ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು

ತವರು ಮನೆಗೆ ಬಂದಿದ್ದ ಮಗಳು ಕಾಡಾನೆ ದಾಳಿಗೆ ಬಲಿ – ಈ ಸಾವು ನ್ಯಾಯವೇ ಎಂದು ಕೇಳುತ್ತಿದ್ದಾರೆ ಗ್ರಾಮಸ್ಥರು

ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ದಾಳಿ ಪದೇ ಪದೇ ಆಗುತ್ತಿದೆ. ಈ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಕೂಡಾ ಹೇಳುತ್ತಲೇ ಇದ್ದಾರೆ. ಆನೆ ದಾಳಿ ತಪ್ಪಿಸಲು ಶಾಶ್ವತವಾಗಿ ಬೇಲಿ ಮಾಡಬೇಕು ಎಂದು ಈ ಭಾಗದ ಶಾಸಕರು ಹೇಳಿದ್ದೇ ಬಂತು. ಆದರೆ, ಕಾಡಾನೆಗಳು ಬರುವುದು ನಿಲ್ಲಿಸುವುದಿಲ್ಲ. ಜನರ ಪ್ರಾಣ ಹೋಗುವುದನ್ನು ತಪ್ಪಿಸಲು ಕೂಡಾ ಆಗುತ್ತಿಲ್ಲ. ಈಗ ಹಾಸನ ಜಿಲ್ಲೆಯ ವಡೂರು ಗ್ರಾಮದ ಮಹಿಳೆ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಗಂಡನ ಮನೆಯಿಂದ ತವರು ಮನೆಗೆ ಬಂದ ಮಗಳು ಆನೆಗೆ ಬಲಿಯಾಗಿದ್ದು ನೋಡಿ ಕುಟುಂಬದವರ ಆಕ್ರಂದನ ಹೇಳತೀರದಾಗಿದೆ.

ಇದನ್ನೂ ಓದಿ: ಇಬ್ಬರನ್ನು ಬಲಿ ಪಡೆದ ಕಾಡಾನೆ ಕೊನೆಗೂ ಸೆರೆ – ಕೋಪದ ಭರದಲ್ಲಿ ಗುದ್ದಿದ ಗಜರಾಜನ ದಂತವೇ ಕಟ್..!

ಹಾಸನ ತಾಲೂಕಿನ ವಡೂರು ಗ್ರಾಮದ ನಿವಾಸಿ 37 ವರ್ಷದ ಮಹಿಳೆ ಕವಿತಾ, ಗುರುವಾರವಷ್ಟೇ ಗಂಡನ ಮನೆಯಿಂದ ತಾಯಿ ಮನೆಗೆ ಬಂದಿದ್ದರು. ಶುಕ್ರವಾರ ಬೆಳಗ್ಗೆ ಮನೆಯ ಹಿಂಭಾಗದಲ್ಲಿರುವ ತೋಟಕ್ಕೆ ತೆರಳಿದ್ದರು. ಈ ವೇಳೆ ಅದೆಲ್ಲಿಂದ ಪ್ರತ್ಯಕ್ಷವಾಗಿತ್ತೋ ಒಂಟಿ ಸಲಗ. ಕವಿತಾರನ್ನು ನೋಡುತ್ತಿದ್ದಂತೆ ಸೀದಾ ದಾಳಿಗೆ ಮುಂದಾಗಿದೆ. ಪಾಪ ಒಂಟಿ ಹೆಣ್ಣು. ಗಜರಾಜನ ಆರ್ಭಟಕ್ಕೆ ಹೆದರಿ ಹೋಗಿದ್ದಾರೆ. ಏಕಾಏಕಿ ಕಾಡಾನೆ ದಾಳಿ ಮಾಡುತ್ತಿದ್ದಂತೆ ಕವಿತಾ ಪ್ರಜ್ಞೆ ತಪ್ಪಿದ್ದಾರೆ. ಜೊತೆಗೆ ಆನೆ ಕೂಡಾ ಗಂಭೀರವಾಗಿ ದಾಳಿ ಮಾಡಿತ್ತು. ಪ್ರಜ್ಞಾಹೀನರಾಗಿ ಬಿದ್ದಿದ್ದ ಕವಿತಾರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ, ಕವಿತಾ ಬದುಕಲೇ ಇಲ್ಲ.

ಆಗಸ್ಟ್ 14 ರಂದು ಹಾಸನ ಜಿಲ್ಲೆಯಲ್ಲಿ ಬೈಕ್ ಸವಾರನ ಮೇಲೆ ಒಂಟಿ ಸಲಗ ದಾಳಿ ಮಾಡಿತ್ತು. ರಾತ್ರಿ ಸಕಲೇಶಪುರ ತಾಲ್ಲೂಕಿನ, ಕಿರೇಹಳ್ಳಿ ಗ್ರಾಮದ ಬಳಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಚೇತನ್ ಎಂಬಾತನ ಮೇಲೆ ಕಾಡಾನೆ ದಾಳಿ ಮಾಡಿ, ಬೈಕ್‌ನ್ನು ಪುಡಿ ಪುಡಿ ಮಾಡಿತ್ತು. ಅದೃಷ್ಟವಶಾತ್ ಸವಾರ ಚೇತನ್ ಆನೆ ದಾಳಿಯಿಂದ ತಪ್ಪಿಸಿಕೊಂಡಿದ್ದ. ಇದರ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ತಾಲೂಕಿನ ವಡೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಕವಿತಾ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

suddiyaana