ಜಿರಾಫೆ ಮಲದಿಂದ ನೆಕ್ಲೆಸ್! – ವಿದೇಶದಿಂದ ಪ್ರಾಣಿಗಳ ಲದ್ದಿ ತಂದು ಸಿಕ್ಕಿಬಿದ್ದ ಮಹಿಳೆ!

ಜಿರಾಫೆ ಮಲದಿಂದ ನೆಕ್ಲೆಸ್! – ವಿದೇಶದಿಂದ ಪ್ರಾಣಿಗಳ ಲದ್ದಿ ತಂದು ಸಿಕ್ಕಿಬಿದ್ದ ಮಹಿಳೆ!

ವಿದೇಶಕ್ಕೆ ತೆರಳಿದಾಗ ಅಲ್ಲಿ ತಮಗಿಷ್ಟವಾದ ವಸ್ತ್ರಗಳನ್ನು ನೆನಪಿಗಾಗಿ ಇರಲಿ ಅಂತಾ ತರುತ್ತಾರೆ. ಇನ್ನು ಕೆಲವರು ವಿದೇಶದಿಂದ ಚಿನ್ನಾಭರಣ, ಅಪರೂಪದ ಪ್ರಾಣಿ ಪಕ್ಷಿಗಳನ್ನು ಅಕ್ರಮವಾಗಿ ಸಾಗಾಟ ಮಾಡಿ ಸಿಕ್ಕಿ ಬೀಳುತ್ತಾರೆ. ಇಲ್ಲೊಬ್ಬಳು ವಿದೇಶದಿಂದ ಪ್ರಾಣಿಯೊಂದರ ಮಲ ತಂದು ಸಿಕ್ಕಿ ಬಿದ್ದಿರುವ ವಿಚಿತ್ರ ಘಟನೆ ನಡೆದಿದೆ.

ಅಮೆರಿಕದ ಮಿನ್ನಿಯಾಪೊಲಿಸ್ ನಗರದ ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಚಿತ್ರ ಘಟನೆ ನಡೆದಿದೆ.  ಭದ್ರತಾ ಸಿಬ್ಬಂದಿ ಮಹಿಳೆಯೊಬ್ಬರ ಲಗೇಜ್ ಪರಿಶೀಲನೆ ನಡೆಸಿದ ವೇಳೆ ಆಕೆಯ ಬ್ಯಾಗ್‌ನಲ್ಲಿ ಜಿರಾಫೆಯ ಮಲ ಪತ್ತೆಯಾಗಿದೆ. ಇದನ್ನು ಆಕೆ ಪೂರ್ವ ಆಫ್ರಿಕಾ ದೇಶವಾದ ಕೀನ್ಯಾದಿಂದ ತಂದಿದ್ದರು ಎಂದು ತಿಳಿದು ಬಂದಿದೆ.

ಜಿರಾಫೆ ಮಲ ತಂದಿದ್ದೇಕೆ?

ಮಹಿಳೆಯ ಬ್ಯಾಗ್‌ನಲ್ಲಿ ಜಿರಾಫೆಯ ಮಲ ಪತ್ತೆಯಾಗುತ್ತಿದ್ದಂತೆ ಆಕೆಯನ್ನು ಕಸ್ಟಮ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಳಿಕ ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆ ನೆಕ್ಲೆಸ್ ಮಾಡಿಕೊಳ್ಳಲು ಈ ಮಲವನ್ನು ತಂದಿದ್ದಾಗಿ ಮಹಿಳೆ ಹೇಳಿದ್ದಾರೆ.

ಇದನ್ನೂ ಓದಿ: ಲವ್‌ ಆದ ಆರೇ ದಿನಕ್ಕೆ ಮದುವೆ.. ಕೈ ಹಿಡಿದ ಗಂಡ ಒಂದೇ ತಿಂಗಳಲ್ಲಿ ಕೈಕೊಟ್ಟು ಪರಾರಿ!

ಕೀನ್ಯಾದಿಂದ ಹೊತ್ತು ತಂದಿದ್ದ ಜಿರಾಫೆ ಮಲ!

ಸೆಪ್ಟೆಂಬರ್ 29 ರಂದು ನಡೆದ ಈ ಘಟನೆ ನಡೆದಿದ್ದು, ತಡವಾಗಿ ಈ ಪ್ರಕರಣ ಬೆಳಕಿಗೆ ಬಂದಿದೆ. ಕೀನ್ಯಾಗೆ ಪ್ರವಾಸಕ್ಕೆ ತೆರಳಿದ್ದ ವೇಳೆ ನಾನು ಜಿರಾಫೆಗಳ ಮಲವನ್ನು ಸಂಗ್ರಹಿಸಿ ತಂದಿರುವುದಾಗಿ ಸುಂಕ ಅಧಿಕಾರಿಗಳ ವಿಚಾರಣೆ ವೇಳೆ ಮಹಿಳೆ ಹೇಳಿದ್ದಾರೆ. ಈ ಮಲದಿಂದ ಆಭರಣ ತಯಾರಿಕೆ ಮಾಡುತ್ತೇನೆ ಎಂದು ಮಹಿಳೆ ಹೇಳಿದ್ದಾರೆ.

ಕಡವೆ ಮಲ ತಂದಿದ್ದ ಮಹಿಳೆ!

