ಐವರು ಮಕ್ಕಳಿಗೆ ಜನ್ಮ ನೀಡಿದ 7 ಮಕ್ಕಳ ಮಹಾತಾಯಿ – 12 ಮಕ್ಕಳನ್ನ ಹೆತ್ತು ದೇವರ ಆಶೀರ್ವಾದ ಎಂದ ದಂಪತಿ..!
ಆ ತಾಯಿಗೆ ಈಗಾಗ್ಲೇ ಮನೆ ತುಂಬಾ ಮಕ್ಕಳಿದ್ರು. ಏಳು ಮಕ್ಕಳಿದ್ರೂ ಅದ್ಯಾಕೋ ಏನೋ ಇನ್ನೂ ಒಂದು ಮಗು ಇರಲಿ ಅನ್ನಿಸಿತ್ತು. ಹೀಗಾಗಿ ಮತ್ತೊಮ್ಮೆ ಗರ್ಭಿಣಿಯಾಗಿದ್ರು. 8ನೇ ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿ ಈಗ ಒಮ್ಮೆಲೆ ಶಾಕ್ ಆಗಿದ್ದಾರೆ. ಯಾಕಂದ್ರೆ ಏಕಕಾಲಕ್ಕೆ ಐವರು ಮಕ್ಕಳು ಜನಿಸಿದ್ದಾರೆ.
ಹೌದು. ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ಗರ್ಭಿಣಿಯರು ಒಂದು ಮಗುವಿಗೆ ಜನ್ಮ ನೀಡೋದು ಸಾಮಾನ್ಯ. ಕೆಲವೊಮ್ಮೆ ಅವಳಿ, ತ್ರಿವಳಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಇನ್ನೂ ಕೆಲವೊಮ್ಮೆ ಅಚ್ಚರಿ ಎಂಬಂತೆ ನಾಲ್ಕು ಅಥವಾ ಐದು ಮಕ್ಕಳು ಜನಿಸುತ್ತಾರೆ. ಇದೀಗ ದಕ್ಷಿಣ ಪೋಲೆಂಡ್‌ನ ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬಳು ಐದು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಇದನ್ನೂ ಓದಿ :ರೈಲ್ವೇ ಅಧಿಕಾರಿ ಮಗಳ ಶೂ ಮಿಸ್ಸಿಂಗ್ – ಒಂದು ತಿಂಗಳು ‘ಶೂ’ ತನಿಖೆಗಾಗಿ ಶ್ರಮಿಸಿದ ಪೊಲೀಸ್
ಈಗಾಗಲೇ ಏಳು ಮಕ್ಕಳನ್ನು ಹೊಂದಿರುವ 37 ವರ್ಷದ ಡೊಮಿನಿಕಾ ಕ್ಲಾರ್ಕ್ ಎಂಬ ಮಹಿಳೆ ಎಂಟನೇ ಮಗುವನ್ನು ಬಯಸಿ ಗರ್ಭವತಿಯಾಗಿದ್ದರು. ಆದರೆ ಅವರು ಬಯಸಿದ್ದಕ್ಕಿಂತ ಹೆಚ್ಚಾಗಿ ಮಕ್ಕಳನ್ನು ಪಡೆದಿದ್ದಾರೆ. ಸದ್ಯ ಐದು ಮಕ್ಕಳಿಗೆ ಜನ್ಮ ನೀಡಿರುವ ತಾಯಿ ಇದೀಗ ಒಟ್ಟಾರೆ 12 ಮಕ್ಕಳ ತಾಯಿಯಾಗಿದ್ದಾರೆ.
ಕ್ರಾಕೋವ್‌ನ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಧಾರಣೆಯ 28ನೇ ವಾರದಲ್ಲಿ ಸಿಸೇರಿಯನ್ ಮಾಡುವ ಮೂಲಕ ಐದು ಮಕ್ಕಳನ್ನು ಹೆರಿಗೆ ಮಾಡಿಸಿದ್ದಾರೆ. ಈ ಐದು ಮಕ್ಕಳಲ್ಲಿ ಎರಡು ಗಂಡು ಮತ್ತು ಮೂರು ಹೆಣ್ಣು ಶಿಶುಗಳು ಜನಿಸಿದ್ದಾರೆ. ಈ ಮಕ್ಕಳಿಗೆ ಅರಿಯಾನಾ ಡೈಸಿ, ಚಾರ್ಲ್ಸ್ ಪ್ಯಾಟ್ರಿಕ್, ಎಲಿಜಬೆತ್ ಮೇ, ಇವಾಂಜೆಲಿನ್ ರೋಸ್ ಮತ್ತು ಹೆನ್ರಿ ಜೇಮ್ಸ್ ಎಂದು ನಾಮಕರಣ ಸಹ ಮಾಡಲಾಗಿದೆ. ಅವಧಿಪೂರ್ವವಾಗಿ ಜನಿಸಿದ ಈ ಮಕ್ಕಳು ಕೊಂಚ ಉಸಿರಾಟದ ತೊಂದರೆ ಹೊಂದಿದ್ದು, ಚಿಕಿತ್ಸೆ ಪಡೆಯುತ್ತಿವೆ. ಅದನ್ನು ಹೊರತುಪಡಿಸಿ ಐದು ಶಿಶುಗಳೂ ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸದ್ಯ ಶಿಶುಗಳು 710-1,400 ಗ್ರಾಂ ತೂಕ ಹೊಂದಿದ್ದು ಇನ್‌ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದೆ ಎಂದು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥ ರಿಸ್ಜಾರ್ಡ್ ಲಾಟರ್‌ಬಾಚ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಡೊಮಿನಿಕಾ ಕ್ಲಾರ್ಕ್ ಪತಿ ವಿನ್ಸ್ ‘ನಾವು ಎಂಟನೇ ಮಗುವಿನ ನಿರೀಕ್ಷೆಯಲ್ಲಿದ್ದೆವು, ಆದರೆ ದೇವರು ನಮಗೆ ಹೆಚ್ಚಿನ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ’ ಎಂದು ವಿನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ.