ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು ಮಹಿಳೆ ಸಾವು!
ಮಂಗಳೂರು: ತೆಂಗಿನ ಮರವೇರಿ ಕಾಯಿ ಕೀಳುವ ಮಹಿಳಾ ಸಾಧಕಿಯೊಬ್ಬರು, ತಮ್ಮ ತೋಟದಲ್ಲಿ ತೆಂಗಿನ ಮರದಿಂದ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಬೊಳ್ಳಾಜೆ ನಿವಾಸಿ ಸುಚಿತ್ರಾ ಅವರು ಮೃತಪಟ್ಟ ದುರ್ದೈವಿ.
ಸುಚಿತ್ರಾ ಅವರು ಕಳೆದ ಮೂರು ವರ್ಷಗಳಿಂದ ತೆಂಗಿನ ಮರಕ್ಕೆ ಏರಿ ಕಾಯಿ ಕೀಳುವ ಕಾಯಕ ಮಾಡುತ್ತಿದ್ದರು. ಏನಾದರೂ ಸಾಧನೆ ಮಾಡಬೇಕೆನ್ನುವ ಹಠದಲ್ಲಿದ್ದ ಈಕೆ ಆಧುನಿಕವಾಗಿ ಮರ ಹತ್ತುವ ಸಾಧನದ ಪರಿಣತಿ ಪಡೆದು ಮನೆಯಲ್ಲಿ ತಮ್ಮ ತೋಟದ ಅಡಕೆ, ತೆಂಗು ಮರಗಳಿಗೆ ಹತ್ತುವ ಕಾರ್ಯ ಮಾಡುತ್ತಿದ್ದರು. ಮರ ಹತ್ತಿ ರೆಂಬೆ ತೆಗೆಯುವ ಕಾರ್ಯ ಕೂಡಾ ಮಾಡುತ್ತಿದ್ದರು. ಆದರೆ ಬುಧವಾರ ಅವರು ಮನೆಯ ತೋಟದಲ್ಲಿ ತೆಂಗಿನಕಾಯಿ ಕೀಳುವ ವೇಳೆ ಮರದಿಂದ ಬಿದ್ದು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ದೇವರ ನಾಡನ್ನು ಕೇರಳ ಎಂದು ಕರೆಯುವಂತಿಲ್ಲ! – ರಾಜ್ಯಕ್ಕೆ ಹೊಸ ನಾಮಕರಣ?
ಸುಚಿತ್ರಾ ತನ್ನ ಮನೆಯ ತೋಟದ ಕಾರ್ಯ ಮಾತ್ರವಲ್ಲದೆ ಇತರರ ತೋಟಗಳ ತೆಂಗಿನಕಾಯಿ ಕೀಳುವ ಕಾಯಕಕ್ಕೆ ಹೋಗುತ್ತಿದ್ದರು. ಇವರ ಸಾಧನೆಯನ್ನು ಗುರುತಿಸಿ ಸ್ಥಳೀಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದ್ದವು. ಈಕೆಯ ಪತಿ ಪುತ್ತೂರಿನ ಎಂಜಿನಿಯರ್ ಒಬ್ಬರ ಸಹಾಯಕರಾಗಿ ಕೆಲಸ ಮಾತ್ತಿದ್ದು, ಇವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.
ವಾರದ ಹಿಂದೆ ಪತಿ ಬೈಕಿನಲ್ಲಿ ಹೋಗುವಾರ ಮರದ ಟೊಂಗೆಯೊಂದು ಅವರ ತಲೆಯ ಮೇಲೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಪತ್ನಿ ಮರದಿಂದ ಬಿದ್ದು ಮೃತಪಟ್ಟಿದ್ದು ಕುಟುಂಬ ಕಂಗಾಲಾಗಿದೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.