ಮಹಿಳೆ ಇದೇ ಮೊದಲ ಬಾರಿಗೆ ಪ್ರಾಣಿಗಳ ಮಲ ತಂದಿಲ್ಲ. ಆಕೆ ಇದಕ್ಕೂ ಮುನ್ನವೂ ಪ್ರಾಣಿಗಳ ಮಲ ತಂದಿದ್ದಳು.  ಈ ಹಿಂದೆ ಕೂಡಾ ತಾನು ಕಡವೆಯ ಮಲವನ್ನು ಸಂಗ್ರಹಿಸಿ ತಂದು ಅದರಲ್ಲಿ ಆಭರಣ ಮಾಡಿದ್ದಾಗಿ ಮಹಿಳೆ ವಿಚಾರಣೆ ವೇಳೆ ಹೇಳಿದ್ದಾರೆ.

ವಿದೇಶದಿಂದ ಪ್ರಾಣಿಗಳ ಮಲ ತರುವುದು ಅಪರಾಧ!

ಅಮೆರಿಕದ ಕೃಷಿ ಇಲಾಖೆ ಅಧಿಕಾರಿಗಳು ಮಹಿಳೆ ತಂದ ಜಿರಾಫೆ ಮಲವನ್ನು ಪರಿಶೀಲಿಸಿ ಅದನ್ನು ಕ್ರಿಮಿನಾಶಕ ಬಳಸಿ ಈಗಾಗಲೇ ಅದನ್ನು ನಾಶ ಮಾಡಿರೋದಾಗಿ ಹೇಳಿದ್ದಾರೆ. ಈ ರೀತಿಯ ವಸ್ತುಗಳನ್ನು ಬೇರೆ ದೇಶ, ಬೇರೆ ಖಂಡಗಳಿಂದ ಅಮೆರಿಕ ದೇಶಕ್ಕೆ ತರೋದು ಅಪಾಯಕಾರಿ ಎಂದು ಅಮೆರಿಕ ಸರ್ಕಾರ ಹೇಳಿದೆ. ಈ ರೀತಿಯ ವಸ್ತುಗಳು ನನ್ನಲ್ಲಿ ಇವೆ ಎಂದು ಮೊದಲೇ ಘೋಷಣೆ ಮಾಡದೆ ಅಮೆರಿಕ ದೇಶವನ್ನು ಪ್ರವೇಶ ಮಾಡೋದು ಕೂಡಾ ಅಪರಾಧ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೀತಿಯ ವಸ್ತುಗಳನ್ನು ಮುಟ್ಟುವ, ಸಂಗ್ರಹಿಸುವ ಹಾಗೂ ತನ್ನ ಜೊತೆ ತರುವ ವೇಳೆ ಹಲವು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಇನ್ನು ಈ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಕೆ ಮಾಡೋದು, ಅದನ್ನು ಬಳಸೋದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣ ಆಗಬಹುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವನ್ಯ ಜೀವಿಗಳ ತ್ಯಾಜ್ಯವನ್ನು ಅಮೆರಿಕ ದೇಶದ ಒಳಗೆ ತರುವ ಮುನ್ನ ಸೂಕ್ತ ಪರವಾನಗಿ ಪಡೆದಿರಬೇಕು. ಕೀನ್ಯಾ ದೇಶವು ಆಫ್ರಿಕಾ ಸ್ವೈನ್ ಫ್ಲೂನಿಂದ ಬಳಲುತ್ತಿದೆ. ಇಲ್ಲಿನ ಪ್ರಾಣಿಗಳೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತವೆ. ಕಾಲು ಬಾಯಿ ರೋಗ ಸೇರಿದಂತೆ ಹಲವು ರೀತಿಯ ರೋಗಗಳಿಂದ ಬಳಲುತ್ತಿರುತ್ತವೆ. ಇಂಥಾ ಪ್ರಾಣಿಗಳ ಮಲವನ್ನು ಸಂಗ್ರಹಿಸಿ ತರೋದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ ಎಂದು ಅಮೆರಿಕ ಸರ್ಕಾರ ಹೇಳಿದೆ.

ಮಹಿಳೆಗೆ ದಂಡ ವಿಧಿಸಿದ ಅಧಿಕಾರಿಗಳು!

ಇನ್ನು ಆಫ್ರಿಕಾದಿಂದ ಜಿರಾಫೆ ಮಲವನ್ನು ಹೊತ್ತು ತಂದು ಸುಂಕ ಅಧಿಕಾರಿಗಳ ವಿಚಾರಣೆ ವೇಳೆ ಸತ್ಯ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಮಹಿಳೆಗೆ ಯಾವುದೇ ರೀತಿಯ ನಿರ್ಬಂಧ ಹೇರದೇ ಇರಲು ಸರ್ಕಾರ ತೀರ್ಮಾನಿಸಿದೆ. ಆದಾಗ್ಯೂ ಮಹಿಳೆಗೆ 300 ಅಮೆರಿಕನ್ ಡಾಲರ್‌ನಿಂದ 1000 ಅಮೆರಿಕ ಡಾಲರ್‌ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ವನ್ಯ ಜೀವಿಗಳ ಮಲವನ್ನು ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಈ ದಂಡ ವಿಧಿಸಲು ತೀರ್ಮಾನಿಸಲಾಗಿದೆ.

Shwetha M