ಅಡಿಕೆ ಎಂದು ಭಾವಿಸಿ ಸಿಡಿಮದ್ದನ್ನ ಕಲ್ಲಿನಿಂದ ಜಜ್ಜಿದ ಮಹಿಳೆ!

ಊಟದ ಬಳಿಕ ಎಲೆ ಅಡಿಕೆ ಹಾಕುವ ಅಭ್ಯಾಸ ಎಲ್ಲರಿಗೂ ಇರುತ್ತೆ. ಇನ್ನು ಹಳ್ಳಿಗಳಲ್ಲಂತೂ ಟೈಮ್ಪಾಸ್ಗೂ ಎಲೆ ಅಡಿಕೆ ತಿನ್ನುತ್ತಾರೆ. ಇಲ್ಲೊಬ್ಬಳು ಮಹಿಳೆ ಮನೆ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಅಡಕೆ ಮಾದರಿಯ ವಸ್ತುವನ್ನ ತಂದು ಕಲ್ಲಿನಿಂದ ಜಜ್ಜಿದ್ದಾರೆ. ಇದ್ರಿಂದಾಗಿ ಮಹಿಳೆ ಗಂಭೀರ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಡೆವಿಲ್ ಶೂಟಿಂಗ್ ಮುಗಿಸಿ ಥೈಲಾಂಡ್ನಿಂದ ಬೆಂಗಳೂರಿಗೆ ಬಂದ ದರ್ಶನ್!
ಅಷ್ಟಕ್ಕೂ ಆಗಿದ್ದೇನು?
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಈ ಘಟನೆ ನಡೆದಿದೆ. ಗಾವಡಗೆರೆ ಹೋಬಳಿಯ ಹುಲ್ಯಾಳು ಗ್ರಾಮದ ಲೋಕೇಶ್ ಅವರ ಪತ್ನಿ ಕಮಲಮ್ಮ ಶುಕ್ರವಾರ ಮನೆ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಅಡಕೆ ಮಾದರಿಯ ವಸ್ತುವನ್ನು ಮನೆಗೆ ತಂದಿದ್ದಾರೆ. ಅಡಕೆ ಎಂದೇ ಭಾವಿಸಿದ ಕಮಲಮ್ಮ ಕಲ್ಲಿನಿಂದ ಜಜ್ಜಿದ್ದಾರೆ. ಇದ್ರಿಂದಾಗಿ ಸಿಡಿಮದ್ದು ಸ್ಫೋಟಗೊಂಡು ಕಮಲಮ್ಮ ತೀವ್ರ ಗಾಯಗೊಂಡಿದ್ದಾರೆ.
ಸಿಡಿಮದ್ದು ಏಕಾಏಕಿ ಸ್ಫೋಟಗೊಂಡ ಪರಿಣಾಮ ಕಮಲಮ್ಮ ಮುಖ, ಕೈ, ಹೊಟ್ಟೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಜೋರಾದ ಶಬ್ದ ಕೇಳಿದ ಅಕ್ಕಪಕ್ಕದವರು ಧಾವಿಸಿ ತಕ್ಷಣವೇ ಕೆ.ಆರ್.ನಗರ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡು ಹಂದಿ ಬೇಟೆಗೆ ಇಡುವ ಸಿಡಿಮದ್ದಾಗಿರಬಹುದು ಎಂದು ಹೇಳಲಾಗ್ತಿದೆ. ಇದೀಗ ಈ ಪ್ರಕರಣದ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನೋಡಿರಿ

