ರೈಲ್ವೆ ಹಳಿ ಮೇಲೆ ಬಿದ್ದ ಮರ : ವೃದ್ದೆಯ ಸಮಯ ಪ್ರಜ್ಞೆ -ಮುಂದೇನಾಯ್ತು ಗೊತ್ತಾ?
ರೈಲು ಬರುವ ವೇಳೆ ಯಾವುದಾದರೂ ಅನಾಹುತ ಸಂಭವಿಸುವ ಸಾಧ್ಯತೆ ಇದ್ದಾಗ ಕೈಯಲ್ಲಿ ಕೆಂಪು ಬಟ್ಟೆ ಹಿಡಿದು ರೈಲು ನಿಲ್ಲಿಸಬೇಕು ಅಂತಾ ನಾವು ಕೇಳಿದ್ದೇವೆ. ಇನ್ನೂ ರೈಲಿನ ಹಳಿ ತಪ್ಪಿದ್ದರೆ ಅದನ್ನು ಕಂಡು ಓಡೋಡಿ ಬಂದು ರೈಲು ನಿಲ್ಲಿಸೋದನ್ನು ಸೀರಿಯಲ್, ಸಿನಿಮಾಗಳಲ್ಲಿ ನೋಡಿರುತ್ತೇವೆ. ಇದೀಗ ರೈಲ್ವೆ ಹಳಿಗೆ ಮರ ಬಿದ್ದಿದ್ದನ್ನ ಕಂಡ ವೃದ್ದೆಯೊಬ್ಬರು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ರೈಲು ಅವಘಡ ತಪ್ಪಿಸಲು ಕೈಯಲ್ಲಿ ಕೆಂಪು ವಸ್ತ್ರ ಹಿಡಿದು ರೈಲಿನ ಮುಂದೆ ವೃದ್ದೆ ಸಾಹಸ ತೋರಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಗುಡುಗು ಸಹಿತ ಧಾರಾಕಾರ ಮಳೆ
ಮಂಗಳೂರು ಹೊರವಲಯದ ಪಚ್ಚನಾಡಿ ಸಮೀಪದ ಮಂದಾರ ಬಳಿ ಈ ಘಟನೆ ನಡೆದಿದೆ. 70 ವರ್ಷ ವಯಸ್ಸಿನ ಚಂದ್ರಾವತಿ ರೈಲು ಹಳಿ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ್ದರು. ಅದೇ ವೇಳೆ ಮಂಗಳೂರು-ಮುಂಬೈ ಮತ್ಸ್ಯಗಂಧ ರೈಲು ಬರುತ್ತಿರುವುದನ್ನು ಗಮನಿಸಿದ್ದಾರೆ. ಸ್ವಲ್ಪ ತಡ ಮಾಡಿದರೂ ದೊಡ್ಡ ಅವಘಡ ಸಂಭವಿಸುತ್ತದೆ ಅನ್ನೋದನ್ನು ಅರಿತ ಚಂದ್ರಾವತಿ ತಕ್ಷಣ ಮನೆಗೆ ಓಡಿ ಹೋಗಿ ಕೆಂಪು ಬಟ್ಟೆಯೊಂದನ್ನು ತಂದು ರೈಲಿನ ಮುಂದೆ ಹಿಡಿದಿದ್ದಾರೆ. ಲೋಕೋಪೈಲೆಟ್ ಅಪಾಯ ಅರಿತು ತಕ್ಷಣ ರೈಲು ನಿಲ್ಲಿಸಿದ್ದಾರೆ.
ಬಳಿಕ ಸ್ಥಳಕ್ಕೆ ಆಗಮಿಸಿದ ರೈಲ್ವೆ ಸಿಬ್ಬಂದಿ ಮತ್ತು ಅಧಿಕಾರಿಗಳು ಸುಮಾರು ಅರ್ಧ ತಾಸಿನ ಬಳಿಕ ಮರವನ್ನು ತೆರವು ಮಾಡಿದ್ದಾರೆ. ಚಂದ್ರಾವತಿ ಅವರ ಸಮಯ ಪ್ರಜ್ಞೆಯಿಂದ ನೂರಾರು ಜನರ ಜೀವ ಉಳಿದಿದೆ. ಅವರ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.