ಗಂಡನ ಮನೆಯಲ್ಲಿ ಕಿರುಕುಳಕ್ಕೊಳಗಾದ ಮಗಳು – ಪಟಾಕಿ ಸಿಡಿಸಿ, ವಾದ್ಯ, ಮೆರವಣಿಗೆಯಲ್ಲಿ ಪತಿ ಮನೆಯಿಂದ ಕರೆತಂದ ತಂದೆ!

ಗಂಡನ ಮನೆಯಲ್ಲಿ ಕಿರುಕುಳಕ್ಕೊಳಗಾದ ಮಗಳು – ಪಟಾಕಿ ಸಿಡಿಸಿ, ವಾದ್ಯ, ಮೆರವಣಿಗೆಯಲ್ಲಿ ಪತಿ ಮನೆಯಿಂದ ಕರೆತಂದ ತಂದೆ!

ತಂದೆಗೆ ಮಗಳಂದ್ರೆ ಅಚ್ಚು ಮೆಚ್ಚು. ಮಗಳ ಮದುವೆಗಾಗಿ ಜೀವನ ಪರ್ಯಂತ ದುಡಿದು ಹಣ ಕೂಡಿಡುತ್ತಾರೆ. ಅದ್ದೂರಿಯಾಗಿ ವಿವಾಹ ಮಾಡಿ ಗಂಡನ ಮನೆಗೆ ಕಳುಹಿಸಿಕೊಡುತ್ತಾರೆ. ಆದರೆ ಇಲ್ಲೊಬ್ಬ ತಂದೆ ಗಂಡನನ್ನು ಬಿಟ್ಟು ಬಂದ ಮಗಳನ್ನು ತವರು ಮನೆಗೆ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಬ್ಯಾಂಡ್‌, ವಾದ್ಯ ಮೆರವಣಿಗೆಯೊಂದಿಗೆ ಆಕೆಯನ್ನು ಮನೆಗೆ ಕರೆಸಿಕೊಂಡಿದ್ದಾರೆ.

ಏನಿದು ಘಟನೆ?

ಇಲ್ಲೊಬ್ಬರು ತನ್ನ ಮುದ್ದಿನ ಮಗಳ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದರು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಮಗಳಿಗೆ ತನ್ನ ಗಂಡನ ನೀಚ ಬುದ್ದಿ ಗೊತ್ತಾಗಿದೆ. ಅದನ್ನೆಲ್ಲಾ ಸಹಿಸಿಕೊಂಡು ಆಕೆ ಆತನ ಜೊತೆಗೆ ಇದ್ದಳು. ಆದರೆ ಆತ ವರದಕ್ಷಿಣೆ ನೀಡುವಂತೆ  ಕಿರುಕುಳ ಕೊಡುತ್ತಿದ್ದಂತೆ ಆಕೆ ತನ್ನ ನೋವನ್ನೆಲ್ಲಾ ಕುಟುಂಬಸ್ಥರ ಬಳಿ ತಿಳಿಸಿದ್ದಾಳೆ. ತಾನು ಗಂಡನನ್ನು ಬಿಟ್ಟು ಬರುವುದಾಗಿ ತಿಳಿಸಿದ್ದಾಳೆ. ಇದಕ್ಕೆ ಸಮ್ಮತಿ ಸೂಚಿಸಿದ ಆಕೆಯ ತಂದೆ ಆಕೆಯ ಪತಿ ಮನೆಯಿಂದ ಪಟಾಕಿ ಸಿಡಿಸಿ, ವಾದ್ಯ ಹಾಗೂ ಮೆರವಣಿಗೆಯಲ್ಲಿ ಕರೆತಂದಿದ್ದಾರೆ. ಇದರ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ.

