ಆಲ್ದೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ – ಇಬ್ಬರಿಗೆ ಗಂಭೀರ ಗಾಯ.. ಇನ್ನೆಷ್ಟು ಬಲಿ ಬೇಕು ಎಂದು ಸ್ಥಳೀಯರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು..!

ಆಲ್ದೂರಿನಲ್ಲಿ ಕಾಡಾನೆ ದಾಳಿಗೆ ಮಹಿಳೆ ಬಲಿ – ಇಬ್ಬರಿಗೆ ಗಂಭೀರ ಗಾಯ.. ಇನ್ನೆಷ್ಟು ಬಲಿ ಬೇಕು ಎಂದು ಸ್ಥಳೀಯರ ಪ್ರಶ್ನೆಗೆ ಅಧಿಕಾರಿಗಳು ತಬ್ಬಿಬ್ಬು..!

ಕಾಡಾನೆದಾಳಿಯಿಂದ ಸಮಸ್ಯೆಯಾಗುತ್ತಿದೆ ಎಂದು ಆ ಭಾಗದ ಶಾಸಕರು ಕೂಡಾ ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದರು. ಆದರೆ, ಸಮಸ್ಯೆ ಪರಿಹಾರ ಮಾತ್ರ ಆಗಿಲ್ಲ. ಅದರ ಮಧ್ಯೆ ಕಳೆದ ಒಂದು ತಿಂಗಳಿನಿಂದ ಜನ ಆನೆ ದಾಳಿಯಿಂದ ಬೇಸತ್ತು ಹೋಗಿದ್ದರು. ನಮ್ಮನ್ನು ಕಾಪಾಡಿ ಎಂದು ಅರಣ್ಯಇಲಾಖೆಗೆ ಮೊರೆಯಿಟ್ಟಿದ್ದರು. ಆದರೆ, ಅನಾಹುತ ಆಗುವುದನ್ನು ಯಾರಿಗೂ ತಪ್ಪಿಸಲು ಆಗಲೇ ಇಲ್ಲ. ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.

ಇದನ್ನೂ ಓದಿ: ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು

ಬುಧವಾರ ಬೆಳಿಗ್ಗೆ ಮೀನಾ ತೋಟಕ್ಕೆ ತೆರಳುತ್ತಿದ್ದರು. ಜೊತೆಯಲ್ಲಿ ಬೇರೆ ಕಾರ್ಮಿಕರು ಕೂಡಾ ಇದ್ದರು. ಆದರೆ, ಅದೆಲ್ಲಿ ಅಡಗಿತ್ತೋ ಆ ಒಂಟಿ ಸಲಗ. ಪಾಪದ ಮಹಿಳೆ ಮೀನಾಳ ಮೇಲೆ ದಾಳಿ ಮಾಡಿದೆ. ಕಾಡಾನೆ ತುಳಿತದಿಂದ ಮೀನಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. 45 ವರ್ಷದ ಮೀನಾ ಮೃತ ಕಾರ್ಮಿಕ ಮಹಿಳೆ. ಇನ್ನೂ ಇಬ್ಬರು ಕಾರ್ಮಿಕರಿಗೆ ಗಂಭೀರ ಗಾಯಗಳಾಗಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ದೂರು ವಲಯ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳೆದ ಒಂದು ತಿಂಗಳಿನಿಂದ ಅಲ್ದೂರು ಅರೇನೂರು, ಹೆಡದಾಳು ಗ್ರಾಮಗಳಲ್ಲಿ ಸಂಚಾರ ಮಾಡುತ್ತಿದ್ದ ಏಳು ಕಾಡಾನೆಗಳ ಹಿಂಡಿನಿಂದ ಒಂಟಿ ಸಲಗ ಬೇರ್ಪಟ್ಟಿದೆ. ಈ ಕಾಡಾನೆಯನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒಂದು ತಿಂಗಳಿನಿಂದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸುತ್ತಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರಮ ಕೈಗೊಂಡಿಲ್ಲ.

ಘಟನೆ ನಡೆದ ಸ್ಥಳದಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಘಟನೆ ನಡೆದ ಸ್ಥಳದಿಂದ ಮೃತ ದೇಹ ತೆಗೆಯದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಅವರಿಗೆ ತರಾಟೆಗೆ ತೆಗೆದುಕೊಂಡರು. ಮೂಡಿಗೆರೆಗೆ ಬರುವ ಸಿ.ಎಂ ಸಿದ್ದರಾಮಯ್ಯ ಅವರನ್ನು ಘಟನ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಿದ್ದಾರೆ. ಸಿ.ಎಂ ಬರುವವರೆಗೂ ಮೃತ ದೇಹ ತೆಗೆಯುವುದಿಲ್ಲ. ಇಷ್ಟು ದಿನವಾದರೂ ಏನು ಕ್ರಮ ತೆಗೆದುಕೊಂಡಿದ್ದೀರಾ?  ಎಂದು ಪ್ರಶ್ನಿಸಿದ್ದಾರೆ.

ಕಾಡಾನೆ ಹಿಂಡು ಲಕ್ಷಾಂತರ ಮೌಲ್ಯದ ಕಾಫಿ ಅಡಿಕೆ, ತೆಂಗು ಬಾಳೆ ನಾಶ ಮಾಡಿದೆ. ಈ ಹಿಂಡಿನಿಂದ ಬೇರ್ಪಟ್ಟ ಒಂಟಿ ಸಲಗ ಒಂದು ತಿಂಗಳ ಹಿಂದೆ ಅರೇನೂರು ಗ್ರಾಮದ ಕಾರ್ಮಿಕನ ಮೇಲೆ ದಾಳಿ ಮಾಡಿತ್ತು. ಕಾಡಾನೆ ಸಂಚಾರ ಮಾಡುತ್ತಿರುವ ಕುರಿತು ಮತ್ತು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಸಿಬ್ಬಂದಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಆದರೂ ಕೂಡ ಕ್ರಮಕೈಗೊಳ್ಳದ ಅಲ್ದೂರು ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sulekha