ಬಿಸಿಲಿನ ಝಳಕ್ಕೆ ರಾಜ್ಯದ ಜನ ತತ್ತರ! – ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು!

ಬಿಸಿಲಿನ ಝಳಕ್ಕೆ ರಾಜ್ಯದ ಜನ ತತ್ತರ! – ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು!

ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಜನರು ಮನೆಯಿಂದ ಹೊರ ಬರಲು ಯೋಚಿಸುವಂತಾಗಿದೆ. ಅಷ್ಟರ ಮಟ್ಟಿಗೆ ಬಿಸಿಲಿನ ಝಳ ಹೆಚ್ಚಾಗಿದೆ. ಬಿಸಿಲಿನ ತಾಪಕ್ಕೆ ಬಳಲಿ ಬೆಂಡಾಗಿದ್ದ ಜನರಿಗೆ ಮತ್ತೊಂದು ಶಾಕ್‌ ಎದುರಾಗಿದೆ. ಮುಂದಿನ 3 ತಿಂಗಳು ಬಿಸಿಲಿನ ಕಾಟ ಇರಲಿದ್ದು, ಉತ್ತರ ಒಳನಾಡಿಗೆ ಉಷ್ಣಗಾಳಿಯ ಕೆಟ್ಟ ಪರಿಣಾಮ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ತವರು ಜಿಲ್ಲೆ ಬಿಟ್ಟು ಬೇರೆ ಕ್ಷೇತ್ರಗಳಿಗೆ ಜಂಪ್ ಆದವರೆಷ್ಟು? – ಬದಲಾಗುತ್ತಾ ಲೆಕ್ಕಾಚಾರ?

ಈ ವರ್ಷ ರಾಜ್ಯದಲ್ಲಿ ಮಳೆ ಕೊರತೆ ಉಂಟಾಗಿದೆ. ಕುಡಿಯುವ ನೀರಿಗೂ ತೊಂದರೆ ಎದುರಾಗಿದೆ. ತಾಪಮಾನ ಕೂಡ ಏರಿಕೆ ಕಂಡಿದೆ. ಏಪ್ರಿಲ್‌ನಿಂದ ಜೂನ್‌ವರೆಗೆ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ. ದೇಶದ ಮಧ್ಯಭಾಗದಲ್ಲಿ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ತಾಪಮಾನದ ಸಾಧ್ಯತೆ ಹೆಚ್ಚಿರಲಿದೆ. ದೇಶದ ಬಹುತೇಕ ಕಡೆಗಳಲ್ಲಿ ಏಪ್ರಿಲ್‌ನಲ್ಲಿ ಗರಿಷ್ಠ ತಾಪಮಾನ ವಾಡಿಕೆಗಿಂತ ಹೆಚ್ಚಿರುವ ಸಾಧ್ಯತೆ ಇದೆ. ಈ ಸಾಧ್ಯತೆ ದಕ್ಷಿಣ ಭಾರತದ ಮಧ್ಯಭಾಗದಲ್ಲಿ ಜಾಸ್ತಿ ಇರಲಿದೆ.

ಗುಜರಾತ್, ಮಹಾರಾಷ್ಟ್ರದ ಮಧ್ಯಭಾಗ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‌ಗಢದ ಉತ್ತರ ಭಾಗ ಮತ್ತು ಆಂಧ್ರ ಪ್ರದೇಶದಲ್ಲಿ ಬಿಸಿಗಾಳಿಯ ಪರಿಣಾಮವು ತೀರಾ ಕೆಟ್ಟದಾಗಿರಲಿದೆ ಎಂದು ಎಚ್ಚರಿಕೆ ನೀಡಿದೆ. ಮಧ್ಯ ಭಾರತ, ಉತ್ತರದ ಬಯಲು ಪ್ರದೇಶಗಳಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಹಾಗೂ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ಬಿಸಿಗಾಳಿಯು  ಏಪ್ರಿಲ್‌ನಲ್ಲಿ ವಾಡಿಕೆಗಿಂತ ಹೆಚ್ಚಾಗಿರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ಪ್ರದೇಶಗಳಲ್ಲಿ ಬಿಸಿಗಾಳಿಯ ಪರಿಣಾಮವು ಒಂದರಿಂದ ಮೂರು ದಿನಗಳವರೆಗೆ ಇರುವುದು ವಾಡಿಕೆ. ಆದರೆ ಈ ಬಾರಿ ಅದು ಎರಡರಿಂದ ಎಂಟು ದಿನಗಳವರೆಗೆ ಇರಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Shwetha M