ಜೀಸಸ್ ಹೇಳಿದ್ದಾರೆ ವಿಮಾನದ ಬಾಗಿಲು ತೆರೆಯಿರಿ – ಮಹಿಳೆಯ ವರ್ತನೆಗೆ ಎಮರ್ಜೆನ್ಸಿ ಲ್ಯಾಂಡಿಂಗ್

ಜೀಸಸ್ ಹೇಳಿದ್ದಾರೆ ವಿಮಾನದ ಬಾಗಿಲು ತೆರೆಯಿರಿ – ಮಹಿಳೆಯ ವರ್ತನೆಗೆ ಎಮರ್ಜೆನ್ಸಿ ಲ್ಯಾಂಡಿಂಗ್

ಅಮೆರಿಕದ ಹ್ಯೂಸ್ಟನ್‌ನಿಂದ ಓಹಿಯೋಗೆ ತೆರಳುತ್ತಿದ್ದ ವಿಮಾನದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು 37,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗ ಜೀಸಸ್ ಆದೇಶ ಮಾಡಿದ್ದಾರೆಂದು ವಿಮಾನದ ಬಾಗಿಲು ತೆರೆಯಲು ಪ್ರಯತ್ನಿಸಿ ರಂಪಾಟ ಮಾಡಿದ್ದಾಳೆ. ಮಹಿಳೆಯ ವಿಲಕ್ಷಣ ವರ್ತನೆ ಕಂಡು ವಿಮಾನದ ಸಿಬ್ಬಂದಿ ಕಂಗಾಲಾಗಿದ್ದಾರೆ.

ಮಹಿಳೆಯ ವಿಲಕ್ಷಣ ವರ್ತನೆ ಕಂಡು ಪೈಲಟ್‌ಗಳು ಕೂಡಲೇ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಲೋಹದ ಹಕ್ಕಿ ಇಳಿಯುತ್ತಿದ್ದಂತೆಯೇ ವಿಮಾನದ ಸಿಬ್ಬಂದಿ ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ರಂಪಾಟ ನಡೆಸಿದ ಮಹಿಳೆಯನ್ನು 34 ವರ್ಷದ ಎಲೋಮ್ ಆಗ್ಬೆಗ್ನಿನೊವ್ ಎಂದು ಗುರುತಿಸಲಾಗಿದೆ. ವಿಮಾನ ಸುಮಾರು 37,000 ಅಡಿ ಎತ್ತರದಲ್ಲಿ ಹಾರುತ್ತಿದ್ದಾಗ, ಇದ್ದಕ್ಕಿದ್ದಂತೆ ಸೀಟಿನಿಂದ ಎದ್ದ ಆಕೆ ಬಾಗಿಲಿನ ಕಡೆಗೆ ನುಗ್ಗಿದ್ದಳು. ಆಕೆಗೆ ಅಡ್ಡ ಬಂದಿದ್ದ ವಿಮಾನದ ಸಹಾಯಕಿಯನ್ನು ದೂರಕ್ಕೆ ತಳ್ಳಿದ್ದ ಮಹಿಳೆ, ಪಕ್ಕದ ಬಾಗಿಲನ್ನು ತೆರೆಯಲು ಹತಾಶೆಯ ಪ್ರಯತ್ನ ನಡೆಸಿದ್ದಳು. ಅದೃಷ್ಟವಶಾತ್, ಪ್ರಯಾಣಿಕರೊಬ್ಬರು ಆಕೆಯನ್ನು ತಡೆದಿದ್ದಾರೆ.

ಇದನ್ನೂ ಓದಿ: ಮಾನವನ ಮೆದುಳಿಗೆ ಚಿಪ್! – ಅಂಧರ ಪಾಲಿಗೆ ಆಶಾಕಿರಣವಾಗಲಿದ್ಯಾ ಎಲಾನ್ ಮಸ್ಕ್ ಹೊಸ ಪ್ರಾಜೆಕ್ಟ್

ಟೆಕ್ಸಾಸ್‌ನ ಹ್ಯೂಸ್ಟನ್‌ನಿಂದ ಓಹಿಯೋದ ಕೊಲಂಬಸ್ ಕಡೆ ಪ್ರಯಾಣಿಸುತ್ತಿದ್ದ ಸೌತ್‌ವೆಸ್ಟ್ ವಿಮಾನ 192ರಲ್ಲಿ ಈ ಘಟನೆ ನಡೆದಿದೆ. ಕೊಲಂಬಸ್ ತಲುಪಲು ಇನ್ನೂ ಸಾಕಷ್ಟು ದೂರ ಕ್ರಮಿಸಬೇಕಿದ್ದರಿಂದ ಪೈಲಟ್, ಅರ್ಕನ್ಸಾಸ್‌ನಲ್ಲಿನ ಬಿಲ್ ಆಂಡ್ ಹಿಲರಿ ಕ್ಲಿಂಟನ್ ರಾಷ್ಟ್ರೀಯ ವಿಮಾನ ನಿಲ್ದಾಣದತ್ತ ವಿಮಾನವನ್ನು ತಿರುಗಿಸಿ ಅಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದಾರೆ. ಬಳಿಕ ಪೊಲೀಸರಿಗೆ ಆಕೆಯನ್ನು ಒಪ್ಪಿಸಲಾಗಿದೆ.

