ಯುಎಇಗೆ ಸೋಲುಣಿಸಿ ಭಾರತದ ಸಿಂಹಿಣಿಯರು – ಸೆಮೀಸ್ ಸನಿಹಕ್ಕೆ ಬಂದ ಟೀಮ್ ಇಂಡಿಯಾ
ಮಹಿಳೆಯರ ಟಿ20 ಏಷ್ಯಾಕಪ್ನ 5ನೇ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಭರ್ಜರಿ ಗೆಲುವು ಸಾಧಿಸಿದೆ. ರಿಚಾ ಘೋಷ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಭರ್ಜರಿ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ ಯುಎಇ ವಿರುದ್ಧ ಟೀಮ್ ಇಂಡಿಯಾ 78 ರನ್‌ಗಳ ಗೆದ್ದು ಬೀಗಿದೆ. ಈ ಮೂಲಕ ಸೆಮಿಫೈನಲ್‌ಗೆ ಇನ್ನಷ್ಟು ಹತ್ತಿರವಾಗಿದೆ.
ಇದನ್ನೂ ಓದಿ: ಒಲಿಂಪಿಕ್ಸ್ ಗೆ 5 ರಿಂಗ್ ಗಳು ಯಾಕೆ? – ಒಲಿಂಪಿಕ್ಸ್ ಚಿಹ್ನೆಯ ಅರ್ಥವೇನು?
ಶ್ರೀಲಂಕಾದ ರಣಗಿರಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಭರ್ಜರಿ 201 ರನ್ ಗಳಿಸಿತ್ತು. ಇದು ಭಾರತ ಮಹಿಳೆಯರ ಕ್ರಿಕೆಟ್ ತಂಡದ ಇದುವರೆಗಿನ ಗರಿಷ್ಠ ಸ್ಕೋರ್ ಸಹ ಆಗಿದೆ. 202 ರನ್‌ಗಳ ಬೃಹತ್ ಮೊತ್ತದ ಗುರಿ ಪಡೆದ ಯುಎಇ ನಿಗದಿತ ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಆರಂಭದಲ್ಲಿ ವಿಕೆಟ್ ಕಳೆದುಕೊಂಡರೂ, ಮತ್ತೊಂದೆಡೆ ಬ್ಯಾಟರ್‌ಗಳ ಬಲದಿಂದ ರನ್ ಪೇರಿಸುತ್ತಾ ಸಾಗಿತ್ತು. ಕೊನೇ 2 ಓವರ್‌ಗಳಲ್ಲಿ ರಿಚಾ ಘೋಷ್ ಹಾಗೂ ಹರ್ಮನ್ ಪ್ರೀತ್ ತಮ್ಮ ಸ್ಫೋಟಕ ಪ್ರದರ್ಶನದಿಂದ 37 ರನ್ ಕಲೆಹಾಕುವ ಮೂಲಕ 200 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಭಾರತದ ಪರ ರಿಷಾ ಘೋಷ್ 64 ರನ್ (29 ಎಸೆತ, 1 ಸಿಕ್ಸರ್, 12 ಬೌಂಡರಿ), ಹರ್ಮನ್ ಪ್ರೀತ್ ಕೌರ್ 66 ರನ್ (47 ಎಸೆತ, 1 ಸಿಕ್ಸರ್, 7 ಬೌಂಡರಿ), ಶಫಾಲಿ ವರ್ಮಾ 37 ರನ್, ಸ್ಮೃತಿ ಮಂಧಾನ 13 ರನ್, ದಯಾಳನ್ ಹೇಮಲತಾ 2 ರನ್, ಜೆಮಿಮಾ ರೊಡ್ರಿಗ್ಸ್ 14 ರನ್ ಗಳಿಸಿ ಮಿಂಚಿದರು.
ಬೃಹತ್ ಮೊತ್ತದ ಚೇಸಿಂಗ್ ಆರಂಭಿಸಿದ ಯುಎಇ ಪರ ಇಶಾ ಓಜಾ 38 ರನ್, ಕವಿಶ ಈಗೋಡಗೆ 40 ಗಳಿಸಿದರೆ, ಉಳಿದ ಆಟಗಾರರು ಅಲ್ಪಮೊತ್ತಕ್ಕೆ ಔಟಾದರು.
ದೊಡ್ಡ ಮೊತ್ತ ಬೆನ್ನಟ್ಟಲು ಮುಂದಾದ ಯುಎಇ ತಂಡವೂ ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಆದರೆ, ಭಾರತೀಯ ಬೌಲರ್ಗಳು ಅದಕ್ಕೆ ಸೊಪ್ಪು ಹಾಕಲಿಲ್ಲ. ಪವರ್ ಪ್ಲೇನಲ್ಲೇ ಎದುರಾಳಿ ಬೌಲರ್‌ಗಳನ್ನು ಯಶಸ್ವಿಯಾಗಿ ಕಟ್ಟಿಹಾಕಿದರು. ದೀಪ್ರಿ ಶರ್ಮಾ 2 ವಿಕೆಟ್ ಕಿತ್ತರೆ, ರೇಣುಕಾ ಸಿಂಗ್, ತನುಜಾ ಕನ್ವರ್, ಪೂಜಾ ವಸ್ತ್ರಕಾರ್, ರಾಧಾ ಯಾದವ್ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.
ಎ ಗುಂಪಿನಲ್ಲಿರುವ ಭಾರತ ತಂಡ ತನ್ನ ಮುಂದಿನ ಪಂದ್ಯದಲ್ಲಿ ನೇಪಾಳ ತಂಡವನ್ನು ಎದುರಿಸಲಿದೆ. ಈಗಾಗಲೇ ಎರಡು ಪಂದ್ಯ ಗೆದ್ದಿರುವ ಕಾರಣ ಭಾರತ ಬಹುತೇಕ ಸೆಮಿಫೈನಲ್ ತಲುಪಿದೆ. ಮುಂದಿನ ಪಂದ್ಯ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್‌ಗೆ ಪ್ರವೇಶಿಸಲಿದೆ.