ಈ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ. ತಂದೆ ಪ್ರೇಮ್ ಗುಪ್ತಾ ತನ್ನ ಮಗಳನ್ನು ಸಾಕ್ಷಿ ಗುಪ್ತಾಳನ್ನು ಮೆರವಣಿಗೆ ಮೂಲಕ ತವರು ಮನೆಗೆ ಕರೆತಂದಿದ್ದಾರೆ. 2020ರ ಏಪ್ರಿಲ್ ತಿಂಗಳಲ್ಲಿ ಸಾಕ್ಷಿಯನ್ನು ಜಾರ್ಖಂಡ್ ವಿದ್ಯುತ್ ವಿತರಣಾ ನಿಗಮದಲ್ಲಿ ಸಹಾಯಕ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಚಿನ್ ಕುಮಾರ್‍ಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆ ಬಳಿಕ ಸಚಿನ್ ಹಾಗೂ ಆತನ ಮನೆಯವರು ಸಾಕ್ಷಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಸಚಿನ್ ಕೂಡ ಸಾಕ್ಷಿ ಜೊತೆ ಜಗಳವಾಡಿ ಮನೆಯಿಂದ ಹೊರಹಾಕಿದ್ದನು. ಆದರೂ ಜಗ್ಗದೆ ಸಾಕ್ಷಿ ಪತಿ ಜೊತೆಯೇ ವಾಸವಾಗಿದ್ದಳು. ಮದುವೆಯಾಗಿ ವರ್ಷದ ಬಳಿಕ ಸಚಿನ್‍ಗೆ ಈ ಮೊದಲೇ ಎರಡು ಮದುವೆಯಾಗಿರುವ ವಿಚಾರ ಸಾಕ್ಷಿ ಗಮನಕ್ಕೆ ಬಂದಿದೆ. ಇದೆಲ್ಲಾ ತಿಳಿದರೂ ಏನೂ ತಿಳಿಯದಂತೆ ಸಾಕ್ಷಿ ಸುಮ್ಮನಿದ್ದಳು.

ಇದನ್ನೂ ಓದಿ: ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ, ರಂಗೋಲಿ ನಿಷೇಧಿಸಿದ ಸರ್ಕಾರ !

ಇತ್ತ ಪತಿ ಹಾಗೂ ಆತನ ಪೋಷಕರ ಕಿರುಕುಳ ಹೆಚ್ಚಾದ ಬಳಿಕ ತವರು ಮನೆಗೆ ವಿಷಯ ತಿಳಿಸಿದಳು. ತನಗೆ ಸಂಬಂಧ ಕಡಿದುಕೊಳ್ಳುವ ನಿರ್ಧಾರ ಮಾಡಿ ಮನೆಯವರಿಗೆ ಹೇಳಿದಳು. ಅಂತೆಯೇ ಮಗಳ ನಿರ್ಧಾರಕ್ಕೆ ಸೈ ಎಂದ ತಂದೆ ಪ್ರೇಮ್. ಗಂಡನ ಮನೆಯಿಂದ ಆಕೆ ಬರುವಾಗ ಮೆರವಣಿಗೆ ಮೂಲಕ ಸಂಗೀತ ವಾದ್ಯ ಮೇಳಗಳೊಂದಿಗೆ ಕರೆತಂದಿದ್ದಾರೆ. ಜೊತೆಗೆ ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ್ದಾರೆ.

ಪ್ರೇಮ್ ಗುಪ್ತಾ ತಮ್ಮ ಮಗಳನ್ನು ಕರೆತರುವ ವಿಡಿಯೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಜೊತೆಗೆ ಪೋಷಕರು ತಮ್ಮ ಮಗಳನ್ನು ಬಹಳ ಆಡಂಬರದಿಂದ ಮದುವೆ ಮಾಡಿಕೊಡುತ್ತಾರೆ. ಒಂದು ವೇಳೆ ಮದುವೆ ಬಳಿಕ ಸಂಗಾತಿ ಮತ್ತು ಅವರ ಕುಟುಂಬದವರು ಆಕೆಗೆ ಕಷ್ಟ ನೀಡಲು ಪ್ರಾರಂಭಿಸಿದರೆ, ನಿಮ್ಮ ಮಗಳನ್ನು ಅತ್ಯಂತ ಗೌರವದಿಂದ ಮನೆಗೆ ಕರೆದುಕೊಂಡು ಬರಬೇಕು. ಯಾಕೆಂದರೆ ಎಲ್ಲಾ ಹೆಣ್ಣು ಮಕ್ಕಳು ಅಮೂಲ್ಯ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

Shwetha M