರೋದೇ ನಮಗೆ ಅನ್ನೋ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಈಗ ಎದುರಾಗಿದೆ. ಸಾರಿಗೆ ಬಸ್‌ಗಳಲ್ಲಿ ಮಹಿಳೆಯರ ಪ್ರಯಾಣ ದುಪ್ಪಟ್ಟಾಗಿದೆ. ಸದ್ಯಕ್ಕಂತೂ ಬಸ್‌ಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಬಸ್ ಚಾಲಕರು, ನಿರ್ವಾಹಕರಿಗೂ ಮಹಿಳೆಯರನ್ನು ಸಂಭಾಳಿಸುವುದು ತುಂಬಾ ಕಷ್ಟವಾಗಿದೆ. ಜೊತೆಗೆ ಬಸ್ ವೇಗ, ನಿರ್ವಹಣೆಯ ಮೇಲೂ ಪರಿಣಾಮ ಬೀರುತ್ತಿದೆ. ಶಕ್ತಿ ಯೋಜನೆಯಡಿ ಬಸ್ ನಲ್ಲಿ ಶಕ್ತಿ ಮೀರಿ ಮಹಿಳಾ ಪ್ರಯಾಣಿಕರು ತುಂಬಿಕೊಳ್ಳುತ್ತಿರುವುದು ಈಗ ಸರ್ಕಾರಕ್ಕೂ ಹೊಸ ತಲೆನೋವಾಗಿ ಪರಿಣಮಿಸುತ್ತಿದೆ.

ಇದನ್ನೂ ಓದಿ: ಫ್ರೀ ಬಸ್‌ ಟಿಕೆಟ್‌ ಪ್ರಯಾಣಕ್ಕೆ ಹೊಸ ಮಾರ್ಗಸೂಚಿ! – ವಾರಕ್ಕೆ ಮುಂಚೆ ಟಿಕೆಟ್‌ ಬುಕ್ಕಿಂಗ್‌ ಕಡ್ಡಾಯ?

ಸಾರಿಗೆ ನಿಗಮಗಳ ಬಸ್‌ಗಳ ಸಾಮರ್ಥ್ಯಕ್ಕೂ ಮೀರಿ ದುಪ್ಟಟ್ಟು ಪ್ರಯಾಣಿಕರು ಹರಿದು ಬರುತ್ತಿರುವುದರಿಂದ ಅಪಾಯದ ಅಂಚಿನಲ್ಲಿ ಚಾಲಕರು ಬಸ್ ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಕೆಎಸ್ಆರ್‌ಟಿಸಿ, ವಾಯವ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ ಬಸ್‌ಗಳಿಗೆ 55 ಮಂದಿ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವಿದೆ. ಬಿಎಂಟಿಸಿ ಬಸ್‌ಗಳಲ್ಲಿ 40 ಮಂದಿ ಪ್ರಯಾಣಿಕರನ್ನು ಕರೆದೊಯ್ಯುವ ಸಾಮರ್ಥ್ಯವಿದೆ. ಆದರೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆ ಜಾರಿಯಾದ ಬಳಿಕ ಒಂದು ಬಸ್‌ನಲ್ಲಿ 100ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಬಸ್‌ ಚಲಾಯಿಸುವಾಗ ನಿಯಂತ್ರಿಸುವುದು ಭಾರಿ ಕಷ್ಟವಾಗುತ್ತಿದೆ. ಅದರಲ್ಲೂ ಘಟ್ಟ ಪ್ರದೇಶಗಳಲ್ಲಿ ಬಸ್ ಚಲಾಯಿಸುವುದು ತೀವ್ರ ತೊಂದರೆಯಾಗುತ್ತಿದೆ ಎಂದು ಚಾಲಕರು ಆತಂಕ ವ್ಯಕ್ತಪಡಿಸಿದ್ದಾರೆ. ಮಹದೇಶ್ವರ ಬೆಟ್ಟ, ನಂಜನಗೂಡು, ಮೈಸೂರು, ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳ, ನಂದಿ ಸೇರಿದಂತೆ ನಾನಾ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರಯಾಣಿಕರ ದಂಡು ಹೆಚ್ಚುತ್ತಿದೆ.

ಬಸ್‌ನಲ್ಲಿ ಮಿತಿಮೀರಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡುವುದರ ಬಗ್ಗೆ ಗಮನಿಸಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಇನ್ನೊಂದು ವಾರ ಇದನ್ನು ಗಮನಿಸುತ್ತೇನೆ. ಈ ರೀತಿ ನಿಯಮ ಮೀರಿ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ಪ್ರಯಾಣಿಸಿದರೆ, ಹೊಸ ನಿಯಮಗಳನ್ನು ಜಾರಿಗೊಳಿಸಬೇಕಾಗುತ್ತದೆ. ಈ ವಾರದಲ್ಲಿ ಈ ಬಗ್ಗೆ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

suddiyaana