ಶಸ್ತ್ರ ಚಿಕಿತ್ಸೆಯಲ್ಲಿ 90 % ನಾಲಿಗೆ ಕಳೆದುಕೊಂಡರೂ ಎಲ್ಲರಂತೆ ಮಾತನಾಡಿದ ಮಹಿಳೆ!
ಮಾತಿಗೆ ನಾಲಿಗೆಯೇ ಮೂಲ. ನಾಲಿಗೆಗೆ ಸಣ್ಣ ಗಾಯ ಆದ್ರೂ ನೋವಿನಲ್ಲಿ ಮಾತನಾಡಲು ಕಷ್ಟವಾಗುತ್ತೆ. ಗಾಯ ವಾಸಿ ಆಗುವವರೆಗೂ ತೊದಲುತ್ತಾ ಮಾತನಾಡುತ್ತಿರುತ್ತೇವೆ. ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ನಾಲಿಗೆಯ ಬಹುತೇಕ ಭಾಗ ಕಳೆದುಕೊಂಡ್ರು ಎಲ್ಲರಂತೆ ಮಾತನಾಡಿದ್ದಾಳೆ.
ಹೌದು, ಲಂಡನ್ ನಿವಾಸಿ 37 ವರ್ಷದ ಗೆಮ್ಮಾ ವೀಕ್ಸ್ ಎಂಬಾಕೆ ಕ್ಯಾನ್ಸರ್ ನಿಂದ 90% ರಷ್ಟು ತನ್ನ ನಾಲಿಗೆಯನ್ನು ಕಳೆದುಕೊಂಡಿದ್ದರು. ಆದರೂ ಕೂಡ ಆಕೆ ಎಲ್ಲರಂತೆ ಮಾತನಾಡಿ ಅಚ್ಚರಿಗೆ ಕಾರಣವಾಗಿದ್ದಾಳೆ.
ಇದನ್ನೂ ಓದಿ: ಹುಷಾರಿಲ್ಲ ಅಂತಾ ಕೆಲಸಕ್ಕೆ ರಜೆ ಹಾಕುವಂತಿಲ್ಲ – ನಿಮ್ಮ ಧ್ವನಿಯಿಂದಲೇ ಬಯಲಾಗುತ್ತೆ ಸತ್ಯ.. ಹೇಗೆ ಗೊತ್ತಾ?
ಗೆಮ್ಮಾ ವೀಕ್ಸ್ ಗೆ ಕಳೆದ 6 ವರ್ಷಗಳಿಂದ ನಾಲಿಗೆಯಲ್ಲಿ ಸಮಸ್ಯೆಯೊಂದು ಕಾಣಿಸಿಕೊಂಡಿದೆ. ಮೊದಲು ನಾಲಿಗೆಯಲ್ಲಿ ಸಣ್ಣ ತೂತು ಕಾಣಿಸಿಕೊಂಡಿದ್ದು, ಬಳಿಕ ಅದು ದೊಡ್ಡದಾಗಿ ನಾಲಿಗೆಯಲ್ಲಿನ ನೋವು ಹೆಚ್ಚಾಗಿದೆ. ಇದರಿಂದಾಗಿ ಆಕೆಗೆ ಯಾವುದೇ ಆಹಾರ ಕೂಡ ಸೇವಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಗೆಮ್ಮಾ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿದ್ದಾಳೆ. ಈ ವೇಳೆ ಗೆಮ್ಮಾಗೆ ಬಾಯಿ ಮತ್ತು ಕತ್ತಿನ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿಸಬೇಕು. ನಿಮ್ಮ 90% ನಾಲಿಗೆಯನ್ನು ತೆಗೆಯಬೇಕಾಗುತ್ತದೆ. ಆ ಬಳಿಕ ಎಂದೂ ಮಾತನಾಡಲು ಆಗದೇ ಇರಬಹುದೆಂದು ವೈದ್ಯರು ಹೇಳಿದ್ದಾರೆ.
ಅಂದುಕೊಂಡಂತೆ ಮಾರ್ಚ್ 6 ರಂದು ಕೇಂಬ್ರಿಜ್‌ನಲ್ಲಿರುವ ಅಡೆನ್‌ಬ್ರೂಕ್ಸ್ ಆಸ್ಪತ್ರೆಯ ವೈದ್ಯರು ಗೆಮ್ಮಾ ಅವರ ಶಸ್ತ್ರ ಚಿಕಿತ್ಸೆಯ ಮೂಲಕ ಶೇ. 90 ರಷ್ಟು ನಾಲಿಗೆಯನ್ನು ತೆಗೆದಿದ್ದಾರೆ. ಬಳಿಕ ಆಕೆಯ ತೋಳಿನ ಮಾಂಸ ತೆಗೆದು ನಾಲಿಗೆಗೆ ಜೋಡಿಸಿದ್ದಾರೆ.
ಶಸ್ತ್ರ ಚಿಕಿತ್ಸೆ ಬಳಿಕ ಗೆಮ್ಮಾ ಮತ್ತೆ ಮಾತನಾಡುವುದು ಕಷ್ಟ ಎಂದು ಹೇಳಿದ್ದ ವೈದ್ಯರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಗೆಮ್ಮಾ ಶಸ್ತ್ರ ಚಿಕಿತ್ಸೆ ಬಳಿಕ ಎಲ್ಲರಂತೆ ಮಾತನಾಡಿದ್ದಾಳೆ. ಗೆಮ್ಮಾಳ ಪ್ರಿಯಕರ ಹಾಗೂ ಆಕೆಯ ಮಗಳು ಆಸ್ಪತ್ರೆಗೆ ಭೇಟಿ ನೀಡಿದ್ದು, ಈ ವೇಳೆ ಅವರನ್ನು ನೋಡಿ ಗೆಮ್ಮಾ ʼಹೆಲೋʼ ಎಂದು ಹೇಳಿದ್ದಾಳೆ.
ಶಸ್ತ್ರ ಚಿಕಿತ್ಸೆ ಬಳಿಕ ಆರಂಭದಲ್ಲಿ ನನಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯರು ಕೂಡ ಇನ್ನು ಮಾತನಾಡಲು ಸಾಧ್ಯ ಆಗುವುದಿಲ್ಲ ಅಂತಾ ಹೇಳಿದ್ದರು. ಆದರೆ ನನ್ನ ಮಗಳು ನನ್ನನ್ನು ನೋಡಲು ಆಸ್ಪತ್ರೆಗೆ ಬಂದಾಗ ಮೊದಲ ಬಾರಿಗೆ ಹಲೋ ಅಂತಾ ಮಾತನಾಡಿದೆ ಅಂತಾ ಮಾಧ್ಯಮಗಳಿಗೆ ಹೇಳಿದ್ದಾರೆ.