ಅರ್ಕನ್ಸಾಸ್‌ನ ಪೂರ್ವ ಜಿಲ್ಲಾ ನ್ಯಾಯಾಲಯದ ಮುಂದೆ ಮಹಿಳೆಯನ್ನು ಹಾಜರುಪಡಿಸಲಾಗಿದೆ. ತನಗೆ ಓಹಿಯೋಗೆ ಪ್ರಯಾಣಿಸುವಂತೆ ಜೀಸಸ್ ಹೇಳಿದ್ದು, ವಿಮಾನದ ಬಾಗಿಲನ್ನು ತೆರೆಯುವಂತೆ ಕೂಡ ಜೀಸಸ್ ಹೇಳಿದ್ದಾರೆ ಎಂದು ಆಕೆ ಪದೇ ಪದೇ ಹೇಳಿದ್ದಾಗಿ ಕೋರ್ಟ್ ದಾಖಲೆಗಳು ತಿಳಿಸಿವೆ.

ವಿಮಾನದಲ್ಲಿ ತನ್ನ ತಲೆಯನ್ನು ಜಜ್ಜಿಕೊಳ್ಳುತ್ತಿದ್ದ ಆಕೆ, “ನನಗೆ ಓಹಿಯೋಗೆ ಹೋಗುವಂತೆ ಜೀಸಸ್ ಹೇಳಿದ್ದಾರೆ. ವಿಮಾನದ ಬಾಗಿಲು ತೆರೆಯುವಂತೆ ಜೀಸಸ್ ಹೇಳಿದ್ದಾರೆ” ಎಂದು ಕಿರುಚಿದ್ದಳು. ಕೊನೆಗೂ ಆಕೆಗಿಂತ ಬಲಶಾಲಿಯಾಗಿದ್ದ ಪ್ರಯಾಣಿಕರೊಬ್ಬರು ಮಹಿಳೆಯನ್ನು ಎಳೆದು ವಿಮಾನದ ನೆಲದ ಮೇಲೆ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು.

ಸೀಟಿನಿಂದ ಎದ್ದು ಹಿಂದಿನ ಬಾಗಿಲಿನತ್ತ ನಡೆದಿದ್ದ ಆಕೆ, ಎಕ್ಸಿಟ್ ಡೋರ್ ಕಡೆ ದಿಟ್ಟಿಸುತ್ತಾ ನಿಂತಿದ್ದಳು. ಅಗತ್ಯವಿದ್ದರೆ ಶೌಚಾಲಯ ಬಳಸಿ, ಇಲ್ಲವೇ ಹೋಗಿ ಕುಳಿತುಕೊಳ್ಳಿ ಎಂದು ವಿಮಾನದ ಸಿಬ್ಬಂದಿ ಹೇಳಿದರೂ ಅದಕ್ಕೆ ಕಿವಿಗೊಡದೆ ಕಿಟಕಿ ಕಡೆಗೇ ನೋಡುತ್ತಿದ್ದಳು. ಸ್ವಲ್ಪ ಹೊತ್ತಿನ ಬಳಿಕ ಸಿಬ್ಬಂದಿಯನ್ನು ದೂರಕ್ಕೆ ತಳ್ಳಿದ ಆಕೆ ಎಕ್ಸಿಟ್ ಡೋರ್ ತೆಗೆಯಲು ಪ್ರಯತ್ನಿಸಿದ್ದಾಳೆ. ಆಕೆಯನ್ನು ಎಳೆದು ಹಾಕಲು ಹೋಗಿದ್ದ ಪ್ರಯಾಣಿಕನ ತೋಳಿಗೆ ಬಲವಾಗಿ ಕಚ್ಚಿದ್ದಾಳೆ.

ಬಂಧನದ ಬಳಿಕ ವಿಚಾರಣೆ ನಡೆಸಿದ ಪೊಲೀಸರಿಗೆ ಆಕೆ, ಪಾಸ್ಟರ್ ಒಬ್ಬರನ್ನು ಭೇಟಿ ಮಾಡಲು ಮೆರಿಲ್ಯಾಂಡ್‌ಗೆ ಪ್ರಯಾಣಿಸುತ್ತಿದ್ದುದ್ದಾಗಿ ತಿಳಿಸಿದ್ದಾಳೆ. ಆಸಕ್ತಿಕರವೆಂದರೆ ಆಕೆ ಬಳಿ ಯಾವುದೇ ಲಗೇಜ್ ಇರಲಿಲ್ಲ.

suddiyaana