ಮಗನಿಗೆ ಸರ್ಕಾರಿ ನೌಕರಿ ಸಿಗಲಿ ಎಂದು ಸಿಡಿ ಸೇವೆ ಹರಕೆ ಹೊತ್ತ ತಾಯಿ – ಹರಕೆ ತೀರಿಸುವಾಗ ಬಲಿಯಾದ ಅಮ್ಮ..!

ಮಗನಿಗೆ ಸರ್ಕಾರಿ ನೌಕರಿ ಸಿಗಲಿ ಎಂದು ಸಿಡಿ ಸೇವೆ ಹರಕೆ ಹೊತ್ತ ತಾಯಿ – ಹರಕೆ ತೀರಿಸುವಾಗ ಬಲಿಯಾದ ಅಮ್ಮ..!

ಮಕ್ಕಳು ಸರ್ಕಾರಿ ಕೆಲಸಕ್ಕೆ ಸೇರಬೇಕು ಅನ್ನೋದು ಹೆಚ್ಚಿನವರಿಗೆ ಆಸೆ ಇದ್ದೇ ಇರುತ್ತೆ. ಹೆತ್ತವರಿಗಂತೂ ಮಕ್ಕಳಿಗೆ ಸರ್ಕಾರಿ ಕೆಲಸ ಸಿಕ್ಕರೆ ಮಗ ಜೀವನದಲ್ಲಿ ಸೆಟಲ್ ಆದ ಅನ್ನೋ ಖುಷಿ. ಇಲ್ಲೊಬ್ಬರು ತಾಯಿಗೂ ಹಾಗೆಯೇ. ತಮ್ಮ ಮಗನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಿಡಿ ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದರಂತೆ. ಅದರಂತೆ ಅವರ ಪುತ್ರನಿಗೆ ಸರ್ಕಾರಿ ನೌಕರಿ ಕೂಡಾ ಸಿಕ್ಕಿತ್ತು. ಅವರ ಮಗ ವಿಧಾನಸೌಧದಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ತಾಯಿ ಸಿಡಿ ಸೇವೆಯ ಹರಕೆ ತೀರಿಸಲು ರೆಡಿಯಾಗಿದ್ದರು. ನಂತರ ನಡೆದಿದ್ದು ಭಾರೀ ದುರಂತ. ಇದು ಮಗನ ಉನ್ನತಿಗಾಗಿ ತಾಯಿಯೊಬ್ಬರು ತನ್ನನ್ನೇ ಬಲಿಕೊಟ್ಟ ಘಟನೆಯೆಂದರೂ ತಪ್ಪಾಗಲಾರದು.

ಇದನ್ನೂ ಓದಿ:  600 ಮೆಟ್ಟಿಲುಗಳ ಮೇಲೆ ಕರ್ಪೂರ ಹಚ್ಚಿ ಹರಕೆ – ಆರೋಗ್ಯ ಚೇತರಿಕೆ ಬಳಿಕ ಸಮಂತಾ ವಿಶೇಷ ಪೂಜೆ!

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದ ನಿವಾಸಿ ಲಕ್ಷ್ಮೀಬಾಯಿ ಪೂಜಾರಿ ತನ್ನ ಮಗ ರಾಯಗೊಂಡನಿಗೆ ಸರ್ಕಾರಿ ನೌಕರಿ ಸಿಕ್ಕರೆ ಸಿಡಿ ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಕಟ್ಟಿಕೊಂಡಿದ್ದರಂತೆ. ರಾಯಗೊಂಡನಿಗೆ ಸರ್ಕಾರಿ ನೌಕರಿ ಸಿಕ್ಕಿದ್ದು ಸದ್ಯ ಆತ ವಿಧಾನಸೌಧದಲ್ಲಿ ಸೇವೆ ಮಾಡುತ್ತಿದ್ದಾರೆ. ಮೊನ್ನೆ ಶನಿವಾರ ಸಿಡಿ ಸೇವೆಯ ಹರಕೆ ತೀರಿಸಲು ಲಕ್ಷ್ಮೀಬಾಯಿ ಸಿಡಿ ಆಡುತ್ತಿದ್ದ ವೇಳೆ ಮೇಲಿಂದ ಬಿದ್ದು ಜೀವ ಕಳೆದುಕೊಂಡಿದ್ದಾರೆ. 55 ವರ್ಷದ ಲಕ್ಷ್ಮೀಬಾಯಿ,  ಸಿಡಿಯಾಡಿ ಹರಕೆ ತೀರಿಸುವಾಗ 50 ಅಡಿ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ. ಲಕ್ಷ್ಮಿಬಾಯಿ ಪೂಜಾರಿ ಎಂಬ ಮಹಿಳೆಯೇ ಮೃತ ದುರ್ದೈವಿ. ಮಹಿಳೆ ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಚುಚ್ಚಿಕೊಂಡು ಅದನ್ನು ಹಗ್ಗದಿಂದ ಕಟ್ಟಿ ಎತ್ತರದ ಕಂಬಕ್ಕೆ ಕಟ್ಟಿರುತ್ತಾರೆ. ಬೆನ್ನಿಗೆ ಕಬ್ಬಿಣದ ಹುಕ್ಕುಗಳನ್ನು ಹಾಕಿ ಆ ಕಂಬಕ್ಕೆ ನೇತಾಡೋ ಮೂಲಕ ಸಿಡಿ ಸೇವೆ ಸಲ್ಲಿಕೆ ಮಾಡಲಾಗುತ್ತದೆ. ಇದೇ ಸೇವೆಯನ್ನು ತಾಂಬಾ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಪಾದಗಟ್ಟೆಯಿಂದ ದೇವಸ್ಥಾನದವರೆಗೂ ಸುಮಾರು 300 ಮೀಟರ್ ಅಂತರ ಇರುವ ಸ್ಥಳದಿಂದ 50 ಅಡಿ ಎತ್ತರದ ಕಂಬಕ್ಕೆ ಜೋತು ಬಿದ್ದು ಸಿಡಿಯಾಡುತ್ತ ಬರುವಾಗ ಆಕಸ್ಮಿಕವಾಗಿ ಹಗ್ಗ ಹರಿದು ಮೇಲಿಂದ ಬಿದ್ದು ಲಕ್ಷ್ಮೀಬಾಯಿ ಸಾವನ್ನಪ್ಪಿದ್ದಾರೆ. ಸಿಡಿ ಸೇವೆ ಸಲ್ಲಿಕೆ ಮಾಡುವ ವೇಳೆ 50 ಅಡಿಯಿಂದ ಲಕ್ಷ್ಮೀಬಾಯಿ ಪೂಜಾರ ಕೆಳಗೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಈ ನಿಟ್ಟಿನಲ್ಲಿ ಇಂಥ ನಿಷೇಧಿತ ಆಚರಣೆಗಳಿಗೆ ತಡೆ ಹಾಕಬೇಕೆಂದು ಜಿಲ್ಲೆಯ ಜನರು ಒತ್ತಾಯ ಮಾಡಿದ್ದಾರೆ.

suddiyaana